ಅಂತೂ ವ್ಯಾಸರಾಜ ಮಠದ ಪೀಠತ್ಯಾಗ ಮಾಡಿದ ವಿದ್ಯಾಮನೋಹರ ತೀರ್ಥ
ಮೈಸೂರು, ಜುಲೈ 1: ಮಠದ ಆಸ್ತಿಯನ್ನು ಪರಭಾರೆ ಮಾಡಿದ್ದಾರೆ ಹಾಗೂ ಮಠದ ಚಿನ್ನಾಭರಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಆರೋಪ ಬಂದಿದ್ದರಿಂದ ಸೋಸಲೆ ವ್ಯಾಸರಾಜ ಮಠದ ವಿದ್ಯಾಮನೋಹರ ತೀರ್ಥರು ಪೀಠತ್ಯಾಗಕ್ಕೆ ಮುಂದಾಗಿದ್ದಾರೆ.
ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ಸೋಸಲೆಯಲ್ಲಿ ಕೇಂದ್ರ ಸ್ಥಾನ ಹೊಂದಿರುವ ವ್ಯಾಸರಾಜಮಠದ ಪೀಠಾಧಿಪತಿಯಾಗಿರುವ ಅವರು ಪೀಠ ತ್ಯಾಗ ಮಾಡುವುದಾಗಿ ಘೋಷಿಸಿದ್ದಾರೆ. ಅಲ್ಲದೇ ಈ ಕುರಿತಾಗಿ ಮೈಸೂರಿನ ನ್ಯಾಯಾಲಯದಲ್ಲಿ ಅಫಿಡವಿಟ್ ಕೂಡ ಸಲ್ಲಿಸಿದ್ದಾರೆ.

ಐದನೇ ಹೆಚ್ಚುವರಿ ನ್ಯಾಯಾಧೀಶರಾದ ಅಶ್ವಿನಿ ಅವರ ಮುಂದೆ ಶುಕ್ರವಾರ ಸಂಜೆ ಹಾಜರಾದ ಸ್ವಾಮೀಜಿ ಅಫಿಡವಿಟ್ ಸಲ್ಲಿಸಿದ್ದಾರೆ. ಇನ್ನು ಅಫಿಡಿವಿಟ್ ನಲ್ಲಿ ಮುಂದಿನ ಪೀಠಾಧಿಪತಿ ಆಗಿ ವಿದ್ವಾಂಸ ಡಿ. ಪ್ರಹ್ಲಾದಾಚಾರ್ಯ ಅವರನ್ನು ಮಾಡಿರುವುದಾಗಿಯೂ, ಜತೆಗೆ ಪ್ರಹ್ಲಾದಾಚಾರ್ಯರ ಶಿಷ್ಯರನ್ನಾಗಿ ಪುಷ್ಕರ್ ಆಚಾರ್ ರನ್ನು ನೇಮಕ ಮಾಡುವುದಾಗಿ ಅವರು ತಿಳಿಸಿದ್ದಾರೆ.
ಈ ಬಗ್ಗೆ ಒನ್ ಇಂಡಿಯಾ ಕನ್ನಡಕ್ಕೆ ಪ್ರತಿಕ್ರಿಯಿಸಿದ ಶ್ರೀಗಳು, ಪೀಠ ತ್ಯಾಗ ಮಾಡಿರುವುದು ಸತ್ಯ. ಮುಂದಿನ ಕೆಲವು ದಿನಗಳಲ್ಲಿ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಳ್ಳಲಿವೆ ಎಂದು ತಿಳಿಸಿದ್ದಾರೆ.
ವಿದ್ಯಾಮನೋಹರ ತೀರ್ಥರ ಬಗ್ಗೆ ಸಾಕಷ್ಟು ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿಯೂ ದೂರು ದಾಖಲಾಗಿತ್ತು. ಪ್ರಕರಣವು ನ್ಯಾಯಾಲಯದ ಮೆಟ್ಟಿಲು ಏರಿತ್ತು. ವಾದ-ವಿವಾದಗಳ ನಡೆದ ಬಳಿಕ ಶ್ರೀಗಳು ಪೀಠತ್ಯಾಗಕ್ಕೆ ಮುಂದಾಗಿದ್ದಾರೆ.












Click it and Unblock the Notifications