ವಾರಾಂತ್ಯದಲ್ಲಿ ಮೈಸೂರು ಪ್ರವಾಸ ವಾಹನ ಸಂಚಾರದ ನಿರ್ಬಂಧದ ಮಾಹಿತಿ
ಆಷಾಡ ಶುಕ್ರವಾರದ ದಿನ ಮತ್ತು ಚಾಮುಂಡೇಶ್ವರಿ ವರ್ಧಂತಿ ದಿನದಂದು ಹಾಗೂ ಆಷಾಡ ಮಾಸದ ಶನಿವಾರ ಮತ್ತು ಭಾನುವಾರಗಳಂದು ವಾಹನ ದಟ್ಟಣೆಯನ್ನು ತಡೆಯಲು ಮೈಸೂರು ಜಿಲ್ಲಾಡಳಿತ ಈಗಾಗಲೇ ರೂಪು ರೇಷೆಗಳನ್ನು ಸಿದ್ಧಪಡಿಸಿಕೊಂಡಿದೆ.
ಭಕ್ತಾಧಿಗಳು ಮತ್ತು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ತಮ್ಮ ವಾಹನಗಳಲ್ಲಿ ಬರಲಿದ್ದು, ಇದರಿಂದಾಗಿ ಚಾಮುಂಡಿ ಬೆಟ್ಟದಲ್ಲಿ ವಾಹನ ನಿಲುಗಡೆಗ ಸ್ಥಳಾವಕಾಶವಿಲ್ಲದ ಚಾಮುಂಡಿ ಬೆಟ್ಟದ ರಸ್ತೆಯಲ್ಲಿ ಸಂಚಾರ ದಟ್ಟಣ ಆಗುತ್ತದೆ. ಇದರಿಂದ ಸಾರ್ವಜನಿಕರ ವಾಹನಗಳ ಸುಗಮ ಸಂಚಾರಕ್ಕೆ ತೀವ್ರ ಅಡಚಣೆಯುಂಟಾಗುತ್ತದೆ.

ಚಾಮುಂಡಿ ಬೆಟ್ಟದ ರಸ್ತೆಯಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಹಾಗೂ ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಚಾಮುಂಡಿ ಬೆಟ್ಟಕ್ಕೆ ಬರುವ ವಾಹನಗಳ ಸಂಚಾರದ ಮೇಲೆ ಈ ಕೆಳಕಂಡ ದಿನಗಳಂದ ನಿರ್ಬಂಧವನ್ನು ವಿಧಿಸುವುದು ಅತ್ಯಾವಶ್ಯಕವಾಗಿದೆ.
| ಕ್ರಮ ಸಂಖ್ಯೆ | ಆಷಾಡಾ ಶುಕ್ರವಾರ | ಆಷಾಢಾ ಶನಿವಾರ | ಆಷಾಡ ಭಾನುವಾರ | ಚಾಮುಂಡಿ ವರ್ಧಂತಿ |
| 1 | 12-07-2024 | 13-7-2024 | 14-7-2024 | 27-07-2024 |
| 2 | 19-07-2024 | 20-7-2024 | 21-7-2024 | |
| 3 | 26-7-2024 | 27-7-2024 | 28-7-2024 | |
| 4 | 02-07-2024 | 03-08-2024 | 04-08-2024 |
ಶನಿವಾರ ಮತ್ತು ಭಾನುವಾರದ ದಿನಗಳಂದು ಚಾಮುಂಡಿ ಬೆಟ್ಟದಲ್ಲಿ ಭಕ್ತಾದಿಗಳಿಗೆ ಸುಗಮವಾಗಿ ದರ್ಶನ ವ್ಯವಸ್ಥೆ ಮತ್ತು ಚಾಮುಂಡಿ ಬೆಟ್ಟದ ಮೇಲೆ ವಾಹನ ನಿಲುಗಡೆ ತೊಂದರೆಯನ್ನು ನಿವಾರಿಸುವ ಸಂಬಂಧ ವಾಹನಗಳ ಸಂಚಾರದ ಮೇಲೆ ನಿರ್ಬಂಧ ವಿಧಿಸಲಾಗಿದೆ. ಭಾರತೀಯ ಮೋಟಾರು ವಾಹನ ಕಾಯ್ದೆ 1988 ಕಲಂ 115 ಹಾಗೂ ಸೆಕ್ಷನ್(3) ಆಫ್ ಕರ್ನಾಟಕ ಟ್ರಾಫಿಕ್ ಕಂಟ್ರೋಲ್ ಆಕ್ಟ್ 1960 ರಲ್ಲಿ ದತ್ತವಾಗಿರುವ ಅಧಿಕಾರದಂತೆ ಆದೇಶ ಹೊರಡಿಸಿಲಾಗಿದೆ.
