ಮೈಸೂರಿನಲ್ಲಿ ನೂತನ ಡಿಸಿ ಕಚೇರಿ ಕಾರ್ಯಾರಂಭ, ಏನಿದರ ವಿಶೇಷತೆ?, ಇಲ್ಲಿದೆ ವಿವರ
ಮೈಸೂರು, ಜೂನ್, 10: ಕಡೆಗೂ ಮೈಸೂರಿನಲ್ಲಿ ಹೊಸದಾಗಿ ಕಟ್ಟಿದ್ದ ಡಿಸಿ ಕಚೇರಿ ಕಾರ್ಯಾರಂಭ ಮಾಡಿದ್ದು, 5 ವರ್ಷದ ಕಾಯುವಿಕೆಗೆ ಮುಕ್ತಿ ಸಿಕ್ಕಂತಾಗಿದೆ. 2018ರಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ನೂತನ ಡಿಸಿ ಕಚೇರಿಯನ್ನು ಉದ್ಘಾಟಿಸಿದ್ದರು. 84.66 ಕೋಟಿ ರೂ. ವೆಚ್ಚದಲ್ಲಿ ಹೊಸ ಡಿಸಿ ಕಟ್ಟಡವನ್ನು ನಿರ್ಮಾಣ ಮಾಡಲಾಗಿತ್ತು. ಈ ಮಧ್ಯೆ ಕಟ್ಟಡದ ಮೊದಲ ಮಹಡಿಯ ಒಂದು ಕೊಠಡಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯನ್ನು ಇತ್ತೀಚಿಗೆ ಎಸ್.ಟಿ. ಸೋಮಶೇಖರ್ ಅವರು ಆರಂಭಿಸಿದ್ದರು.
ಐದು ವರ್ಷಗಳಿಂದ ಉದ್ಘಾಟನೆಗೊಂಡರೂ ಸಂಪೂರ್ಣ ಸೇವೆಗೆ ಲಭ್ಯವಾಗದ ನೂತನ ಜಿಲ್ಲಾಧಿಕಾರಿ ಕಚೇರಿ ಕಡೆಗೂ ಗುರುವಾರದಿಂದ ಅಧಿಕೃತವಾಗಿ ಆರಂಭಗೊಂಡಿದೆ. ನಗರದ ಸಿದ್ಧಾರ್ಥ ನಗರದಲ್ಲಿರುವ ನೂತನ ಜಿಲ್ಲಾಧಿಕಾರಿ ಕಚೇರಿಯಲ್ಲೇ ಇನ್ಮುಂದೆ ಕಾರ್ಯ ನಿರ್ವಹಿಸುತ್ತೇನೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.

ಕಟ್ಟಡದ ವಿಶೇಷತೆ ಏನು?
ಹೊಸ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಒಟ್ಟು 11 ಇಲಾಖೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಕಟ್ಟಡವು ಎರಡು ಲಿಫ್ಟ್‌ಗಳನ್ನು ಹೊಂದಿದ್ದು, ಅದು ಏಕಕಾಲದಲ್ಲಿ 12 ಜನರನ್ನು ಸಾಗಿಸುತ್ತದೆ. ಅಲ್ಲದೆ, ಕ್ಯಾಪ್ಸುಲ್ ಮಾದರಿಯ ಗಾಜಿನ ಲಿಫ್ಟ್‌ಗಳನ್ನು ಹೊಂದಿದೆ.
ಕಟ್ಟಡವು ಒಟ್ಟು 22,920 ಚದರ ಮೀಟರ್ ಇದೆ. ಇದರಲ್ಲಿನ ನೆಲ ಮಾಳಿಗೆ 9,150 ಚದರ ಮೀಟರ್, ನೆಲ ಮಹಡಿ 4,720 ಚದರ ಮೀಟರ್, ಮೊದಲ ಮಹಡಿ 4,500 ಚದರ ಮೀಟರ್, ಎರಡನೇ ಮಹಡಿ 4,550 ಚದರ ಮೀಟರ್ ಇದೆ. ಇಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆಯನ್ನೂ ಸಹ ಮಾಡಲಾಗಿದೆ.
