ಚೆನ್ನೈಗೆ ಮೈಸೂರಿನ ಯಾವ ಸಂಸ್ಥೆಯಿಂದ ಆಹಾರ ರವಾನೆ?
ಮೈಸೂರು, ಡಿಸೆಂಬರ್,04 : ತಮಿಳುನಾಡಿನ ಚೆನ್ನೈನಲ್ಲಿ ಸುರಿದ ಕುಂಭದ್ರೋಣ ಮಳೆಯಿಂದ ಜಲಪ್ರಳಯ ಎದುರಾಗಿದ್ದು, ಅಲ್ಲಿನ ಲೆಕ್ಕವಿಲ್ಲದಷ್ಡು ಮಂದಿ ಬದುಕಿದರೆ ಸಾಕು ಎಂದು ಪರಿತಪಿಸುತ್ತಿದ್ದಾರೆ. ಕಂಡ ಕಂಡ ದೇವರಿಗೆಲ್ಲಾ ಕೈ ಮುಗಿಯುತ್ತಿದ್ದಾರೆ. ತುತ್ತು ಅನ್ನ, ನೀರಿಗಾಗಿ ಕಾಯುತ್ತಾ ಕುಳಿತಿದ್ದಾರೆ. ಈ ಪರಿಸ್ಥಿತಿ ಅರಿತ ಮೈಸೂರಿನ ಸಂಸ್ಥೆಯೊಂದು ಚೆನ್ನೈಗೆ ಆಹಾರ ರವಾನೆ ಮಾಡುತ್ತಿದೆ.
ಮೈಸೂರು ಜಿಲ್ಲೆಯ ಪ್ರಸಿದ್ಧ ಆಹಾರ ಮತ್ತು ಸಂಶೋಧನಾಲಯ (ಸಿಎಫ್ ಟಿಆರ್ ಐ-Central Food Technological Research Institution) ಪ್ರವಾಹ ಸಂತ್ರಸ್ತರಿಗೆ ಆಹಾರದ ಪೊಟ್ಟಣಗಳನ್ನು ಕಳುಹಿಸಿಕೊಟ್ಟಿದೆ. ನೆರೆಯಲ್ಲಿ ಸಿಲುಕಿ ನೊಂದ ಜೀವಗಳಿಗೆ ಆಹಾರದ ಮೂಲಕ ಸಮಾಧಾನ ನೀಡುತ್ತಿದ್ದು, ಚೆನ್ನೈ ಜನರಲ್ಲಿ ಬದುಕುವ ಭರವಸೆಯನ್ನು ಹೆಚ್ಚಿಸಿದ್ದಾರೆ.
ವಾಯುಭಾರ ಕುಸಿತದಿಂದಾಗಿ ಮಳೆ ಎಡೆಬಿಡದೆ ಸುರಿಯುತ್ತಿದ್ದು ಈ ಶತಮಾನವೇ ಕಂಡರಿಯದಂತ ದುರಂತಕ್ಕೆ ಚೆನ್ನೈ ಸಾಕ್ಷಿಯಾಗಿದೆ. ಇದೀಗ ಇಲ್ಲಿಗೆ ಇಡೀ ದೇಶವೇ ಸಹಾಯದ ಹಸ್ತ ಚಾಚುತ್ತಿದೆ.[ಚೆನ್ನೈ ಪ್ರವಾಹದಲ್ಲಿ ಸಿಲುಕಿ ತತ್ತರಗೊಂಡ ಕನ್ನಡಿಗರು]
ಎಲ್ಲ ಕಳೆದುಕೊಂಡು ಸಂತ್ರಸ್ತರಾಗಿರುವ ಜನ ತುತ್ತು ಅನ್ನಕ್ಕೂ ಪರದಾಡುವಂತಾಗಿದೆ. ಇದನ್ನು ಮನಗಂಡು ಸಂತ್ರಸ್ತ ಜನರಿಗೆ ತುತ್ತು ನೀಡುವಲ್ಲಿ ಮುಂದಾಗಿರುವ ಮೈಸೂರಿನ ಎಫ್‍ಟಿಆರ್ಐ ಈಗಾಗಲೇ ಆಹಾರದ ಪೊಟ್ಟಣಗಳನ್ನು ರವಾನಿಸಿದೆ.

ಮೈಸೂರು ಆಹಾರ ಮತ್ತು ಸಂಶೋಧನಾಲಯ ಏನೆಲ್ಲಾ ಆಹಾರ ರವಾನಿಸಿದೆ?
ಮೈಸೂರು ಜಿಲ್ಲೆಯ ಆಹಾರ ಮತ್ತು ಸಂಶೋಧನಾಲಯ ಆಹಾರ ವಿತರಿಸುವ ಪುಣ್ಯ ಕಾರ್ಯ ಹೊತ್ತುಕೊಂಡಿದೆ. ಈ ಮೊದಲ ಹಂತದಲ್ಲಿ ಸುಮಾರು 60 ಸಾವಿರ ಚಪಾತಿ, ಟಮೋಟೋ ಚಟ್ನಿ, ಉಪ್ಪಿನಕಾಯಿ, 11 ಸಾವಿರ ಬನ್ ಹಾಗೂ ಬಿಸ್ಕೆಟ್ ಪ್ಯಾಕೆಟ್‍ಗಳು, 5000 ಕಾರ್ನ್ ಫ್ಲಾಕ್ಸ್ ಹಾಗೂ 25000 ಕುಡಿಯುವ ನೀರಿನ ಬಾಟೆಲ್ ಗಳನ್ನು ಕಳುಹಿಸಿ ಕೊಟ್ಟಿದೆ.[ಪ್ರವಾಹ ಸಂತ್ರಸ್ತರಿಗೆ ಬೆಂಗಳೂರಿಗರು ನೆರವು ನೀಡೋದು ಎಲ್ಲಿ?]