ಉಚಿತ ಬಸ್
ಆಷಾಡ ಶುಕ್ರವಾರ. ಶನಿವಾರ ಮತ್ತು ಭಾನುವಾರದಂದು ಹಾಗೂ ಚಾಮುಂಡೇಶ್ವರಿ ವರ್ಧಂತಿ ದಿನದಂದು ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಭಕ್ತಾಧಿಗಳು ತಮ್ಮ ವಾಹನಗಳನ್ನು ಲಲಿತಮಹಲ್ ಮೈದಾನದಲ್ಲಿ ನಿಲುಗಡೆ ಮಾಡಬಹುದು. ನಂತರ ಜಿಲ್ಲಾಡಳಿತ ವತಿಯಿಂದ ವ್ಯವಸ್ಥೆ ಮಾಡಿರುವ ಉಚಿತ ಕೆ.ಎಸ್.ಆರ್.ಟಿ.ಸಿ ಬಸ್‌ಗಳಲ್ಲಿ ದೇವಸ್ಥಾನಕ್ಕೆ ತೆರಳಬೇಕಾಗಿರುತ್ತದೆ. ಆಷಾಡ ಶುಕ್ರವಾರದಂದು ಮಾತ್ರ ಉಚಿತ ಬಸ್ ಸೌಲಭ್ಯ ಬೆಳಗಿನ ಜಾವ 05.00 ಗಂಟೆಯಿಂದ ರಾತ್ರಿ 8.00 ಗಂಟೆಯವರೆಗೆ ವ್ಯವಸ್ಥೆ ಮಾಡಲಾಗಿದೆ. ವಾರಾಂತ್ಯದಲ್ಲಿ ಈ ವ್ಯವಸ್ಥೆ ಲಭ್ಯ ವಿಲ್ಲ.
ಆಷಾಡ ಶುಕ್ರವಾರ, ಶನಿವಾರ ಮತ್ತು ಭಾನುವಾರದ ದಿನಗಳಂದು ಚಾಮುಂಡಿಬೆಟ್ಟಕ್ಕೆ ಹೋಗುವ ಭಕ್ತಾದಿಗಳ ವಾಹನಗಳು ಚಾಮುಂಡಿಬೆಟ್ಟದ ತಾವರಕಟ್ಟೆಯಿಂದ, ಉತ್ತನಹಳ್ಳಿ ರಸ್ತೆ ಕಡೆಯಿಂದ ಮತ್ತು ಇಂಡಸ್‌ವ್ಯಾಲಿ ರಸ್ತೆ ಮೂಲಕ ಚಾಮುಂಡಿ ಬೆಟ್ಟಕ್ಕೆ ಹೋಗುವ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಪಾರ್ಕಿಂಗ್ ವ್ಯವಸ್ಥೆ ಎಲ್ಲಿ?
