ವರುಣ ಸಿದ್ದರಾಮಯ್ಯಗೆ ಲಕ್ಕಿ ಕ್ಷೇತ್ರ, ಹೇಗೆ ಅಂತೀರಾ?, ಇಲ್ಲಿದೆ ಮಾಹಿತಿ
ಮೈಸೂರು, ಮೇ, 19: ರಾಜ್ಯ ವಿಧಾನಸಭೆ ಚುನಾವಣೆ ಮುಗಿದು ಫಲಿತಾಂಶ ಕೂಡ ಪ್ರಕಟವಾಗಿದೆ. ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಮೇ 20ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆದರೆ, ವರುಣ ಸಿದ್ದರಾಮಯ್ಯ ಅವರ ಪಾಲಿಗೆ ಅದೃಷ್ಟದ ಕ್ಷೇತ್ರವಾಗಿದೆ. ವರುಣದಿಂದ ಮೂರು ಬಾರಿ ಆಯ್ಕೆಯಾದ ಸಿದ್ದರಾಮಯ್ಯ ಅವರಿಗೆ ಮಹತ್ತರ ಹುದ್ದೆ ಅರಸಿ ಬಂದಿದೆ.
ಕಳೆದ ಬಾರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಹಾಗೂ ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಆದರೆ, ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡ ಅವರ ವಿರುದ್ಧ ಪರಾಭವಗೊಂಡಿದ್ದರು. ಆದರೆ, ಬಾದಾಮಿಯಲ್ಲಿ ಗೆದ್ದು ವಿಧಾನಸಭೆ ಪ್ರವೇಶಿಸಿದ್ದರು. ಈ ಬಾರಿ ಸಿದ್ದರಾಮಯ್ಯ ಅವರು ಮತ್ತೆ ಕ್ಷೇತ್ರ ಹುಡುಕಾಟದಲ್ಲಿ ತೊಡಗಿದ್ದರು. ಕೋಲಾರದಲ್ಲಿ ಸ್ಪರ್ಧಿಸುವ ಆಸೆ ಇಟ್ಟುಕೊಂಡಿದ್ದರು. ಆದರೆ, ಡಾ.ಯತೀಂದ್ರ ಅವರು ತಮ್ಮ ವರುಣ ಕ್ಷೇತ್ರ ತ್ಯಾಗ ಮಾಡಿದ ಪರಿಣಾಮ ಅಲ್ಲಿಂದಲೇ ಸ್ಪರ್ಧಿಸಿದ್ದರು.

ವರುಣ ಅದೃಷ್ಟದ ಕ್ಷೇತ್ರ
2008ರಲ್ಲಿ ಕ್ಷೇತ್ರ ಮರು ವಿಂಗಡನೆಯಾದಾಗ ವರುಣ ಕ್ಷೇತ್ರದಲ್ಲಿ ಚುನಾವಣೆ ಆರಂಭವಾಯಿತು. ಮೈಸೂರು, ನಂಜನಗೂಡು, ತಿ.ನರಸೀಪುರದ ಕೆಲವು ಭಾಗಗಳೊಂದಿಗೆ ವರುಣ ಕ್ಷೇತ್ರ ಶುರುವಾಯಿತು. ಈ ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಸ್ಪರ್ಧಿಸಿದರು. ಅಲ್ಲದೆ, ಜಯಭೇರಿ ಬಾರಿಸಿ ವಿಧಾನಸಭೆ ಪ್ರತಿಪಕ್ಷದ ನಾಯಕರಾಗಿ ಆಯ್ಕೆಯಾದರು.
ನಂತರ 2013ರಲ್ಲಿ ಮತ್ತೆ ವರುಣದಿಂದ ಗೆದ್ದ ಸಿದ್ದರಾಮಯ್ಯ ರಾಜ್ಯದ ಸಿಎಂ ಆಗಿ ಆಯ್ಕೆಯಾದರು. ಇದೀಗ 2023ರಲ್ಲಿ ಮತ್ತೆ ವರುಣದಿಂದ ಸ್ಪರ್ಧಿಸಿ ಗೆದ್ದು ಎರಡನೇ ಬಾರಿಗೆ ಸಿಎಂ ಆಗಿ ನಾಳೆ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ.
