ಲಕ್ಷಾಂತರ ಪ್ರವಾಸಿಗರ ನೆಚ್ಚಿನ ತಾಣ ಮೈಸೂರು ಜಿಲ್ಲೆ; ಯಡಿಯೂರಪ್ಪ
ಮೈಸೂರು, ಫೆಬ್ರವರಿ 14: "ಸಾಂಸ್ಕೃತಿಕ ನಗರಿ ಎಂದು ಕರೆಯುವ ಮೈಸೂರು ಜಿಲ್ಲೆಯೂ ಐತಿಹಾಸಿಕ, ಪಾರಂಪರಿಕ ಹಾಗೂ ಧಾರ್ಮಿಕತೆಯ ಪ್ರಾಮುಖ್ಯತೆಯಿಂದ ಸುಂದರ ಪ್ರವಾಸಿತಾಣವಾಗಿದ್ದು, ಲಕ್ಷಾಂತರ ಜನರನ್ನು ಕೈ ಬೀಸಿ ಕರೆಯುತ್ತದೆ" ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿದರು.
ಶನಿವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ಚಿಂತನ ಪ್ರಕಾಶನ ಹಾಗೂ ಮುಂತಾದ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಕಲಾಮಂದಿರದಲ್ಲಿ ಆಯೋಜಿಸಿದ್ದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ರಚಿಸಿರುವ 'ಮೈಸೂರು ಸುತ್ತಮತ್ತ ನೂರೊಂದು ಪ್ರವಾಸಿ ತಾಣಗಳು' ಮತ್ತು ಆಂಗ್ಲ ಭಾಷೆಗೆ ಅನುವಾದಿಸಿರುವ 'ಮೈಸೂರು - ದಿ ಟೂರಿಸ್ಟ್ ಪ್ಯಾರಡೈಸ್' ಕೃತಿಗಳನ್ನು ಯಡಿಯೂರಪ್ಪ ಬಿಡುಗಡೆ ಮಾಡಿದರು.
ಕೇಂದ್ರೀಕೃತ ಪ್ರವಾಸೋದ್ಯಮ ತಾಣವಾಗಿ ಮೈಸೂರು ಜಿಲ್ಲೆ!
"ವಿಶ್ವವಿಖ್ಯಾತ ಮೈಸೂರು ಅರಮನೆ, ಚಾಮುಂಡಿಬೆಟ್ಟ, ಕೃಷ್ಣರಾಜ ಸಾಗರ ಜಲಾಶಯ, ಮೃಗಾಲಯ ಸೇರಿದಂತೆ ಅನೇಕ ಪ್ರವಾಸಿ ತಾಣಗಳು ಲಕ್ಷಾಂತರ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತವೆ. ಇಂತಹ ಪ್ರವಾಸಿತಾಣಗಳ ಕುರಿತು ಅಂಶಿ ಪ್ರಸನ್ನಕುಮಾರ್ ಅವರು ಕೃತಿ ರಚಿಸಿರುವಂಥದ್ದು ಪ್ರಶಂಸನೀಯ" ಎಂದರು.
ಕೆಮ್ಮಣ್ಣಗುಂಡಿ, ನಂದಿ ಗಿರಿಧಾಮ ಪ್ರವಾಸೋದ್ಯಮ ಇಲಾಖೆಗೆ
"ಹಿರಿಯ ಪತ್ರಕರ್ತರು ಹಾಗೂ ಜಿಲ್ಲಾ ಪತ್ರಕರ್ತ ಸಂಘದ ಮಾಜಿ ಅಧ್ಯಕ್ಷರಾದ ಅಂಶಿ ಪ್ರಸನ್ನಕುಮಾರ್ ಅವರು ಸಾಹಿತ್ಯ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಯ ಪ್ರವಾಸಿ ತಾಣಗಳು, ಧಾರ್ಮಿಕ ಕೇಂದ್ರಗಳು, ಜಲಾಶಯಗಳು ಹಾಗೂ ಅಭಯಾರಣ್ಯಗಳ ಮಾಹಿತಿ ಒಳಗೊಂಡಿರುವ ಅವರ ಪುಸ್ತಕ ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಕಾರಿಯಾಗಲಿದೆ" ಎಂದು ತಿಳಿಸಿದರು.
ಕೊರೊನಾ ಆತಂಕ: ಪ್ರವಾಸೋದ್ಯಮ ಕುರಿತು ಸಿಎಂ ಸಭೆ!

