UPSC Result 2022: ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮೈಸೂರು ಜಿಲ್ಲೆಯಿಂದ ಮೂವರು ಅಭ್ಯರ್ಥಿಗಳ ತೇರ್ಗಡೆ, ಪ್ರತಿಕ್ರಿಯೆ ಹೀಗಿತ್ತು
ಮೈಸೂರು, ಮೇ, 24: ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2022ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ ಮೈಸೂರು ಜಿಲ್ಲೆಯ ಮೂವರು ತೇರ್ಗಡೆ ಆಗಿದ್ದಾರೆ. ಹಾಗಾದರೆ ಸಾಧನೆ ಮಾಡಿದ ಆ ಮೂವರು ಅಭ್ಯರ್ಥಿಗಳ ವಿವರವನ್ನು ಇಲ್ಲಿ ತಿಳಿಯಿರಿ.
ಮೈಸೂರಿನ ವಿಜಯನಗರದ ಮೂರನೇ ಹಂತದಲ್ಲಿರುವ ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಕೆ. ಕೆಂಪರಾಜು ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕಿ ಡಾ.ಎಂ.ಜಾನಕಿ ದಂಪತಿಯ ಪುತ್ರ ಸೌರಭ್ 260ನೇ ರ‍್ಯಾಂಕ್, ಕುವೆಂಪುನಗರದ ನಿವಾಸಿಯಾದ ಮುಕುಂದ ರಾವ್ ಬೇದ್ರೆ ಹಾಗೂ ಎಂ.ಪದ್ಮಾವತಿ ದಂಪತಿ ಪುತ್ರಿ ಪೂಜಾ ಎಂ 390ನೇ ರ‍್ಯಾಂಕ್, ಕೆ.ಆರ್.ನಗರ ತಾಲೂಕಿನ ಕೆಸ್ತೂರು ಕೊಪ್ಪಲು ಗ್ರಾಮದ ಜಯರಾಮೇಗೌಡ ಹಾಗೂ ತಾಯಿ ಗಿರಿಜಮ್ಮ ಅವರ ಪುತ್ರ ಭಾನುಪ್ರಕಾಶ್ 448ನೇ ರ‍್ಯಾಂಕ್‌ನೊಂದಿಗೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.

260ನೇ ರ‍್ಯಾಂಕ್ ಪಡೆದ ಸೌರಭ್ ಹೇಳಿದ್ದೇನು?
"ನಾನು ಐಎಫ್ಎಸ್ ಪ್ರೊಬೇಷನರಿ ಮಾಡುತ್ತಿದ್ದ ಕಾರಣ ಯುಪಿಎಸ್‌ಸಿ ಪರೀಕ್ಷೆಗೆ ಸಾಕಷ್ಟು ಓದಿಕೊಂಡರೂ ನಿರಂತರವಾಗಿ ಓದಲಾಗಲಿಲ್ಲ. ಎರಡು ಗಂಟೆ ಓದಿದರೆ ಇನ್ನೆರಡು ಗಂಟೆಯನ್ನು ಟಿವಿ ನೋಡುವುದು ಹಾಗೂ ಆಟ ಆಡುವುದರಲ್ಲಿ ಕಳೆಯುತ್ತಿದ್ದೆ. ನಿರಂತರವಾಗಿ ಓದಿದರೆ ತಲೆಯಲ್ಲಿ ಉಳಿಯುವುದಿಲ್ಲ ಎಂಬ ತಂದೆಯವರ ಸಲಹೆಯನ್ನು ಪಾಲಿಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದೆ," ಎಂದು ಸೌರಭ್ ಹೇಳಿದರು.
ಅಲ್ಲದೆ ಜೆಸಿ ಕಾಲೇಜಿನಲ್ಲಿ ಬಿಇ ಹಾಗೂ ಎಂಟೆಕ್ ಅನ್ನು ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಮುಗಿಸಿದ್ದೇನೆ ಎಂದರು. ಹಾಗೆಯೆ ಸದ್ಯ ಸೌರಭ್ ಇಂಡಿಯನ್ ಫಾರೆಸ್ಟ್ ಸರ್ವೀಸ್ ಐಎಎಸ್‌ನಲ್ಲಿ ತೇರ್ಗಡೆ ಹೊಂದಿ ಡೆಹರಾಡೂನ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.
