ಮೈಸೂರಿನಲ್ಲಿ ಅಧಿಕಾರಿಗಳು ವಶಪಡಿಸಿಕೊಂಡ ಮರಳು ಏನಾಯ್ತು?
ಮೈಸೂರು, ನವೆಂಬರ್, 05 : ಕಪಿಲಾ ನದಿ ತೀರ ಹಾಗೂ ಹಿನ್ನೀರಿನ ಬಳಿ ನಡೆಯುತ್ತಿರುವ ಅಕ್ರಮ ಮರಳು ಮಾಫಿಯಾದಲ್ಲಿ ಬೇಲಿ ಎದ್ದು ಹೊಲ ಮೆಯ್ಯುವಂತಹ ಪರಿಸ್ಥಿತಿ ಆಗಿದೆ. ಏಕೆಂದರೆ ಮರಳು ದಂಧೆ ತಡೆಗಟ್ಟುತ್ತೇವೆ ಎಂದ ಪ್ರಭಾವಿ ವ್ಯಕ್ತಿಗಳೇ ಇದರಲ್ಲಿ ಕೈಕುಲುಕಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ.
ಹೆಚ್.ಡಿ.ಕೋಟೆಯ ಹೈರಿಗೆ ಸಮೀಪದ ಕಪಿಲಾ ತೀರದಲ್ಲಿ ಅಕ್ರಮ ಮರಳನ್ನು ಸಂಗ್ರಹಿಸಿಟ್ಟಿರುವ ಮಾಹಿತಿ ಮೇರೆಗೆ ವೃತ್ತ ನಿರೀಕ್ಷಕ ಹಾಲ್‍ಮೂರ್ತಿರಾವ್ ಅವರು ದಾಳಿ ನಡೆಸಿದ್ದರು. ಆಗ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸುಮಾರು 12 ಟ್ರ್ಯಾಕ್ಟರ್ ಗೂ ಹೆಚ್ಚು ಮರಳನ್ನು ವಶಪಡಿಸಿಕೊಂಡಿದ್ದರು. ಬಳಿಕ ತಹಸೀಲ್ದಾರ್ ಗೆ ಮಾಹಿತಿ ನೀಡಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಶಕ್ಕೆ ನೀಡಿದ್ದರು.[ಮರಳು ಮಾಫಿಯಾ ಎಂದರೇನು? ಏನಿದರ ಮರ್ಮ?]

ಮರಳು ವಶಪಡಿಸಿಕೊಂಡ ಬಳಿಕ ಆದದ್ದೇನು?
ಹಾಲ್ಮೂರ್ತಿರಾವ್ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ನೀಡಿದ ಬಳಿಕ ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಮುರುಳೀಧರ್, ವ್ಯವಸ್ಥಾಪಕ ರಮೇಶ್, ಹೆಚ್.ಡಿ.ಕೋಟೆ ಠಾಣಾ ಸಬ್‍ಇನ್ಸ್ ಪೆಕ್ಟರ್ ಹೆಚ್.ಎನ್.ಬಾಲಕೃಷ್ಣ ಮರಳನ್ನು ಟ್ರಾಕ್ಟರ್ ಗಳಲ್ಲಿ ತುಂಬಿಸಿಕೊಂಡು ಬಂದ ಪೊಲೀಸ್ ಠಾಣೆಯ ಮುಂಭಾಗದ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದರು. ಬಳಿಕ ಅಧಿಕಾರಿಗಳ ನಡುವೆ ಮಾತುಕತೆ ನಡೆದಿದೆ. ಬಳಿಕ ಇದ್ದಕ್ಕಿದ್ದಂತೆಯೇ ಮರಳು ತುಂಬಿದ ಟ್ರ್ಯಾಕ್ಟರ್ ಗಳು ಠಾಣೆ ಮುಂಭಾಗದಿಂದ ನಾಪತ್ತೆಯಾಗಿವೆ.[ಕನಿಷ್ಠ ಲಾರಿಯನ್ನಾದ್ರೂ ಉಳಿಸಿದರಲ್ಲ ಪುಣ್ಯಾತ್ಮ ಪೊಲೀಸರು!]
ಟ್ರಾಕ್ಟರ್ ಗಳು ಕಾಣದಿರುವುದರ ಬಗ್ಗೆ ಹೆಚ್.ಡಿ.ಕೋಟೆ ಎಸ್‍ಐ ಅವರನ್ನು ವಿಚಾರಿಸಿದರೆ ಶಾಸಕರ ಆದೇಶದಂತೆ ವಿವಿಧ ಕಾಮಗಾರಿಗಳಿಗೆ ಲೋಕೋಪಯೋಗಿ ಇಲಾಖಾ ಅಧಿಕಾರಿಗಳು ಮರಳನ್ನು ತುರ್ತು ಹರಾಜು ಮಾಡಿದ್ದಾರೆ ಎಂದು ಉತ್ತರ ನೀಡಿದ್ದಾರೆ.
ಈ ಎಲ್ಲಾ ಘಟನೆಯನ್ನು ಬಹಳ ಹತ್ತಿರದಿಂದ ಕಂಡ ಹಲವಾರು ಮಂದಿ ಅಧಿಕಾರಿಗಳ ಕಾರ್ಯವೈಖರಿಯ ಮೇಲೆ ಸಂಶಯ ವ್ಯಕ್ತಪಡಿಸಿದ್ದು, ಕಪಿಲಾ ನದಿ ಒಡಲು ಬರಿದಾಗುವ ಮುನ್ನ ಎಚ್ಚರ ವಹಿಸಬೇಕೆಂಬ ಅಳಲನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.












Click it and Unblock the Notifications