ಕುಮಾರಸ್ವಾಮಿ ಅದ್ಯಾವ ಡ್ರಗ್ಸ್ ತೆಗೆದುಕೊಂಡು ಇಷ್ಟು ದಿನ ಮಲಗಿದ್ರು?
ಮೈಸೂರು, ಸೆ 5: ಸ್ಯಾಂಡಲ್ ವುಡ್ ನಲ್ಲಿ ಭಾರೀ ಸದ್ದು ಮಾಡುತ್ತಿರುವ ಡ್ರಗ್ಸ್ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿದ್ದ ಹೇಳಿಕೆಯ ಬಗ್ಗೆ, ವಿಧಾನ ಪರಿಷತ್ ಸದಸ್ಯ, ಬಿಜೆಪಿಯ ಎಚ್.ವಿಶ್ವನಾಥ್ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.
"ನಿಮ್ಮ ಸರಕಾರ ಬಿದ್ದ ಒಂದು ವರ್ಷದ ನಂತರ ಡ್ರಗ್ಸ್ ಬಗ್ಗೆ ಮಾತನಾಡುತ್ತಿದ್ದೀರಾ, ಅದ್ಯಾವ ಡ್ರಗ್ಸ್ ತೆಗೆದುಕೊಂಡು ಇಷ್ಟು ದಿನ ಮಲಗಿದ್ರಿ"ಎಂದು ವಿಶ್ವನಾಥ್, ಎಚ್ಡಿಕೆಗೆ ತಿರುಗೇಟು ನೀಡಿದ್ದಾರೆ.
"ಮೈತ್ರಿ ಸರಕಾರ ಉರುಳಲು ಡ್ರಗ್ಸ್ ಹಣ ಉಪಯೋಗವಾಗಿತ್ತು. ನನ್ನ ಕಾಲದಲ್ಲೇ ಇದರ ಬೇರು ಕಿತ್ತು ಹಾಕಲು ಪ್ರಯತ್ನಿಸಿದ್ದೆ"ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಎಚ್ಡಿಕೆ ಈ ಹೇಳಿಕೆಗೆ, ಡಾ.ಸುಧಾಕರ್, ಜಗದೀಶ್ ಶೆಟ್ಟರ್, ಸಿ.ಟಿ.ರವಿ ಆದಿಯಾಗಿ, ಬಿಜೆಪಿ ಮುಖಂಡರು ತಿರುಗಿ ಬಿದ್ದಿದ್ದರು.

"ಬಹುಷಃ ನೀವು ಮತ್ತು ಸಿದ್ದರಾಮಯ್ಯನವರು ಡ್ರಗ್ಸ್ ತೆಗೆದುಕೊಂಡಿರಬಹುದು. ಅಧಿಕಾರ ಅಮಲು ನಿಮ್ಮಿಬ್ಬರ ತಲೆಗೇರಿತ್ತು. ನಿಮ್ಮ ಅಮಲಿನಿಂದಲೇ ನಿಮ್ಮ ಸರಕಾರ ಬಿದ್ದು ಹೋಯಿತು"ಎಂದು ವಿಶ್ವನಾಥ್ ತಿರುಗೇಟು ನೀಡಿದ್ದಾರೆ.
"ನಿಮ್ಮ ಸರಕಾರದ ಅವಧಿಯಲ್ಲೇ ಸೂಕ್ತ ಕ್ರಮ ತೆಗೆದುಕೊಂಡಿದ್ದರೆ, ಹೌದು ಎನ್ನಬಹುದಿತ್ತು. ಅದು ಬಿಟ್ಟು, ಒಂದು ವರ್ಷದ ನಂತರ ಈಗ ಮಾತನಾಡುತ್ತಿದ್ದೀರಾ. ಸುಮ್ಮನೆ ಸಾರ್ವಜನಿಕವಾಗಿ ನಗೇಪಾಟಲಿಗೆ ಗುರಿಯಾಗಬೇಡಿ"ಎನ್ನುವ ಸಲಹೆಯನ್ನು ವಿಶ್ವನಾಥ್, ಎಚ್ಡಿಕೆಗೆ ನೀಡಿದ್ದಾರೆ.
"ಡ್ರಗ್ಸ್ ಮಾಫಿಯಾ ಹಲವು ಹಂತದಲ್ಲಿ ಬೆಳೆದು ಸೆಲೆಬ್ರಿಟಿಗಳವರೆಗೂ ಬಂದು ನಿಂತಿದೆ. ಒಬ್ಬ ಸೆಲೆಬ್ರಿಟಿಯೇ ಅದನ್ನು ಬಯಲು ಮಾಡಿದ್ದು ವಿಶೇಷ ಹಾಗೂ ಸೂಜಿಗ. ಪೊಲೀಸ್ ಇಲಾಖೆ ಮಾಡಬೇಕಿದ್ದ ಕೆಲಸವನ್ನು ಆ ಸೆಲೆಬ್ರಿಟಿ ಮಾಡಿದ್ದಾನೆ" ಎಂದು ಎರಡು ದಿನದ ಹಿಂದೆ ವಿಶ್ವನಾಥ್ ಹೇಳಿದ್ದರು. ತಿಳಿಸಿದರು.












Click it and Unblock the Notifications