ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಹುಲಿ ಮೃತದೇಹ ಪತ್ತೆ
ಮೈಸೂರು, ಡಿಸೆಂಬರ್ 11: ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಸುಮಾರು ಎಂಟರ ಪ್ರಾಯದ ಹುಲಿಯ ಮೃತದೇಹವೊಂದು ಕೊಳೆತ ಸ್ಥಿತಿಯಲ್ಲಿ ಬುಧವಾರ ಪತ್ತೆ ಆಗಿದೆ.
ಎಚ್.ಡಿ.ಕೋಟೆ ತಾಲೂಕು ಎನ್.ಬೇಗೂರು ವನ್ಯಜೀವಿ ವಲಯದಲ್ಲಿ ಹುಲಿಯ ಮೃತದೇಹ ಪತ್ತೆಯಾಗಿದ್ದು, ಅರಣ್ಯ ಅಧಿಕಾರಿಗಳ ಪ್ರಕಾರ ಹುಲಿಯು ಮೃತಪಟ್ಟು ಐದು ದಿನಗಳಾಗಿವೆ. ಕಾಡು ಪ್ರಾಣಿಗಳು ಮೃತದೇಹವನ್ನು ತಿಂದು ಹಾಕಿವೆ. ಕುತ್ತಿಗೆ ಬಳಿ ಮತ್ತೊಂದು ಹುಲಿ ಕಚ್ಚಿದ ಗಾಯಗಳು ಕಂಡು ಬಂದಿವೆ. ಎಡಗಾಲಿನ ಮೂಳೆ ಮುರಿದಿದ್ದು, ಒಂದು ಕಾಲು ಕೂಡ ಮುರಿದಿದೆ ಎಂದು ಪಶು ವೈದ್ಯ ಡಾ.ನಾಗರಾಜ್ ತಿಳಿಸಿದ್ದಾರೆ.

ಮೃತಪಟ್ಟಿರುವ ಹುಲಿಯು ಮತ್ತೊಂದು ಹುಲಿಯೊಂದಿಗೆ ಕಾದಾಡಿ ಗಾಯಗೊಂಡು ಸಾವನ್ನಪ್ಪಿದೆ ಎಂದು ಶಂಕಿಸಲಾಗಿದೆ. ಅಳಿದುಳಿದಿರುವ ಅಂಗಾಂಗಳನ್ನು ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರ ನಿಖರ ಕಾರಣ ತಿಳಿಯಲಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನ ನಿರ್ದೇಶಕ ಬಾಲಚಂದ್ರ, ಎಸಿಎಫ್ ಮೋಹನ್‌ಕುಮಾರ್, ಆರ್‌ಎಫ್‌ಒ ಸಚಿನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications