'ಸಂಸತ್ ಚುನಾವಣೆಗೆ ಯಾವ ಪಕ್ಷವೇ ದೋಸ್ತಿಯಾದರೂ ಕುಸ್ತಿಗೆ ಹೆದರಲ್ಲ'
ಮೈಸೂರು, ಜೂನ್ 16 : ಮುಂಬರುವ ಲೋಕಸಭಾ ಚುನಾವಣೆಗೆ ಯಾವುದೇ ಪಕ್ಷ ವಿಲೀನವಾದರೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಶನಿವಾರ ಹೇಳಿದ್ದಾರೆ. ಬಿಜೆಪಿಯ ಸಂಪರ್ಕ್ ಫಾರ್ ಸಮರ್ಥನ್ (ಕೇಂದ್ರ ಸರಕಾರದ ನಾಲ್ಕು ವರ್ಷದ ಸಾಧನೆ ತಿಳಿಸುವ ಅಭಿಯಾನ) ನಲ್ಲಿ ಮಾತನಾಡಿದರು.
ಇಲ್ಲಿನ ಸುತ್ತೂರು ಕ್ಷೇತ್ರಕ್ಕೆ ಭೇಟಿ ನೀಡಿ, ಕೇಂದ್ರ ಸರಕಾರದ ನಾಲ್ಕು ವರುಷದ ಅಧಿಕಾರಾವಧಿ ಸಾಧನೆ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಿ, ಮಾತನಾಡಿದರು. ನಾಲ್ಕು ವರುಷದಲ್ಲಿ ಪ್ರಧಾನಿ ಮೋದಿ ಮೈಸೂರಿಗೆ ಕೊಟ್ಟಿದ್ದೇನು ಎಂಬುದನ್ನು ಪುಸ್ತಕದಲ್ಲಿ ವಿವರಿಸಿದ್ದೇನೆ. ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ 48 ವರುಷಗಳ ಕಾಲ ದೇಶಕ್ಕೆ ಕೊಟ್ಟಿದ್ದೇನು, ಮೋದಿ ಸರಕಾರ 48 ತಿಂಗಳಿನಲ್ಲಿ ದೇಶಕ್ಕೆ ಕೊಟ್ಟಿರುವುದನ್ನು ಹೋಲಿಕೆ ಮಾಡಿ ತಿಳಿಸಿದ್ದೇವೆ ಎಂದರು.

ಮೈಸೂರು ಅಭಿವೃದ್ಧಿಗೆ ಪ್ರತಾಪ್ ಸಿಂಹ ಏನು ಮಾಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರವನ್ನು ನಾಲ್ಕು ಪುಟದ ಕರಪತ್ರದಲ್ಲಿ ತಿಳಿಸಿದ್ದೇನೆ. ಲೋಕಸಭೆ ಚುನಾವಣೆಗೆ ಇಂದಿನಿಂದ ಪ್ರಚಾರವನ್ನು ಶುರು ಮಾಡಿದ್ದೇನೆ ಎಂದರು.

ಆ ಬಳಿಕ ಮೈಸೂರು ಅರಮನೆಗೆ ತೆರಳಿ, ಪ್ರಮೋದಾದೇವಿ ಒಡೆಯರ್ ಅವರಿಗೂ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಾಲ್ಕು ವರುಷದ ಸಾಧನೆಯ ವಿವರಗಳುಳ್ಳ ಪುಸ್ತಕವನ್ನು ಹಾಗೂ ಅಭಿವೃದ್ಧಿಯ ಕುರಿತಾದ ಕಿರುಹೊತ್ತಿಗೆ ನೀಡಿದರು.











Click it and Unblock the Notifications