ದಸರಾ ಸಿದ್ಧತೆ: ಅರಮನೆಯಲ್ಲಿ ಫಿರಂಗಿ ಗಾಡಿಗಳಿಗೆ ಸಾಂಪ್ರದಾಯಿಕ ಪೂಜೆ..ಇಂದಿನಿಂದ ಒಣ ತಾಲೀಮು
ಮೈಸೂರು, ಸೆಪ್ಟೆಂಬರ್ 13: 2024ರ ದಸರಾ ಮಹೋತ್ಸವಕ್ಕೆ ಮೈಸೂರು ಅರಮನೆ ಆವರಣದಲ್ಲಿ ಸಿದ್ಧತೆಗಳು ಗರಿಗೆದರಿದೆ. ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆ ಹಾಗೂ ಅಶ್ವಾರೋಹಿ ದಳಕ್ಕೆ ಭಾರೀ ಶಬ್ದದ ಪರಿಚಯ ಮಾಡಿಸುವ ಸಲುವಾಗಿ ತಾಲೀಮು ಆರಂಭವಾಗಲಿದ್ದು, ಕುಶಾಲತೋಪು ಸಿಡಿಸುವ ಫಿರಂಗಿ ಗಾಡಿಗಳಿಗೆ ಪೂಜೆ ಸಲ್ಲಿಸಲಾಯಿತು.
ಜಂಬೂ ಸವಾರಿಯ ದಿನದಂದು ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಸಂದರ್ಭದಲ್ಲಿ 21 ಕುಶಾಲತೋಪು ಸಿಡಿಸುವುದು ಸಂಪ್ರದಾಯ. ಹೀಗಾಗಿ ಪೂರ್ವಭಾವಿಯಾಗಿ ಫಿರಂಗಿಗಳ ತಾಲೀಮಿಗೂ ಮುನ್ನ ಅಂಬಾವಿಲಾಸ ಅರಮನೆ ಆವರಣದ ಆನೆಬಾಗಿಲು ಬಳಿ ಫಿರಂಗಿ ಗಾಡಿಗಳಿಗೆ ಅರಮನೆ ಪುರೋಹಿತ ಪ್ರಹ್ಲಾದ್ರಾವ್ ನೇತೃತ್ವದಲ್ಲಿ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದರು.

11 ಫಿರಂಗಿಗಳನ್ನು ಸ್ವಚ್ಛ ಮಾಡಿ, ಬಳಿಕ ಸಾಲಾಗಿ ನಿಲ್ಲಿಸಿ, ವಿಭೂತಿ, ಕುಂಕುಮ, ಅರಿಶಿಣ ಹಚ್ಚಿ, ಮಾವಿನ ತೋರಣ, ಬಾಳೆ ಕಂದುಗಳನ್ನು ಕಟ್ಟಿ, ಚಾಮುಂಡೇಶ್ವರಿಯ ಫೋಟೋ ಇಟ್ಟು ಪೂಜೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಸೀಮಾ ಲಾಟ್ಕರ್, 'ಇಂದು ಗಣಪತಿ, ಚಾಮುಂಡೇಶ್ವರಿ ಪೂಜೆ ಮಾಡಿ ಫಿರಂಗಿಗಳನ್ನು ನಮ್ಮ ವಶಕ್ಕೆ ಪಡೆಯಲಾಗಿದೆ. ವಸ್ತುಪ್ರದರ್ಶನ ಆವರಣದಲ್ಲಿ ಮೂರು ಬಾರಿ ಗಜಪಡೆ, ಅಶ್ವಾರೋಹಿ ದಳಕ್ಕೆ ಶಬ್ದದ ಪರಿಚಯ ಮಾಡಿಸಲಾಗುತ್ತದೆ. ಅಕ್ಟೋಬರ್12ರಂದು ಜಂಬೂ ಸವಾರಿ ವೇಳೆ ಕುಶಾಲತೋಪು ಸಿಡಿಸಲಾಗುತ್ತದೆ' ಎಂದು ಹೇಳಿದರು.

