ಒಕ್ಕಲಿಗರು ಸಂಸ್ಕೃತಿ ಹೀನರು, ಇದು ನನ್ನ ಮಾತಲ್ಲ- ಪ್ರೊ.ಭಗವಾನ್
ಮೈಸೂರು, ಅಕ್ಟೋಬರ್ 14: ಪೊಲೀಸ್ ನಿಷೇಧಾಜ್ಞೆ ನಡುವೆಯೂ ಮಹಿಷ ಉತ್ಸವ ಶುಕ್ರವಾರ ಯಶಸ್ವಿಯಾಗಿ ನಡೆದಿದೆ. ಈ ನಡುವೆ ಚಿಂತಕ ಪ್ರೊ.ಕೆ.ಎಸ್.ಭಗವಾನ್ ಅವರು ಒಕ್ಕಲಿಗ ಸಮುದಾಯದ ಬಗ್ಗೆ ನೀಡಿರುವ ಹೇಳಿಕೆ ಹೊಸ ವಿವಾದ ಸೃಷ್ಟಿಸಿದೆ.
ಮೈಸೂರಿನ ಪುರಭವನದಲ್ಲಿ ನಡೆದ ಮಹಿಷ ಉತ್ಸವದಲ್ಲಿ ರಾಜ್ಯದ ನಾನಾ ಭಾಗಗಳಿಂದ ಸುಮಾರು 6 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. 500 ಪೊಲೀಸರ ಬಿಗಿಭದ್ರತೆಯಲ್ಲಿ ಮಹಿಷ ಉತ್ಸವ ನಡೆಯಿತು. ಆದರೆ, ಇದೀಗ ಪ್ರೊ.ಕೆ.ಎಸ್.ಭಗವಾನ್ ಅವರು ಕುವೆಂಪು ನೀಡಿದ್ದಾರೆ ಎಂಬ ಹೇಳಿಕೆ ವಿವಾದ ಸೃಷ್ಟಿಸಿದೆ.

ಮಹಿಷ ಉತ್ಸವದಲ್ಲಿ ಮಾತನಾಡಿದ ಪ್ರೊ.ಕೆ.ಎಸ್.ಭಗವಾನ್ "ಕುವೆಂಪು ಅವರು 1936 ರಲ್ಲಿ ಕಾನೂರು ಹೆಗ್ಗಡತಿ ಕಾದಂಬರಿ ಬರೆದರು. ಅದರಲ್ಲಿ ಸಮಾಜದಲ್ಲಿದ್ದ ತಾರತಮ್ಯ ನೀತಿಯನ್ನು ಚಿತ್ರಿಸಿದ್ದಾರು. ಕಥಾನಾಯಕ ಹೂವಯ್ಯ ಕೊನೆಯಲ್ಲಿ ಬೌದ್ಧ ಧರ್ಮ ಸ್ವೀಕರಿಸುತ್ತಾನೆ. ಹಾಗಾಗಿ ಕುವೆಂಪು ನಾನು ಹಿಂದೂ ಧರ್ಮವನ್ನು ಯಾವಾಗಲೋ ಬಿಟ್ಟಿ ಎನ್ನುತ್ತಿದ್ದರು. ಆದರೆ, ಅವರ ಶಿಷ್ಯರಿಗೆ ಇದು ಅರ್ಥವಾಗಲಿಲ್'ಲ ಎಂದು ತಿಳಿಸಿದ್ದಾರೆ.
ಮಾತು ಮುಂದುವರಿಸಿದ ಅವರು, 'ಆದ್ದರಿಂದಲೇ ಕುವೆಂಪು, ಒಕ್ಕಲಿಗರು ಸಂಸ್ಕೃತಿ ಹೀನರು ಎಂದು ಹೇಳಿದ್ದರು. ಇದು ನನ್ನ ಮಾತಲ್ಲ ಕುವೆಂಪು ಅವರದ್ದು. ಇಲ್ಲದಿದ್ದರೆ ನನಗೆ ಹೊಡೆಯಲು ಬರುತ್ತಾರೆ. ನನ್ನನ್ನು ಕೊಂದು ಹಾಕಿ ಬಿಡುತ್ತಾರೆ. ಆದರೆ, ನಿಜ ಹೇಳಿಯೇ ಸಾಯಬೇಕು' ಎಂದರು.