ನಿಜವಾಯ್ತು ಡಾ.ಯತೀಂದ್ರ ಭವಿಷ್ಯ
ಹಾಗೆ ನೋಡಿದರೆ ಸಿದ್ದರಾಮಯ್ಯ ಅವರು ಕಳೆದ ಬಾರಿ ಮಗ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯ ರೂಪಿಸುವ ಉದ್ದೇಶದಿಂದ ವರುಣ ಕ್ಷೇತ್ರವನ್ನು ತಮ್ಮ ಮಗನಿಗೆ ಬಿಟ್ಟುಕೊಟ್ಟಿದ್ದರು. ಹಾಗಾಗಿ ಚಾಮುಂಡೇಶ್ವರಿ ಹಾಗೂ ಬಾದಾಮಿಯಲ್ಲಿ ಸ್ಪರ್ಧಿಸಿದ್ದರು. ಆದರೆ, ಈ ಬಾರಿ ಮಗ ಯತೀಂದ್ರ ತಂದೆಗಾಗಿ ಕ್ಷೇತ್ರ ತ್ಯಾಗ ಮಾಡಿದರು.
ಅಲ್ಲದೆ, ಅಪ್ಪನಿಗೆ ವರುಣ ಅದೃಷ್ಟದ ಕ್ಷೇತ್ರ. ಇಲ್ಲಿ ನಿಂತು ಸ್ಪರ್ಧೆ ಮಾಡಿದರೆ ಗೆದ್ದು ಖಂಡಿತ ಮುಖ್ಯಮಂತ್ರಿಯಾಗುತ್ತಾರೆ ಎಂದು ಭವಿಷ್ಯ ನುಡಿದ್ದರು. ಇದೀಗ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಮಾತು ನಿಜವಾಗಿದೆ.
ರಾಜಕೀಯ ಶಕ್ತಿ ಬರುತ್ತದೆ
ಈ ಬಾರಿ ವರುಣ ರಾಜ್ಯದಲ್ಲೇ ಹೈವೋಲ್ಟೇಜ್ ಕ್ಷೇತ್ರವಾಗಿ ಪರಿವರ್ತನೆಗೊಂಡಿತ್ತು. ಇದೇ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿಯಿಂದ ವಿ.ಸೋಮಣ್ಣ ಸ್ಪರ್ಧಿಸಿದ್ದರು. ಗೃಹ ಸಚಿವ ಅಮಿತ್ ಶಾ ಕೂಡ ವರುಣದಲ್ಲಿ ಸಾರ್ವಜನಿಕ ಸಭೆ ನಡೆಸಿದ್ದರು. ಸಿಎಂ ಬಸವರಾಜ್ ಬೊಮ್ಮಾಯಿ ಕೂಡ ರೋಡ್ ಶೋ ನಡೆಸಿದ್ದರು. ಸಿದ್ದರಾಮಯ್ಯ ಅವರ ಪರ ನಟಿ ರಮ್ಯಾ, ನಿಶ್ವಿಕಾ ನಾಯ್ಡು, ನಟರಾದ ದುನಿಯಾ ವಿಜಯ್ ಹಾಗೂ ಲೂಸ್ ಮಾದ ಪ್ರಚಾರ ಮಾಡಿ ಗಮನ ಸೆಳೆದಿದ್ದರು.
ಸಿದ್ದರಾಮಯ್ಯ ಕೂಡ ಕಡೆಯ ಐದು ದಿನ ವರುಣದಲ್ಲೇ ಬೀಡುಬಿಟ್ಟು ಗೆಲುವಿಗೆ ಬೇಕಾದ ರಣತಂತ್ರ ರೂಪಿಸಿದ್ದರು. ಅಲ್ಲದೆ, ನನ್ನನ್ನು ಗೆಲ್ಲಿಸಿದರೆ ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲಿಸಿದಂತೆ. ಇದರಿಂದ ನನಗೆ ರಾಜಕೀಯ ಶಕ್ತಿ ಬರುತ್ತದೆ ಎಂದಿದ್ದರು. ಇದೀಗ ಅವರ ಮಾತಿನಂತೆ ರಾಜ್ಯದಲ್ಲಿ ರಾಜಕೀಯ ಶಕ್ತಿ ಸಿದ್ದರಾಮಯ್ಯ ಅವರಿಗೆ ದೊರೆತಿದೆ.












Click it and Unblock the Notifications