ಪ್ರಸ್ತುತ ನೂತನ ಡಿಸಿ ಕಚೇರಿಯಲ್ಲೇ ಆರು ಇಲಾಖೆಗಳು ಕಾರ್ಯ ನಿರ್ವಹಿಸುತ್ತಿದ್ದವು. ಆದರೆ, ಪೂರ್ಣ ಪ್ರಮಾಣದಲ್ಲಿ ಡಿಸಿ ಕಚೇರಿ ಸ್ಥಳಾಂತರಗೊಂಡಿರಲಿಲ್ಲ. ಇದೀಗ ಡಿಸಿ ಡಾ.ಕೆ.ವಿ.ರಾಜೇಂದ್ರ ಅವರು ಸಾರ್ವಜನಿಕರು ಇನ್ಮುಂದೆ ಏನಾದರೂ ಕೆಲಸ ಆಗಬೇಕಾದರೆ ಹೊಸ ಕಚೇರಿಯಲ್ಲೇ ತಮ್ಮನ್ನು ಭೇಟಿ ಮಾಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಮ್ಯೂಸಿಯಂ ಮಾಡುವ ಉದ್ದೇಶ ಇದೆ
ಹಳೆ ಜಿಲ್ಲಾಧಿಕಾರಿ ಕಚೇರಿಯನ್ನು ರೆವಿನ್ಯೂ ಮ್ಯೂಸಿಯಂ ಮಾಡಬೇಕು ಎಂಬ ಆಲೋಚನೆ ಇದೆ. ಆಕ್ಯಾಲಜಿ ಮೈಸೂರು ಸಂಸ್ಥಾನದ ಆಡಳಿತ ಮತ್ತು ಕಂದಾಯ ಇಲಾಖೆಯ ಹಳೆ ದಾಖಲೆಗಳನ್ನು ಇಟ್ಟುಕೊಂಡು ರೆವಿನ್ಯೂ ಮ್ಯೂಸಿಯಂ ಮಾಡಿದರೆ ಹೇಗೆ ಎಂಬ ಚಿಂತನೆ ಇದೆ. ಇದರಿಂದ ಪ್ರವಾಸಿಗರು ಒಮ್ಮೆ ಬಂದು ಮ್ಯೂಸಿಯಂ ನೋಡಿದಂತೆ ಆಗುತ್ತದೆ ಎಂದರು.
ಇನ್ನು ಇದು ನಗರದ ಹೃದಯ ಭಾಗದಲ್ಲೇ ಇರುವುದರಿಂದ ಎಲ್ಲರಿಗೂ ಬರಲು ಅನುಕೂಲ ಆಗುತ್ತದೆ. ಆದರೆ, ಅಧಿಕೃತವಾಗಿ ಯಾವುದೂ ನಿರ್ಧಾರ ಆಗಿಲ್ಲ. ಈ ಸಂಬಂಧ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಬಳಿ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.
ಯಾವೆಲ್ಲಾ ಕಚೇರಿ ಇದ್ದವು?
ಜಿಲ್ಲಾ ಭೂ ದಾಖಲೆಗಳ ಉಪನಿರ್ದೇಶಕರ ಕಚೇರಿ, ಜಿಲ್ಲಾ ನಗರ ಅಭಿವೃದ್ಧಿ ಕೋಶ (ಡಿಯುಡಿಸಿ), ಜಿಲ್ಲಾ ಸಾಂಖ್ಯಿಕ ಅಧಿಕಾರಿ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ (ಬಿಸಿಎಂ), ಜಿಲ್ಲಾ ಅಧಿಕಾರಿ ಕಚೇರಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಹಾಗೂ ಮುಜರಾಯಿ ಇಲಾಖೆ, ತಹಸೀಲ್ದಾರ್ ಕಚೇರಿಗಳು, ಜಿಲ್ಲಾ ಮಟ್ಟದ ಕಚೇರಿಗಳ ಸಮುಚ್ಚಯ ಕಟ್ಟಡಕ್ಕೆ ಸ್ಥಳಾಂತರಗೊಂಡು ಪೂರ್ಣ ಪ್ರಮಾಣದ ಸಿಬ್ಬಂದಿಗಳೊಂದಿಗೆ ಕಾರ್ಯ ಆರಂಭಿಸಿದ್ದವು.
ಆದರೂ ಉಳಿದ ಇಲಾಖೆಗಳು ಹಳೆ ಜಿಲ್ಲಾಧಿಕಾರಿ ಕಚೇರಿಯಲ್ಲೇ ಕಾರ್ಯನಿರ್ವಹಿಸುತ್ತಿದ್ದವು. ಹೊಸ ಕಚೇರಿಯಲ್ಲಿ ಕೆಲವೊಂದು ಸೌಲಭ್ಯ ಇರದೆ ಉಳಿದ ಕೆಲಸಗಳು ಬಾಕಿ ಇದ್ದವು.












Click it and Unblock the Notifications