ದಸರಾಗೆ ಬಂದಿದ್ದವರ ಕಾರಿನ ಗಾಜು ಒಡೆದು ಬ್ಯಾಗ್ ಎಗರಿಸಿದ ಕಳ್ಳರು
ಮೈಸೂರು, ಅಕ್ಟೋಬರ್ 11: ಮೈಸೂರು ದಸರಾ ನೋಡಲೆಂದು ಬಂದಿದ್ದ ಪ್ರವಾಸಿಗರ ಚಿನ್ನಾಭರಣಗಳನ್ನೇ ಕದ್ದೊಯ್ದಿರುವ ಘಟನೆ ನಡೆದಿದೆ. ಈ ಕುರಿತು ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ಗಣೇಶ್ ಆನಂದ್ ಎಂಬುವರು ದೂರು ನೀಡಿದ್ದಾರೆ. ದಸರಾ ವಸ್ತು ಪ್ರದರ್ಶನದ ಕಾರ್ ಪಾರ್ಕಿಂಗ್ ನಲ್ಲಿ ಕಾರನ್ನು ನಿಲ್ಲಿಸಿ ಇವರು ತೆರಳಿದ್ದಾರೆ. ನಂತರ ಬಂದು ನೋಡಿದಾಗ ಕಳುವಾಗಿರುವುದು ಬೆಳಕಿಗೆ ಬಂದಿದೆ.
ಅಕ್ಟೋಬರ್ 9ರಂದು ದಸರಾ ವಸ್ತು ಪ್ರದರ್ಶನ ನೋಡಲು ಸಂಜೆ ಸುಮಾರು 6 ಗಂಟೆಗೆ ವಸ್ತು ಪ್ರದರ್ಶನದ ಮುಂಭಾಗ ಇರುವ ದೊಡ್ಡಕೆರೆ ಮೈದಾನದ ಪಾರ್ಕಿಂಗ್ ಜಾಗದಲ್ಲಿ ಕಾರನ್ನು ನಿಲ್ಲಿಸಿ ಹೋಗಿ ರಾತ್ರಿ 7.30ರ ಸುಮಾರಿಗೆ ಪಾರ್ಕಿಂಗ್ ಜಾಗಕ್ಕೆ ಬಂದಿದ್ದಾರೆ. ಅಲ್ಲಿ ಕಾರನ್ನು ನೋಡಿದಾಗ ಕಾರಿನ ಹಿಂಭಾಗದ ಗ್ಲಾಸ್ ಒಡೆದು ಕಾರ್ ಹಿಂಭಾಗದ ಸೀಟ್ ನಲ್ಲಿಟ್ಟಿದ್ದ ಕಿಟ್ ಬ್ಯಾಗ್ ಮತ್ತು ವ್ಯಾನಿಟಿ ಬ್ಯಾಗನ್ನು ಕಳ್ಳತನ ಮಾಡಿರುವುದು ಕಂಡುಬಂದಿದೆ.

"ಕಿಟ್ ಬ್ಯಾಗಿನಲ್ಲಿ ನನ್ನ ಹೆಂಡತಿಯ ಎಸ್ ಬಿಐ ಬ್ಯಾಂಕ್ ಎಟಿಎಂ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಸೀರೆ ಹಾಗೂ ಇತರೆ ಬಟ್ಟೆಗಳು ಇದ್ದವು. 1000 ರೂ. ನಗದು ಇತ್ತು. ವ್ಯಾನಿಟಿ ಬ್ಯಾಗ್ ನಲ್ಲಿದ್ದ ಒಟ್ಟು ಸುಮಾರು 74 ಗ್ರಾಂ ತೂಕದ 2 ಚಿನ್ನದ ನೆಕ್ಲೇಸ್ ಗಳು ಕಳ್ಳತನವಾಗಿವೆ. ಇವುಗಳ ಅಂದಾಜು ಬೆಲೆ 1,85,000 ರೂ ಆಗಿದೆ" ಎಂದು ದೂರಿನಲ್ಲಿ ತಿಳಿಸಿದ್ದಾರೆ.
ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತಿದ್ದಾರೆ.












Click it and Unblock the Notifications