ರೈತರಿಗೆ ಸವಾಲ್ ಆದ ತಂಬಾಕು ಬೆಳೆ: ಲಕ್ಷಾಂತರ ರೂಪಾಯಿ ಬಂಡವಾಳ ನೀರಿನಲ್ಲಿ ಹೋಮ
ಮೈಸೂರು, ಮೇ 07: ಮೈಸೂರು ಜಿಲ್ಲೆಯಲ್ಲಿ ಬೆಳೆಯುವ ತಂಬಾಕು ಉತ್ಕೃಷ್ಟ ದರ್ಜೆಯದು ಎಂಬ ಹೆಸರಿದೆ. ಹೀಗಾಗಿ ಇಲ್ಲಿನ ತಂಬಾಕಿಗೆ ಬೇಡಿಕೆಯಂತು ಇದ್ದೇ ಇದೆ. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ತಂಬಾಕನ್ನು ನಿಷೇಧ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಲೇ ಇರುವುದರಿಂದ ನಿಧಾನವಾಗಿ ತಂಬಾಕು ಬೆಳೆಗಾರರು ಕೃಷಿಯಿಂದ ವಿಮುಖರಾಗುತ್ತಿದ್ದು, ಪರ್ಯಾಯ ಕೃಷಿಯತ್ತ ಚಿತ್ತ ಹರಿಸುತ್ತಿರುವುದು ಎದ್ದು ಕಾಣಿಸುತ್ತಿದೆ.
ಹಾಗೆ ನೋಡಿದರೆ ತಂಬಾಕು ಬೆಳೆ ಬೆಳೆಯುವುದು ಅಷ್ಟೇನು ಸುಲಭದ ಕೆಲಸವಲ್ಲ. ಜತೆಗೆ ದರಗಳ ಏರುಪೇರಿನ ಮೇಲಾಟಗಳು ಬೆಳೆಗಾರರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಈಗಾಗಲೇ ಹಲವರು ಸಾಲಮಾಡಿ ತಂಬಾಕು ಬೆಳೆದು ಅದರಿಂದ ನಷ್ಟ ಹೊಂದಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ಇಲ್ಲದಿಲ್ಲ. ಹೀಗಾಗಿ ಕೆಲವೇ ಕೆಲವು ಬೆಳೆಗಾರರನ್ನು ಹೊರತುಪಡಿಸಿ ಉಳಿದಂತೆ ಬಹುತೇಕ ಬೆಳೆಗಾರರು ಪರ್ಯಾಯ ಕೃಷಿಯತ್ತ ಗಮನಹರಿಸುತ್ತಿದ್ದಾರೆ.

ಕೆಲವರು ರೇಷ್ಮೆ ಕೃಷಿ, ಮತ್ತೆ ಕೆಲವರು ಹೈನುಗಾರಿಕೆ, ತರಕಾರಿ ಬೆಳೆಯುವುದು, ಶುಂಠಿ ಕೃಷಿ ಮಾಡುವುದು ಹೀಗೆ ಬೇರೆ ಬೇರೆ ಕೃಷಿಯತ್ತ ಮುಖ ಮಾಡಿದ್ದಾರೆ. ಇವತ್ತಿನ ಮಾರುಕಟ್ಟೆಯಲ್ಲಿ ತಂಬಾಕಿಗೆ ಉತ್ತಮ ಬೆಲೆಯಿದೆ. ಆದರೆ ಹಲವು ಸಂದರ್ಭಗಳಲ್ಲಿ ತಂಬಾಕು ಮಾರಾಟದ ವೇಳೆ ರೈತರಿಗೆ ಉತ್ತಮ ಬೆಲೆ ಸಿಗದೆ ನಷ್ಟ ಹೊಂದಿದ ಘಟನೆಗಳು ನಡೆದಿವೆ. ಇವತ್ತು ತಂಬಾಕು ಬೆಳೆಯುವುದು ರೈತರಿಗೆ ಸುಲಭವಾಗಿ ಉಳಿದಿಲ್ಲ. ಕಾರಣ ಎಕರೆಗೆ ಲಕ್ಷಾಂತರ ರೂಪಾಯಿಯ ಬಂಡವಾಳವನ್ನು ಕೇಳುತ್ತದೆ.
ಲಕ್ಷಾಂತರ ರೂ. ಬಂಡವಾಳ ಕೇಳುತ್ತದೆ
ತಂಬಾಕು ಕೃಷಿ ಮಾಡಬೇಕಾದರೆ, ಉಳುಮೆ ಮಾಡಬೇಕು, ಸಸಿ ಮಡಿ ತಯಾರಿಸಬೇಕು, ಕಾರ್ಮಿಕರಿಗೆ ಕೂಲಿ ನೀಡಬೇಕು, ಅಷ್ಟೇ ಅಲ್ಲದೆ ತಂಬಾಕನ್ನು ಬೇಯಿಸಲು ಸೌದೆ ಬೇಕು. ಇಷ್ಟೆಲ್ಲ ಮಾಡಬೇಕಾದರೆ ಲಕ್ಷ ಲಕ್ಷ ಹಣ ಬೇಕಾಗುತ್ತದೆ. ತಂಬಾಕು ಬೆಳೆಯುವ ರೈತರು ಕೂಡ ಬ್ಯಾಂಕ್, ಇನ್ನಿತರ ಮೂಲಗಳಿಂದ ಸಾಲ ಮಾಡಿ ತಂದು ಹಣವನ್ನು ಕೃಷಿಗೆ ಹಾಕುತ್ತಿದ್ದಾರೆ. ಲಾಭ ಬಂದರೆ ಬದುಕು ಹಸನಾಗುತ್ತದೆ. ಒಂದು ವೇಳೆ ಮಳೆ, ಬಿಸಿಲು, ರೋಗಬಾಧೆ ಹೀಗೆ ಏನಾದರೂ ಸಮಸ್ಯೆಗಳಾದರೆ, ಇಳುವರಿ ಕುಂಠಿತವಾಗುತ್ತದೆ. ಇದೆಲ್ಲವನ್ನು ಮೀರಿ ಫಸಲು ಬಂದರೂ ಕೆಲವೊಮ್ಮೆ ಬೆಲೆಕುಸಿತ ಕೈಕೊಡುತ್ತದೆ.