5 ಸಾವಿರ ಕೋಟಿ ಬಂಡವಾಳ ಹೂಡಿಕೆ
"ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಮೈಸೂರಿನ ಹೊಟೇಲ್ ಉದ್ಯಮ, ಕೈಗಾರಿಕೆಗಳು, ಟ್ರಾವೆಲ್ ಏಜೆನ್ಸಿಗಳು ಆರ್ಥಿಕ ಹಿಂಜರಿತವನ್ನು ಅನುಭವಿಸುತ್ತಿವೆ. ಸುರಕ್ಷಿತ ನೀತಿ ನಿಯಮವನ್ನು ರೂಪಿಸಿಕೊಂಡು ಸರ್ಕಾರವು ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದೆ. ಕರ್ನಾಟಕ ಪ್ರವಾಸೋದ್ಯಮ ನೀತಿ 2020-25 ಜಾರಿಗೊಳಿಸುವ ಮೂಲಕ ಸುಮಾರು ಐದು ಸಾವಿರ ಕೋಟಿ ಬಂಡವಾಳ ಹೂಡಿಕೆಯ ಗುರಿ ಹೊಂದಲಾಗಿದೆ" ಎಂದು ವಿವರಿಸಿದರು.

ಪ್ರವಾಸೋದ್ಯಮ ಅಭಿವೃದ್ಧಿ
"ರಾಜ್ಯದಲ್ಲಿ 30 ಲಕ್ಷ ಉದ್ಯೋಗವನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ದೊರಕಿಸುವ ಮೂಲಕ ರಾಜ್ಯದ ಜಿಡಿಪಿಗೆ ಶೇ.15 ರಷ್ಟು ಆದಾಯವನ್ನು ಪ್ರವಾಸೋದ್ಯಮ ವಲಯದಿಂದ ನಿರೀಕ್ಷಿಸಲಾಗಿದೆ. ವಿವಿಧತೆಯಲ್ಲಿ ಏಕತೆ ಎಂಬಂತೆ, ಒಂದು ರಾಜ್ಯ ಹಲವು ಜಗತ್ತುಗಳು ಎಂಬ ಪರಿಕಲ್ಪನೆಯಡಿ ಪ್ರವಾಸೋದ್ಯಮ ಇಲಾಖೆ ಕಾರ್ಯಪ್ರವೃತ್ತವಾಗಿದೆ" ಎಂದು ಮುಖ್ಯಮಂತ್ರಿಗಳು ಹೇಳಿದರು.

ಪ್ರವಾಸೋದ್ಯಮ ಜಾಲತಾಣ
"ರಾಜ್ಯದಲ್ಲಿರುವ ಸುಂದರ ಪ್ರವಾಸಿತಾಣಗಳ ಸಮಗ್ರ ಮಾಹಿತಿಯನ್ನೊಳಗೊಂಡ ಕರ್ನಾಟಕ ಪ್ರವಾಸೋದ್ಯಮ ಜಾಲತಾಣ ತೆರೆಯಲಾಗಿದ್ದು, ಈ ಜಾಲತಾಣವನ್ನು ಒಂದು ವರ್ಷದಲ್ಲಿ 10.5 ಕೋಟಿ ಜನರು ವೀಕ್ಷಿಸಿದ್ದಾರೆ. ಪ್ರವಾಸಿತಾಣಗಳಲ್ಲಿ ಮೂಲಭೂತ ಸೌಲಭ್ಯ ದೊರಕಿಸುವ ಸಲುವಾಗಿ 160 ಕಾಮಗಾರಿಯನ್ನು ಆಯ್ದ ಪ್ರವಾಸಿತಾಣಗಳಲ್ಲಿ ಯಶಸ್ವಿಗೊಳಿಸಲಾಗಿದೆ" ಎಂದು ಯಡಿಯೂರಪ್ಪ ಹೇಳಿದರು.

ಮೈಸೂರು ಜಿಲ್ಲೆಯ ಅಭಿವೃದ್ಧಿ ಆದ್ಯತೆ
"ಹಂಪಿ, ಬಾದಾಮಿ, ಐಹೊಳೆ, ಬನವಾಸಿ ಒಳಗೊಂಡಂತೆ 20 ಆಯ್ದ ಪ್ರವಾಸಿತಾಣಗಳನ್ನು ಗುರುತಿಸಿ ವಿಶ್ವದರ್ಜೆಯ ಪ್ರವಾಸಿತಾಣವಾಗಿಸಲು ಈಗಾಗಲೇ ಯೋಜನೆ ರೂಪಿಸಲಾಗಿದೆ. ಮೈಸೂರು ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆ ಕುರಿತು ನೀಡಲಾಗಿರುವ ಮನವಿ ಸಂಬಂಧ ಕೂಡಲೇ ಕ್ರಮಕೈಗೊಳ್ಳಲಾಗುವುದು" ಎಂದರು.
"ಮೈಸೂರು ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ನಮ್ಮ ಆದ್ಯತೆಯಾಗಿದೆ. ಅದರೆ ಕೊರೊನಾ ಕಾರಣದಿಂದಾಗಿ ಹಣಕಾಸಿನ ಸ್ಥಿತಿ ಸಂಪೂರ್ಣ ಅದಗೆಟ್ಟಿದೆ. ಆದ್ಯತೆಯ ಮೇರೆಗೆ ಮೈಸೂರಿನ ವಿಮಾನ ನಿಲ್ದಾಣವನ್ನು ಅಭಿವೃದ್ಧಿ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಹಂತಹಂತವಾಗಿ ಅಭಿವೃದ್ಧಿಪಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ" ಎಂದು ಹೇಳಿದರು.