Mysuru Rain: ಧಾರಾಕಾರ ಮಳೆಯಿಂದ ಕುಸಿದ ಗೋಡೆ; ಮಗುವನ್ನು ಕಾಪಾಡಿ ಸಾವನ್ನಪ್ಪಿದ ತಾಯಿ
ಮೈಸೂರು ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಪಿರಿಯಾಪಟ್ಟಣದಲ್ಲಿ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಪಕ್ಕದಲ್ಲಿದ್ದ ಮಗುವನ್ನು ದೂರಕ್ಕೆ ತಳ್ಳಿದ ಪರಿಣಾಮ ಎರಡು ವರ್ಷದ ಗಂಡು ಮಗು ಪ್ರಾಣಾಪಾಯದಿಂದ ಪಾರಾಗಿದೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ಗ್ರಾಮದ ಹೇಮಲತಾ (21) ಮೃತರು. ಇನ್ನು ಕಬಿನಿ ಜಲಾಶಯದಿಂದ ಹರಿಸಲಾಗುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ನಂಜನಗೂಡು-ಊಟಿ ಹೆದ್ದಾರಿ ರಸ್ತೆ ಬಂದ್ ಆಗಿದೆ. ನಂಜುಂಡೇಶ್ವರ ದೇಗುಲದ ಆವರಣದಲ್ಲಿರುವ ಭಕ್ತಿ ಮಾರ್ಗದವರೆಗೆ ನೀರು ಬಂದು ನಿಂತಿದೆ.

ಹುಣಸೂರು ನಗರ ಸೇರಿದಂತೆ ತಾಲೂಕಿನಾದ್ಯಂತ ಜಡಿ ಮಳೆಯಿಂದಾಗಿ ವಿವಿಧ ಬಡಾವಣೆಯ ಮನೆಗಳಿಗೆ ಮಳೆ ನೀರಿನೊಂದಿಗೆ ಒಳಚರಂಡಿ ನೀರು ಮನೆಗಳಿಗೆ ನುಗ್ಗಿ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಹನಗೋಡು-ಪಂಚವಳ್ಳಿ ಮುಖ್ಯ ರಸ್ತೆ ಬಂದ್ ಆಗಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಲಕ್ಷ್ಮಣತೀರ್ಥ ನದಿಯಲ್ಲಿ ನೀರಿನ ಮಟ್ಟ ಹೆಚ್ಚುತ್ತಲೇ ಇದೆ.
ನಂಜನಗೂಡು-ಊಟಿ ಹೆದ್ದಾರಿ ಬಂದ್
ನಂಜನಗೂಡು ತಾಲೂಕಿನ ಮಲ್ಲಯ್ಯನ ಮೂಲೆ ಬಳಿ ಜಲಾವೃತವಾಗಿರುವ ಕಾರಣ ನಂಜನಗೂಡು-ಊಟಿ ನಡುವಿನ ರಾಷ್ಟ್ರೀಯ ಹೆದ್ದಾರಿ-766 ಬಂದ್ ಮಾಡಲಾಗಿದೆ. ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳನ್ನು ಪರ್ಯಾಯವಾಗಿ ಕಡಕೊಳ, ಹಿಮ್ಮಾವು, ಕೆಂಪಿಸಿದ್ದನ ಹುಂಡಿ, ಬಸವನಪುರದ ಮೂಲಕ ನಂಜನಗೂಡು ತಲುಪಲು ಸೂಚಿಸಲಾಗಿದೆ.
ಅಧಿಕಾರಿಗಳ ತಂಡ ರಚನೆ
ನೆರೆ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಹೆಗ್ಗಡದೇವನ ಕೋಟೆ ತಾಲೂಕು, ನಂಜನಗೂಡು ತಾಲೂಕು ಹಾಗೂ ಜಿಲ್ಲಾಮಟ್ಟದ ಅಧಿಕಾರಗಳ ಸಭೆ ನಡೆಸಿ ನೆರೆ ನಿರ್ವಹಣೆ ಕುರಿತು ಮಾಹಿತಿ ಪಡೆದು ಸೂಕ್ತ ನಿರ್ದೇಶನ ನೀಡಿದ್ದಾರೆ. ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಣೆ ಮಾಡಲೆಂದೇ ಅಧಿಕಾರಿಗಳ ಪ್ರತ್ಯೇಕ ತಂಡ ರಚಿಸಿದ್ದಾರೆ.
ದಾಖಲೆಯ ಮಳೆ
ಜುಲೈ 1ರಿಂದ 18 ರವರೆಗೆ ವಾಡಿಕೆಯಂತೆ 76.1 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, 142.1 ಮಿ.ಮೀ. (ಶೇ.87.5ರಷ್ಟು ಹೆಚ್ಚಾಗಿ) ಮಳೆಯಾಗಿದೆ. ಕಳೆದ ಏಳು ದಿನಗಳಲ್ಲಿ 26 ಮಿ ಮೀ ಮಳೆಯಾಗುವ ಬದಲಿಗೆ 110.8 ಮಿಮೀ ಅಂದರೆ ಶೇ.318ರಷ್ಟು ಹೆಚ್ಚಾಗಿ ಮಳೆ ಬಿದ್ದಿದೆ.












Click it and Unblock the Notifications