ಈ ಮೊದಲು ಯಾವ ಸಂದರ್ಭಗಳಲ್ಲಿ ಆಹಾರ ರವಾನಿಸಿತ್ತು?
ಸಿಎಫ್ ಟಿಆರ್ ಐ ಈಗಾಗಲೇ ದೇಶದ ಯಾವುದೇ ಭಾಗದಲ್ಲಿ ಪ್ರಕೃತಿ ವಿಕೋಪ ಸಂಭವಿಸಿದರೂ ಸಿದ್ಧ ಆಹಾರವನ್ನು ರವಾನಿಸುವ ಕೆಲಸ ಮಾಡುತ್ತಿದೆ. ಈ ಮೊದಲು ಉತ್ತರಖಾಂಡ್ ಪ್ರವಾಹ, ತಮಿಳುನಾಡಿನ ಸುನಾಮಿ ಹಾಗೂ ಕಾರ್ಗಿಲ್ ಯುದ್ಧದ ಸಂದರ್ಭದಲ್ಲೂ ಸಿದ್ಧ ಆಹಾರವನ್ನು ಕಳುಹಿಸಿ ಕೊಟ್ಟಿದ್ದನ್ನು ನಾವು ಸ್ಮರಿಸಬಹುದು.[ಚೆನ್ನೈದುರಂತ: ಆಮ್ಲಜನಕ ಸಿಗದೆ, ಆಸ್ಪತ್ರೆಯಲ್ಲಿ 14 ರೋಗಿಗಳು ಸಾವು]

ಮೈಸೂರಿನ ಮತ್ತೆ ಯಾವ ಸಂಸ್ಥೆ ಚೆನ್ನೈಗೆ ಆಹಾರ ಕಳುಹಿಸಿಕೊಟ್ಟಿದೆ?
ಮೈಸೂರಿನ ಸಿದ್ದಾರ್ಥ ನಗರದಲ್ಲಿರುವ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ (ಡಿಎಫ್ಆರ್ಎಲ್- Defence Food Research Laboratory) ಕೂಡ ಒಂದು ವಾರದ ಹಿಂದೆಯೇ ಮೂರೂವರೆ ಟನ್ ಸಿದ್ಧ ಆಹಾರವನ್ನು ತಮಿಳುನಾಡಿಗೆ ಸಾಗಿಸಿದೆ. ಇದರಲ್ಲಿ ಉಪ್ಪಿಟ್ಟಿನ ಮಿಕ್ಸ್, ಕೇಸರಿಬಾತ್ ಮಿಕ್ಸ್, ಬಟಾಣಿ ಗೊಜ್ಜು, ಇನ್‍ಸ್ಟಂಟ್ ಖೀರು ಇದ್ದು ಇದೆಲ್ಲವೂ ಸಂತ್ರಸ್ಥರನ್ನು ತಲುಪಿದೆ.[ಚೆನ್ನೈ: ತಾಯಿ ಶವದ ಮುಂದೆ 20 ಗಂಟೆ ಕೂತಿದ್ದ ಮಗಳು]

ಡಿಎಫ್ಆರ್ ಎಲ್ ಸಂಸ್ಥೆ ಪಿಆರ್ ಒ ಡಿ.ಮಲ್ಲೇಶ್ ಹೇಳುವುದೇನು?
1.5 ಟನ್ ಸಿದ್ಧ ಆಹಾರವನ್ನು ಚೆನ್ನೈಗೆ ಶುಕ್ರವಾರ ರವಾನಿಸಲಾಗುವುದು ಇದರಲ್ಲಿ ವೆಜ್ ಪಲಾವ್, ಟಮೋಟೋ ರೈಸ್, ಸೂಜಿ ಹಲ್ವಾ ಹಾಗೂ ಬಟಾಣಿ ಕೂರ್ಮಾ ಇರಲಿದೆ. ಮಳೆ ಮುಂದುವರೆದರೆ ಮತ್ತಷ್ಟು ಆಹಾರ ಕಳುಹಿಸಲು ಸಿದ್ದರಿರುವುದಾಗಿ ಡಿಎಫ್ಆರ್ಎಲ್ ಸಂಸ್ಥೆಯ ಪಿಆರ್ಓ ಡಿ.ಮಲ್ಲೇಶ್ ತಿಳಿಸಿದ್ದಾರೆ.[ಚೆನ್ನೈ ಜಲ ಪ್ರಳಯ ಮಾನವ ನಿರ್ಮಿತ, ಬೆಂಗಳೂರಿಗೆ ಎಚ್ಚರಿಕೆ!]












Click it and Unblock the Notifications