ಕಾಂಗ್ರೆಸ್ ಸೇರ್ಪಡೆ ಬಗ್ಗೆ ಬಿಎಸ್‌ವೈ ಆಪ್ತ ಕಾಪು ಸಿದ್ದಲಿಂಗಸ್ವಾಮಿ ಹೇಳಿದ್ದೇನು?
ಮೈಸೂರು, ಏಪ್ರಿಲ್ 27: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಆಪ್ತರಾದ ಕಾಪು ಸಿದ್ದಲಿಂಗಸ್ವಾಮಿ ಅವರು ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿಗಳ ಹರಡಿದ್ದ ಹಿನ್ನೆಲೆಯಲ್ಲಿ ಈ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ.
ಮೈಸೂರು ಭಾಗದಲ್ಲಿ ಬಿಎಸ್ ಯಡಿಯೂರಪ್ಪನವರ ನಂಬಿಕಸ್ತ ಆಪ್ತ ಎಂದೇ ಗುರುತಿಸಿಕೊಂಡಿರುವ ಕಾಪು ಸಿದ್ದಲಿಂಗಸ್ವಾಮಿ ಅವರು ಈ ಬಾರಿಯ ವಿಧಾನಸಭಾ ಚುನಾವಣೆಗೆ ವರುಣಾ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಬಿಜೆಪಿ ಹೈಕಮಾಂಡ್ ವರುಣಾದಲ್ಲಿ ಸಚಿವ ವಿ ಸೋಮಣ್ಣ ಅವರನ್ನು ಕಣಕ್ಕೆ ಇಳಿಸಿತ್ತು. ಇದರಿಂದ ಸಹಜವಾಗಿ ಬೇಸರಗೊಂಡಿದ್ದ ಕಾಪು ಸಿದ್ದಲಿಂಗಸ್ವಾಮಿ ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿಗಳು ಗುರುವಾರ ಹರಡಿದ್ದವು.

ಕಾಂಗ್ರೆಸ್ ಸೇರುವ ಬಗ್ಗೆ ಸ್ಪಷ್ಟನೆ ನೀಡಿರುವ ಅವರು ನನ್ನ ಕತ್ತು ಸೀಳಿದರೂ ನಾನು ಕಾಂಗ್ರೆಸ್‌ಗೆ ಸೇರುವುದಿಲ್ಲ, ಎಲ್ಲರೂ ಸೇರಿಕೊಂಡು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ವರುಣಾ ವಿಧಾನಸಭಾ ಕ್ಷೇತ್ರದಿಂದ ಕಾಪು ಸಿದ್ದಲಿಂಗಸ್ವಾಮಿ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲೇ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಕಾಪು ನಿಲ್ಲುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಆ ಬಾರಿಯೂ ಟಿಕೆಟ್ ಮಿಸ್ ಆಗಿತ್ತು.
ವರುಣಾ ವಿಧಾನಸಭಾ ಚುನಾವಣೆಗೆ ವಿ ಸೋಮಣ್ಣ ಅವರನ್ನು ಅಭ್ಯರ್ಥಿಯಾಗಿ ಘೋಷಣೆಯಾಗುತ್ತಿದ್ದಂತೆ ಸೋಮಣ್ಣ ಅವರು ಮೊದಲು ಕಾಪು ಸಿದ್ದಲಿಂಗಸ್ವಾಮಿ ಅವರನ್ನು ಭೇಟಿಯಾಗಿದ್ದರು. ಕಾಪು ಬಳಿ ಸಹಾಯ ಕೋರಿದ್ದ ಅವರು ನಿನ್ನನ್ನೇ ನಂಬಿದ್ದೇನೆ. ದಯಮಾಡಿ ಕೈಬಿಡಬೇಡ ಎಂದು ಹೇಳಿದ್ದರು. ಅಲ್ಲದೆ ನೀನು ಮುಂದಾಳತ್ವ ವಹಿಸಿ ಚುನಾವಣಾ ಪ್ರಚಾರ ನಡೆಸಬೇಕು ಎಂದು ಹೇಳಿದ್ದರು.
ನಿನ್ನ ಬಗ್ಗೆ ನಾನು ಏನು ಅಂದುಕೊಂಡಿರಲಿಲ್ಲ. ಈ ಚುನಾವಣೆಯಲ್ಲಿ ನನ್ನ ಬೆಂಬಲಿಸು, ನೀನೆ ನನ್ನ ಸೈನ್ಯದ ಕಮಾಂಡರ್ ಆಗಿ ಕೆಲಸ ಮಾಡು. ನಿನ್ನನ್ನೇ ನಂಬಿದ್ದೇನೆ ದಯಮಾಡಿ ಕೈಬಿಡಬೇಡ ಎಂದು ಕೈಮುಗಿದು ಮನವಿ ಮಾಡಿದ್ದರು. ಇತ್ತೀಚೆಗೆ ಮೈಸೂರಿನಲ್ಲಿ ಬಿಎಸ್ ಯಡಿಯೂರಪ್ಪ ಅವರನ್ನು ಕಾಪು ಸಿದ್ದಲಿಂಗಸ್ವಾಮಿ ಭೇಟಿ ಮಾಡಿದ್ದರು.

ಆಗ ಬಿಎಸ್ ಯಡಿಯೂರಪ್ಪನವರು ಹಿಂದೆ ಮುಂದೆ ನೋಡುವ ಮಾತೇ ಇಲ್ಲ. ವರುಣಾದಲ್ಲಿ ವಿ ಸೋಮಣ್ಣ ಅವರು ಗೆಲ್ಲಬೇಕು ಎಂದು ಕಾಪು ಸಿದ್ದಲಿಂಗಸ್ವಾಮಿಗೆ ಸೂಚನೆ ನೀಡಿದ್ದರು. ಅದರಂತೆ ಅವರು ಸೋಮಣ್ಣ ಪರ ಪ್ರಚಾರವನ್ನು ಕೈಗೊಂಡಿದ್ದರು.












Click it and Unblock the Notifications