390ನೇ ರ‍್ಯಾಂಕ್ ಪಡೆದ ಪೂಜಾ ಹೇಳಿದ್ದೇನು?
"ಇದು ನನ್ನ ಎರಡನೇ ಪ್ರಯತ್ನ ಆಗಿದೆ. ಕಳೆದ ಬಾರಿ ಪ್ರಿಲಿಮ್ಸ್ ಕೂಡ ಪಾಸಾಗಿರಲಿಲ್ಲ. ಈ ಬಾರಿ ಸಾಕಷ್ಟು ಪುಸ್ತಕಗಳನ್ನು ಅಧ್ಯಯನ ಮಾಡಿ ನನ್ನದೆ ನೋಟ್ಸ್ ತಯಾರಿಸಿಕೊಂಡಿದ್ದೆ. ಇದು ತುಂಬಾ ಪ್ರಯೋಜನಕ್ಕೆ ಬಂತು. ಏನಾದರೂ ವಿಷಯ ಗೊತ್ತಾಗದಿದ್ದರೆ ಅಪ್ಪ-ಅಮ್ಮನೊಂದಿಗೆ ಚರ್ಚೆ ಮಾಡುತ್ತಿದ್ದೆ. ಅಲ್ಲದೆ ಅವರೊಂದಿಗೆ ಸಾಕಷ್ಟು ವಿಚಾರ-ವಿನಿಮಯ ಮಾಡಿಕೊಳ್ಳುತ್ತಿದ್ದೆ. ಕೋಚಿಂಗ್ ಕ್ಲಾಸಿಗೆ ಹೋಗದೆ ಇರುವ ಬಗ್ಗೆ ನನಗೆ ಯಾವುದೇ ಬೇಸರವಿಲ್ಲ," ಎಂದು ಪೂಜಾ ಎಂ ಅವರು ತಿಳಿಸಿದರು.
448ನೇ 260ನೇ ರ‍್ಯಾಂಕ್ ಪಡೆದ ಭಾನುಪ್ರಕಾಶ್ ಪ್ರತಿಕ್ರಿಯೆ
"ನಾನು ವೃತ್ತಿಯಲ್ಲಿ ವೈದ್ಯ. ಬಾಲ್ಯದಿಂದಲೂ ಐಎಎಸ್ ಅಧಿಕಾರಿ ಆಗಬೇಕೆಂಬ ಕನಸು ಕಂಡಿರಲಿಲ್ಲ. ಅಮ್ಮ ಅಂಗನವಾಡಿ ಶಿಕ್ಷಕಿ. ಕೋವಿಡ್ ವೇಳೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವಾಗ ನಾಗರಿಕ ಸೇವಾ ಅಧಿಕಾರಿ ಆಗಬೇಕೆಂಬ ಕನಸು ಮೂಡಿತು. ಮದುವೆ ಆಗಿ ಸಂಸಾರ ಇದ್ದರೂ ಯಾವುದೂ ನನಗೆ ಅಡೆತಡೆ ಎನಿಸಲಿಲ್ಲ. ಎಲ್ಲ ಜವಾಬ್ದಾರಿಗಳೊಟ್ಟಿಗೆ ತಯಾರಿಯನ್ನು ಆರಂಭಿಸಿದೆ," ಎಂದು 448ನೇ 260ನೇ ರ‍್ಯಾಂಕ್ ಪಡೆದ ಭಾನುಪ್ರಕಾಶ್ ಹೇಳಿದರು.
ಅಲ್ಲದೆ ಪತ್ನಿ ಡಾ.ಚೈತ್ರಾ ಸಹಕಾರವನ್ನೂ ನಾನು ಮರೆಲಾರೆ ಎಂದು ಭಾನುಪ್ರಕಾಶ್ ಸಂತಸ ವ್ಯಕ್ತಪಡಿಸಿದರು. ಭಾನುಪ್ರಕಾಶ್ ಸದ್ಯ ನೆಲಮಂಗಲದ ಸಿದ್ಧಾರ್ಥ ವೈದ್ಯಕೀಯ ವಿಜ್ಞಾನ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications