ಗ್ರಾಮ ದೇವತೆ ಹಬ್ಬಕ್ಕೆ ಒತ್ತಾಯಿಸಿ ವಿಷ ಸೇವಿಸಿದ ಯುವಕರು
ಮೈಸೂರು, ಡಿಸೆಂಬರ್, 02: ಸಾಮಾನ್ಯವಾಗಿ ಗ್ರಾಮದೇವತೆ ಹಬ್ಬವನ್ನು ಗ್ರಾಮದಲ್ಲಿ ಸುಖ ಶಾಂತಿ ನೆಲೆಸಲಿ ಎಂಬ ಕಾರಣಕ್ಕಾಗಿ ಆಚರಿಸಲಾಗುತ್ತದೆ. ಆದರೆ ಹುಣಸೂರು ತಾಲೂಕಿನ ಹಂದನಹಳ್ಳಿ ಗ್ರಾಮದ ದೇವರ ಉತ್ಸವ ಇದೀಗ ಅಶಾಂತಿಗೆ ಕಾರಣವಾಗಿದ್ದು, ಇಬ್ಬರು ಯುವಕರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದಾರೆ.
ಗ್ರಾಮ ದೇವತೆ ಹಬ್ಬವನ್ನು ಮುಂದುವರೆಸಲು ಶಾಂತಿ ಸಭೆ ನಡೆಸಬೇಕು ಎಂದು ಸತ್ಯಾ ಫೌಂಡೇಷನ್, ವಾಲ್ಮೀಕಿ ನಾಯಕರ ಯುವಕರ ಸಂಘ, ದಸಂಸ, ಪ್ರಜಾ ವೇದಿಕೆ, ವಾಲ್ಮೀಕಿ ಯುವ ಸೇನೆ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ನಗರದ ಉಪವಿಭಾಗಾಧಿಕಾರಿ ಕಚೇರಿ ಎದುರು ಮಂಗಳವಾರ ಕೈಗೊಂಡ ಅನಿರ್ದಿಷ್ಟ ಧರಣಿಯಲ್ಲಿ ಈ ಅವಘಡ ಸಂಭವಿಸಿದೆ.[ಕಳಪೆ ಬೀಜ ನೀಡಿದ ಕೃಷಿ ಇಲಾಖೆ ವಿರುದ್ಧ ರೈತರ ಆಕ್ರೋಶ]

ಗ್ರಾಮಸ್ಥರು ಕೆಲವು ದಿನಗಳಿಂದ ಗ್ರಾಮದೇವತೆ ಉತ್ಸವ ನಡೆಸಬೇಕೆಂಬ ಇಂಗಿತ ವ್ಯಕ್ತಪಡಿಸಿದ್ದರು. ಆಗ ತಾಲೂಕು ಆಡಳಿತ ಮಂಡಳಿ ಒಪ್ಪಿಗೆ ನೀಡಿ ಆಭರಣವನ್ನೂ ಗ್ರಾಮಸ್ಥರಿಗೆ ಹಸ್ತಾಂತರಿಸಿತು.
ತಾಲೂಕು ಆಡಳಿತ ಒಂದು ಗುಂಪಿನ ಮಾತಿಗೆ ಒತ್ತು ನೀಡಿದೆ ಎಂದು ಆರೋಪಿಸಿ ಮತ್ತೊಂದು ಗುಂಪು ವಿರೋಧ ವ್ಯಕ್ತಪಡಿಸಿದ್ದಲ್ಲದೇ ಶಾಂತಿ ಸಭೆ ನಡೆಸಬೇಕು. ದೇವರ ಒಡವೆಗಳನ್ನು ನೀಡಬೇಕು ಎಂದು ವಾಲ್ಮೀಕಿ ನಾಯಕರ ಯುವಕರ ಸಂಘ, ದಸಂಸ, ಪ್ರಜಾ ವೇದಿಕೆ, ವಾಲ್ಮೀಕಿ ಯುವ ಸೇನೆ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಧರಣಿ ಕೈಗೊಂಡರು.[ಉಡುಪಿ: ಎಂಡೋಸಲ್ಫಾನ್ ಯುವತಿ ಮನನೊಂದು ಆತ್ಮಹತ್ಯೆ]
ಅನಿರ್ದಿಷ್ಟ ಕಾಲ ಧರಣಿ ನಡೆಸುತ್ತಿದ್ದರೂ ಅಧಿಕಾರಿಗಳು ಇವರ ಧರಣಿಗೆ ಮಾನ್ಯತೆ ಕೊಡಲಿಲ್ಲ ಎಂದು ಆಕ್ರೋಶಗೊಂಡ ಸುರೇಶ್, ಚೇತನ, ಜವರನಾಯ್ಕ ಎಂಬುವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿದ್ದು ಚೇತರಿಸಿಕೊಳ್ಳುತ್ತಿದ್ದಾರೆ.












Click it and Unblock the Notifications