ತಂಬಾಕು ಬೆಳೆಯುವ ರೈತರು ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇದೆಲ್ಲವನ್ನು ಮೀರಿಯೂ ಜಿಲ್ಲೆಯ ಕೆ.ಆರ್.ನಗರ, ಪಿರಿಯಾಪಟ್ಟಣ, ಹುಣಸೂರು ವ್ಯಾಪ್ತಿಯ ರೈತರು ತಂಬಾಕು ಬೆಳೆಯುವ ಮೂಲಕ ಬದುಕು ಕಂಡುಕೊಂಡಿದ್ದರು. ಇದು ರೈತರ ಬದುಕನ್ನು ಹಸನುಗೊಳಿಸಿತ್ತು. ಆದರೀಗ ಬದಲಾದ ಪರಿಸ್ಥಿತಿಯಲ್ಲಿ ಎಲ್ಲೆಡೆ ತಂಬಾಕು ನಿಷೇಧವಾಗುತ್ತಿದ್ದು ಮುಂದಿನ ಕೆಲವೇ ವರ್ಷಗಳಲ್ಲಿ ತಂಬಾಕು ಕೃಷಿಯನ್ನೇ ನಿಷೇಧಗೊಳಿಸುವ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ ರೈತರು ಇದೀಗ ತಂಬಾಕು ಬೆಳೆಯತ್ತ ನಿರಾಸಕ್ತಿ ತೋರುತ್ತಿದ್ದು ಪರ್ಯಾಯ ಕೃಷಿಯತ್ತ ಯೋಚನೆ ಮಾಡುತ್ತಿದ್ದಾರೆ.
ಉತ್ತಮ ದರ ಸಿಕ್ಕರೆ ಬೆಳೆಗಾರನಿಗೆ ಲಾಭ
ಈ ನಡುವೆ ತಂಬಾಕು ಕೃಷಿಯಿಂದ ದೂರ ಸರಿಯುತ್ತಿರುವ ಬೆಳೆಗಾರರು ಹೇಳುವುದೇನೆಂದರೆ, ಇತ್ತೀಚೆಗಿನ ವರ್ಷಗಳಲ್ಲಿ ತಂಬಾಕಿಗೆ ಉತ್ತಮ ದರ ಲಭಿಸದ ಕಾರಣದಿಂದಾಗಿ ಬಹಳಷ್ಟು ರೈತರು ಸಂಕಷ್ಟಕ್ಕೀಡಾಗಿದ್ದು ಮಾಡಿದ ಸಾಲಕಟ್ಟಲಾಗದೆ ಆತ್ಮಹತ್ಯೆಗೆ ಶರಣಾದ ಘಟನೆಗಳು ನಡೆದಿವೆ. ತಂಬಾಕು ಗಿಡಗಳನ್ನು ನಾಟಿ ಮಾಡಿ ಅದು ಬೆಳೆದು ಕೊಯ್ಲುಗೆ ಬಂದು ಮುಂದೆ ಅದನ್ನು ಹದಗೊಳಿಸಿ ಮಾರುಕಟ್ಟೆಗೆ ತಲುಪಿಸುವ ತನಕ ಅದಕ್ಕೆ ತಗಲುವ ವೆಚ್ಚವನ್ನೆಲ್ಲ ಲೆಕ್ಕ ಹಾಕಿದರೆ ಅದರಿಂದ ಯಾವ ಲಾಭವೂ ಕೆಲವೊಮ್ಮೆ ಸಿಗುತ್ತಿಲ್ಲ. ಹೀಗಾಗಿ ಬೇರೆ ಬೆಳೆಯತ್ತ ಗಮನಹರಿಸುತ್ತಿರುವುದಾಗಿ ಹೇಳುತ್ತಾರೆ.
ತಂಬಾಕು ಬೆಳೆಗೆ ಹೆಚ್ಚಿನ ಬಂಡವಾಳ ಬೇಕು ಜೊತೆಗೆ ಉತ್ತಮ ದರ ಸಿಕ್ಕರೆ ಮಾತ್ರ ಬೆಳೆಗಾರನಿಗೆ ಲಾಭ. ಇಲ್ಲದೆ ಹೋದರೆ ಸಂಪೂರ್ಣ ನಷ್ಟ ಅನುಭವಿಸಿ ಸಾಲಗಾರನಾಗಬೇಕಾಗುತ್ತದೆ. ಈ ಬಾರಿಯಂತು ಸಕಾಲದಲ್ಲಿ ಮಳೆಯಾಗದ ಕಾರಣದಿಂದ ತಂಬಾಕು ಕೃಷಿ ಚಟುವಟಿಕೆ ಇನ್ನೂ ಆರಂಭವಾಗಿಲ್ಲ. ಮುಂದಿನ ದಿನಗಳಲ್ಲಿ ರೈತರು ತಂಬಾಕು ಕೃಷಿಯತ್ತ ಯಾವ ರೀತಿಯ ತೀರ್ಮಾನ ಕೈಗೊಳ್ಳುತ್ತಾರೆ ಎಂಬುದನ್ನು ನೋಡಬೇಕಾಗಿದೆ.












Click it and Unblock the Notifications