ಚಾಮುಂಡಿ ಬೆಟ್ಟಕ್ಕೆ ಹೋಗುವ ಭಕ್ತಾದಿಗಳು ತಮ್ಮ ವಾಹನಗಳನ್ನು ಲಲಿತಮಹಲ್ ರಸ್ತೆಯಲ್ಲಿರುವ ಲಲಿತಮಹಲ್ ಮೈದಾನದ ಖಾಲಿ ಸ್ಥಳದಲ್ಲಿ ಸಂಚಾರ ಪೊಲೀಸರು ನೀಡುವ ಸೂಚನೆಯ ಅನುಸಾರ ಪಾರ್ಕ್ ಮಾಡಬೇಕು.
ಲಲಿತಾದ್ರಿಪುರದ ರಸ್ತೆ ಕಡೆಯಿಂದ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತಾದಿಗಳು ಅವರ ವಾಹನಗಳನ್ನು ಲಲಿತಾದ್ರಿಪುರದ ರಸ್ತೆ ಮೂಲಕ ಲಲಿತಮಹಲ್ ಮೈದಾನ ತಲುಪಿ ಲಲಿತಮಹಲ್ ಮೈದಾನದ ನಿಗದಿಪಡಿಸಿದ ನಿಲುಗಡೆ ಸ್ಥಳದಲ್ಲಿ ನಿಲುಗಡೆ ಮಾಡಬೇಕು. ಇನ್ನು ಉತ್ತನಹಳ್ಳಿ ರಸ್ತೆ ಕಡೆಯಿಂದ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತಾದಿಗಳು ನಂಜನಗೂಡು ರಸ್ತೆ ಮೂಲಕ ಎಂ.ಎಲ್.ಸೋಮಸುಂದರಂ ವೃತ್ತ- ಮಹಾರಾಣಾ ಪ್ರತಾಪ ಸಿಂಹ ವೃತ್ತ- ಸಂಗೊಳ್ಳಿ ರಾಯಣ್ಣ ವೃತ್ತ- ಲಲಿತಮಹಲ್ ರಸ್ತೆ ಮೂಲಕ ಲಲಿತಮಹಲ್ ಮೈದಾನದ ಖಾಲಿ ಸ್ಥಳದಲ್ಲಿ ವಾಹನಗಳನ್ನು ನಿಲುಗಡೆ ಮಾಡಬೇಕು.

ಭಕ್ತಾದಿಗಳು ವಾಹನಗಳನ್ನು ನಿಲುಗಡೆ ಮಾಡಿದ ಸ್ಥಳದಿಂದ ಚಾಮುಂಡಿ ಬೆಟ್ಟಕ್ಕೆ ಹೋಗಲು ಸರ್ಕಾರಿ ನಗರ ಸಾರಿಗೆ ಬಸ್ಸುಗಳಲ್ಲಿ ಬೆಟ್ಟಕ್ಕೆ ಪ್ರಯಾಣ ಮಾಡಬೇಕು ಹಾಗೂ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ವಾಪಸ್ ಅವರುಗಳ ವಾಹನಗಳ ನಿಲುಗಡೆ ಸ್ಥಳಕ್ಕೆ ಬಂದು ಸೇರಬೇಕು.
ದೇವಸ್ಥಾನದಲ್ಲಿ ಉಚಿತ ಪ್ರಸಾದ ವಿನಿಯೋಗದ ವಾಹನಗಳಿಗೆ ಈ ಬಾರಿ ಚಾಮುಂಡಿ ಬೆಟ್ಟದಲ್ಲಿ ಬಸ್ ನಿಲ್ದಾಣದ ಎದುರು ಇರುವ ಪಾರ್ಕಿಂಗ್ ಜಾಗದಲ್ಲಿ ವ್ಯವಸ್ಥೆ ಮಾಡಿದ್ದು ಪ್ರಸಾದ ವಿನಿಯೋಗದ ವಾಹನಗಳಿಗೆ ಜಿಲ್ಲಾಡಳಿತದಿಂದ ನೀಡುವ ಪಾಸ್ ಕಡ್ಡಾಯವಾಗಿರುತ್ತದೆ. ಸದರಿ ವಾಹನಗಳು ನಿಗದಿಪಡಿಸಿದ ಸಮಯದಲ್ಲಿಯ ಪ್ರಸಾದ ವಿನಿಯೋಗ ಮಾಡಬೇಕಾಗಿರುತ್ತದೆ. ಮುಂಚಿತವಾಗಿ ಅಥವಾ ತಡವಾಗಿ ಬಂದ ಪ್ರಸಾದ ವಿನಿಯೋಗದ ವಾಹನಗಳಿಗೆ ಪ್ರವೇಶ ನೀಡಲಾಗುವುದಿಲ್ಲ.
