ಮೈಸೂರು: ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಜೀವವನ್ನೇ ತೆಗೆದರು
ಮೈಸೂರು, ಏಪ್ರಿಲ್ 29: ಕೊಟ್ಟ ಸಾಲವನ್ನು ವಾಪಸ್ ಕೇಳಿದವನನ್ನೇ ಹತ್ಯೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ನಡೆದಿದೆ. ಹುಣಸೂರು ನಗರದ ಸಾಮಿಲ್ ವೊಂದರಲ್ಲಿ ಅಪರಿಚಿತ ಮೃತದೇಹ ಪತ್ತೆಯಾಗಿತ್ತು.
ಪೋಲೀಸ್ ತನಿಖೆಯಲ್ಲಿ ಮೃತ ಯುವಕ ಗಣೇಶ್ (20) ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದ ನಿವಾಸಿ ಎಂದು ತಿಳಿದು ಬಂದಿದೆ. ಗಣೇಶ್‌ನು ಧನು ಎಂಬ ವ್ಯಕ್ತಿಗೆ ಸಾಲ ನೀಡಿದ್ದನು. ಸಾಕಷ್ಟು ಬಾರಿ ಕೇಳಿದರೂ ಹಿಂತಿರುಗಿ ಕೊಟ್ಟಿರಲಿಲ್ಲ. ಬದಲಿಗೆ ಸಾಲ ನೀಡಿದಾತನನ್ನೇ ಮುಗಿಸುವ ಪ್ಲಾನ್ ಮಾಡಿಕೊಂಡಿದ್ದ ಧನು ಕಳೆದ ಏಪ್ರಿಲ್ 23 ರಂದು ರಾತ್ರಿ ಸಾಲದ ಹಣವನ್ನು ಹಿಂತಿರುಗಿಸಿ ಕೊಡುವುದಾಗಿ ಹುಣಸೂರಿನ ಸಾಮಿಲ್ ಬಳಿ ಕರೆಸಿಕೊಂಡಿದ್ದಾನೆ.
ರಾತ್ರಿ ಅಲ್ಲಿಯೇ ಗಣೇಶ್‌ಗೆ ಊಟ ಮಾಡಿಸಿದ್ದಾನೆ. ಇದಾದ ನಂತರ ತನ್ನ ಸ್ನೇಹಿತರಾದ ಸಲ್ಮಾನ್ ಹಾಗೂ ಮಾದೇವ ನಾಯ್ಕ ಎಂಬುವವರ ಸಹಾಯ ಪಡೆದುಕೊಂಡು ಅಲ್ಲಿಯೇ ಗಣೇಶ್‌ನನ್ನು ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ನಂತರ ದೇಹವನ್ನು ಸುಟ್ಟು ಹಾಕುವ ಯತ್ನ ಕೂಡ ನಡೆಸಿದ್ದಾರೆ.

ಆದರೆ ಹೆದರಿ ಹೆಣವನ್ನು ಅಲ್ಲೇ ಸಮೀಪದಲ್ಲಿದ್ದ ಪೊದೆಗೆ ಎಸೆದು ಹೋಗಿದ್ದಾರೆ. ಅಲ್ಲದೇ ಆತನ ಜೇಬಿನಲ್ಲಿದ್ದ 15 ಸಾವಿರ ರೂ. ಹಣ ತೆಗೆದುಕೊಂಡು ಹೋಗಿದ್ದಾರೆ. ಪೊಲೀಸರು ಈ ಮೂವರನ್ನೂ ಬಂಧಿಸಿ ವಿಚಾರಣೆಗೊಳಪಡಿಸಿದಾಗ ಆರೋಪಿಗಳು ಘಟನೆಯ ಸತ್ಯವನ್ನು ಬಾಯ್ಬಿಟ್ಟಿದ್ದಾರೆ. ಹುಣಸೂರು ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ಮುಂದಿನ ತನಿಖೆ ನಡೆಸಲಾಗುತ್ತಿದೆ.












Click it and Unblock the Notifications