ಲೋಕ ಸಮರ 2019:ಮೈಸೂರಿನಲ್ಲಿ ಮೂವರು ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
ಮೈಸೂರು, ಮಾರ್ಚ್ 19:ರಾಜ್ಯದಲ್ಲಿ ಮೊದಲ ಹಂತದ ಲೋಕಸಭೆ ಚುನಾವಣೆಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಇಂದು ಮೊದಲ ದಿನ ಮೂವರು ಮೈಸೂರು - ಕೊಡಗು ಕ್ಷೇತ್ರದಿಂದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಇನ್ನು ಮಾ.26ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಮಾ.27ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಮಾ.29ಕ್ಕೆ ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನಾಂಕವಾಗಿದೆ. ಏ.18ರಂದು ಮೊದಲ ಹಂತದ ಮತದಾನ ನಡೆಯಲಿದೆ.
ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದಿಂದ ಸ್ಪರ್ಧಿಸಲು ಭಾರತೀಯ ಹೊಸ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಯುಬ್ ಖಾನ್ ಬೆಂಬಲಿಗರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಕೋರ್ಟ್ ಹಾಲ್ ನಲ್ಲಿ ಚುನಾವಣಾ ಅಧಿಕಾರಿಯಾಗಿರುವ ಅಭಿರಾಮ್ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭ ಜೂನಿಯರ್ ವಿಷ್ಣುವರ್ಧನ್ ಉಪಸ್ಥಿತರಿದ್ದು ಗಮನ ಸೆಳೆದರು.
ಇದರೊಟ್ಟಿಗೆ ಎಸ್ ಯುಸಿಐ ನಿಂದ ಮೈಸೂರು ಕೊಡಗು ಲೋಕಸಭಾ ಕ್ಷೇತ್ರಕ್ಕೆ ಸಂಧ್ಯಾ ಪಿ. ಎಸ್ ಬೆಂಬಲಿಗರೊಂದಿಗೆ ತೆರಳಿ ಚುನಾವಣಾ ಅಧಿಕಾರಿಗೆ ಉಮೇದುವಾರಿಕೆ ಸಲ್ಲಿಸಿದರು.

ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಮ್ಯುನಿಸ್ಟ್ ಪಕ್ಷ ದೇಶಾದ್ಯಂತ ಹೋರಾಟ ಮಾಡುತ್ತಿದೆ. ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡುತ್ತಾರೆ. ಜನರ ಸಮಸ್ಯೆ ಬಗೆಹರಿಸಲು ಮುಂದುವರಿಯುತ್ತಿಲ್ಲ. ನಿರುದ್ಯೋಗ ಸಮಸ್ಯೆ ದೇಶದಲ್ಲಿ ತಾಂಡವವಾಡುತ್ತಿದೆ.ಅಧಿಕಾರಕ್ಕಾಗಿ ಜಾತಿ ಧರ್ಮದ ಹೆಸರಿನಲ್ಲಿ ಮತ ಪಡೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಮಾಜದಲ್ಲಿ ಕಾರ್ಮಿಕರಿಗೆ, ಮಹಿಳೆಯರಿಗೆ ಸ್ವಾವಲಂಬನೆ ಬದುಕು ಕಟ್ಟಿಕೊಡುವ ಉದ್ದೇಶದಿಂದ ಸ್ಪರ್ಧೆ ಮಾಡುತ್ತಿದ್ದೇನೆ ಎಂದರು.

ಕಾಂಗ್ರೆಸ್ (ಐ) ಆನಂದ ಜೆ.ಜೆ.ಮತ್ತು ಪಕ್ಷೇತರ ಇವರು ಕಾಂಗ್ರೆಸ್ ಐನಲ್ಲಿ ಪಕ್ಷದಿಂದ ಒಂದು ನಾಮಪತ್ರವನ್ನು ಸಲ್ಲಿಸಿದರು.












Click it and Unblock the Notifications