ಇದೀಗ ಭಗವಾನ್ ಅವರ ಹೇಳಿಕೆ ವಿರುದ್ಧ ಒಕ್ಕಲಿಗರ ಸಮುದಾಯದಿಂದ ಪ್ರಬಲ ಆಕ್ರೋಶ ಕೇಳಿಬಂದಿದೆ. ಒಕ್ಕಲಿಗ ಮುಖಂಡರು ಭಗವಾನ್ ಮನೆಗೆ ಮುತ್ತಿಗೆ ಹಾಕಲು ತೀರ್ಮಾನಿಸಿದ್ದಾರೆ. ಜೊತೆಗೆ ನಾನಾ ಕಡೆ ಪ್ರತಿಭಟನೆ ನಡೆಯುತ್ತಿದೆ.
ಮಹಿಷ ದಸರಾ ಆಚರಣೆ
ಪ್ರತಿ ವರ್ಷ ಅಕ್ಟೋಬರ್ 14ರಂದು ತಮ್ಮ ಧೀಕ್ಷೆ ಕಾರ್ಯಕ್ರಮ ನಡೆಸುವುದು ಹಾಗೂ ಬೌದ್ಧ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸರಕಾರಕ್ಕೆ ಒತ್ತಾಯಿಸುವ ನಿರ್ಣಯಗಳನ್ನು ಮಹಿಷ ಉತ್ಸವ ಆಚರಣೆ ಸಮಿತಿ ಕೈಗೊಂಡಿತು.
7 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದ ಕಾರ್ಯ ಕ್ರಮದ ಸ್ಥಳದಲ್ಲಿ 500ಕ್ಕೂ ಹೆಚ್ಚು ಪೊಲೀಸರು ಕರ್ತವ್ಯ ನಿರ್ವಹಿಸಿದರು. ಮುಂಜಾಗ್ರತೆಯಾಗಿ ಬೇರೆ ಜಿಲ್ಲೆ ಗಳಿಂದಲೂ ಸ್ವಲ್ಪ ಪ್ರಮಾಣದಲ್ಲಿ ಪೊಲೀಸರನ್ನು ಕರೆಸಿಕೊಳ್ಳಲಾಗಿತ್ತು.
ಮಹಿಷನ ದೊಡ್ಡ ಭಾವಚಿತ್ರಕ್ಕೆ ಅತಿಥಿಗಣ್ಯರು ಪುಷ್ಪಾರ್ಚನೆ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಂಡ್ಯ, ರಾಮನಗರ, ಚಾಮರಾಜನಗರ ಹಾಗೂ ಬೆಂಗಳೂರಿನಿಂದ ಬುದ್ಧ ಅನುಯಾಯಿಗಳು ಆಗಮಿಸಿದ್ದರು. ನಿಷೇಧಾಜ್ಞೆ ನಡುವೆಯೂ ಮಹಿಷಾ ಭಾವಚಿತ್ರದ ಸ್ತಬ್ಧಚಿತ್ರ ಮೆರವಣಿಗೆ ಅಶೋಕಪುರಂನ ಉದ್ಯಾನದಿಂದ ಹೊರಟು ಪುರಭವನ ತಲುಪಿತು. ಅಶೋಕಪುರಂನ ಸಾವಿರಾರು ಯುವಕರು ನೀಲಿ ಬಾವುಟ, ಮಹಿಷನ ಭಾವಚಿತ್ರಗಳನ್ನು ಹಿಡಿದು ಜೈ ಭೀಮ್ ಘೋಷಣೆ ಕೂಗುತ್ತ ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ಉರಿಲಿಂಗಿಪೆದ್ದ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಇತಿಹಾಸ ತಜ್ಞ ತಲಕಾಡು ಚಿಕ್ಕರಂಗೇಗೌಡ, ಬೌದ್ಧ ಧರ್ಮಗುರು ಬೋಧಿದತ್ತ ಬಂತೇಜಿ, ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಕೆ.ಎಸ್.ಭಗವಾನ್, ಜೆ.ಎಸ್.ಪಾಟೀಲ, ಪ್ರೊ.ಮಹೇಶ್‌ಚಂದ್ರಗುರು, ಡಾ.ಇಂದ್ರಮ್ಮ, ಮಾಜಿ ಮೇಯರ್ ಪುರುಷೋತ್ತಮ, ಕಾಂಗ್ರೆಸ್ ಗ್ರಾಮಾಂತರ ವಿಭಾಗದ ಅಧ್ಯಕ್ಷ ವಿಜಯಕುಮಾರ್ ಇತರರು ಭಾಗಿಯಾಗಿದ್ದರು.












Click it and Unblock the Notifications