ಸೆಪ್ಟೆಂಬರ್ 13ರಿಂದ ಕುಶಾಲತೋಪು ಸಿಡಿಸುವ ಒಣತಾಲೀಮು ಆರಂಭಿಸಲಾಗುತ್ತದೆ. ನಗರ ಸಶಸ್ತ್ರ ಮೀಸಲು ಪಡೆಯ 30ಕ್ಕೂ ಹೆಚ್ಚು ಸಿಬ್ಬಂದಿ ಪೂರ್ವ ತಾಲೀಮಿನಲ್ಲಿ ಭಾಗಿಯಾಗುತ್ತಾರೆ. ಜಂಬೂಸವಾರಿ ಮೆರವಣಿಗೆ ಸಮೀಪಿಸುತ್ತಿದ್ದಂತೆ ಪೂರ್ಣ ಪ್ರಮಾಣದ ತಾಲೀಮು ನಡೆಸಲಿದ್ದಾರೆ ಎಂದರು.
ದಸರಾ ಗಜಪಡೆ ಹಾಗೂ ಕುದುರೆಗಳ ಸಮ್ಮುಖದಲ್ಲಿ ಪೂರ್ಣ ಪ್ರಮಾಣದ ತಾಲೀಮು ನಡೆಸಲಾಗುತ್ತದೆ. ಕುಶಾಲತೋಪು ಸಿಡಿಸಿದಾಗ ಆನೆ, ಕುದುರೆಗಳು ಬೆದರದಿರಲೆಂದು ಈ ತಾಲೀಮು ನಡೆಸಲಾಗುವುದು. ಜಂಬೂಸವಾರಿ ಮೆರವಣಿಗೆಯ ದಿನ ಚಿನ್ನದ ಅಂಬಾರಿಯಲ್ಲಿ ಪ್ರತಿಪ್ಠಾಪಿಸುವ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಮುಖ್ಯಮಂತ್ರಿ ಹಾಗೂ ಗಣ್ಯರು ಪುಷ್ಪಾರ್ಚನೆ ಮಾಡಿದಾಗ ರಾಷ್ಟ್ರಗೀತೆ ನುಡಿಸಲಾಗುತ್ತದೆ. ಈ ವೇಳೆಯೂ ಕುಶಾಲತೋಪು ಸಿಡಿಸಲಾಗುತ್ತದೆ ಎಂದು ತಿಳಿಸಿದರು.
ಇನ್ನು ಮುಖ್ಯ ಅರ್ಚಕ ಪ್ರಹ್ಲಾದ್ ರಾವ್ ಮಾತನಾಡಿ, ಚಾಮುಂಡೇಶ್ವರಿಗೆ ಗೌರವ ಸಲ್ಲಿಸಲು ಜಂಬೂ ಸವಾರಿಯ ದಿನ 21 ಕುಶಾಲತೋಪುಗಳನ್ನು ಸಿಡಿಸುತ್ತಾರೆ. ಅದರ ಅಂಗವಾಗಿ ಇಂದು ಫಿರಂಗಿ ಗಾಡಿಗಳಿಗೆ ಪೂಜೆ ಸಲ್ಲಿಸಲಾಯಿತು. ಮೊದಲು ಗಣಪತಿ ಹಾಗೂ ನಂತರ ಚಾಮುಂಡೇಶ್ವರಿ ಪೂಜೆ ಬಳಿಕ ಫಿರಂಗಿಗಳ ಪೂಜೆ ನಡೆಯಿತು ಎಂದು ಮಾಹಿತಿ ನೀಡಿದರು. ಈ ವೇಳೆ ಡಿಸಿಪಿಗಳಾದ ಮುತ್ತುರಾಜ್, ಜಾಹ್ನವಿ, ನಗರ ಸಶಸ್ತ್ರ ಮೀಸಲು ಪಡೆಯ ಎಸಿಪಿ ಸತೀಶ್ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಭಾಗಿಯಾಗಿದ್ದರು.












Click it and Unblock the Notifications