ದೇವಸ್ಥಾನಕ್ಕೆ ಬರುವ ಗಣ್ಯರ, ಅತಿಗಣ್ಯರ ವಾಹನಗಳು, ಕರ್ತವ್ಯದ ಮೇಲೆ ತೆರಳುವವರ ವಾಹನಗಳು ಮತ್ತು ಮಾಧ್ಯಮ ವಾಹನಗಳಿಗೆ ಚಾಮುಂಡಿ ಬೆಟ್ಟದ ಮೇಲೆ ತೆರಳಲು ಅವಕಾಶವಿದ್ದು ಸದರಿ ವಾಹನಗಳಿಗ ಚಾಮುಂಡಿ ಬೆಟ್ಟದಲ್ಲಿ ಈಗಾಗಲೇ ಬಹುಮಹಡಿ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿರುತ್ತದೆ.
ಭಕ್ತಾಧಿಗಳು ಚಾಮುಂಡಿ ಬೆಟ್ಟವನ್ನು ಕಾಲು ನಡಿಗೆಯಲ್ಲಿ ಹೋಗುವ ಭಕ್ತಾಧಿಗಳು ತಮ್ಮ ವಾಹನಗಳನ್ನು ಪಿಂಜರಪೋಲ್ ಮುಂಭಾಗದಲ್ಲಿ ಇರುವ ಮೈದಾನದ ಪಾರ್ಕಿಂಗ್ ಸ್ಥಳದಲ್ಲಿ ಪೊಲೀಸರು ಸೂಚಿಸುವ ಸ್ಥಳದಲ್ಲಿ ನಿಲ್ಲಿಸಿ ದೇವಸ್ಥಾನಕ್ಕೆ ತೆರಳುವುದು.
ದೇವಸ್ಥಾನದಲ್ಲಿ ಪ್ರತ್ಯೇಕ ಹಲ್ಸ್ ಲೈನ್, ವಿದ್ಯುತ್ ದೀಪಗಳ ವ್ಯವಸ್ಥೆ, ಭದ್ರತೆಯ ದೃಷ್ಟಿಯಿಂದ ಸಿ.ಸಿ.ಟಿ.ವಿ ಕ್ಯಾಮರಾಗಳನ್ನು ಅಳವಡಿಸಲಾಗಿರುತ್ತದೆ. ಮತ್ತು ಲಲಿತ ಮಹಲ್ ಮೈದಾನದಲ್ಲಿ ವಾಹನಗಳ ನಿಲುಗಡೆಗ ಭದ್ರತಾ ವ್ಯವಸ್ಥೆ, ತಾತ್ಕಾಲಿಕ ಬಸ್ ನಿಲ್ದಾಣ, ಶೌಚಾಲಯ, ವೈದ್ಯಕೀಯ ಸೌಲಭ್ಯ ಹಾಗೂ ವಿದ್ಯುತ್ ದೀಪಗಳ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯಗಳನ್ನು ಕಲ್ಪಿಸುತ್ತಿದ್ದು ಭಕ್ತಾದಿಗಳು ಯಾವುದೇ ಭೀತಿ ಇಲ್ಲದೇ ವಾಹನಗಳನ್ನು ನಿಲುಗಡೆಗೊಳಿಸಿ ದೇವರ ದರ್ಶನ ಪಡೆಯಬಹುದಾಗಿದೆ.












Click it and Unblock the Notifications