ಕಬಿನಿಯಲ್ಲಿ 58 ಅಡಿಗಿಳಿದ ನೀರಿನ ಮಟ್ಟ..ಆತಂಕದಲ್ಲಿ ರೈತರು..!
ಮೈಸೂರು, ಮೇ 13: ಜಿಲ್ಲೆಯ ಹೆಚ್.ಡಿ.ತಾಲೂಕಿನಲ್ಲಿರುವ ಕಬಿನಿ ಜಲಾಶಯದಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಪಾತಾಳ ತಲುಪುತ್ತಿದ್ದು ಹೀಗೆ ಮುಂದುವರೆದರೆ ಮುಂದಿನ ಗತಿ ಏನು ಎಂಬ ಭಯ ಜಲಾಶಯವನ್ನು ಅವಲಂಭಿಸಿರುವವರನ್ನು ಕಾಡಲಾರಂಭಿಸಿದೆ. ಸದ್ಯ ಜಿಲ್ಲೆ ವ್ಯಾಪ್ತಿಯಲ್ಲಿ ಮಳೆ ಸುರಿಯುತ್ತಿರುವುದು ರೈತರಲ್ಲಿ ನೆಮ್ಮದಿ ತಂದಿದ್ದರೂ ಕಬಿನಿ ಜಲಾಶಯಕ್ಕೆ ನೀರು ಹರಿದು ಬರಬೇಕಾದರೆ ಕೇರಳದಲ್ಲಿ ಮಳೆಸುರಿಯುವುದು ಅನಿವಾರ್ಯವಾಗಿದೆ.
ಕೇರಳದಲ್ಲಿ ಮುಂಗಾರು ಎಷ್ಟು ಬೇಗ ಕಾಲಿಡುತ್ತದೋ ಅಷ್ಟು ಬೇಗ ಕಬಿನಿಗೂ ನೀರು ಹರಿದು ಬರುತ್ತದೆ. ಹೀಗಾಗಿ ಕೇರಳದ ವಯನಾಡು ವ್ಯಾಪ್ತಿಯಲ್ಲಿ ಮಳೆ ಸುರಿಯಲಿ ಎಂದು ಜನರು ಪ್ರಾರ್ಥನೆ ಮಾಡುವಂತಾಗಿದೆ. ಕಬಿನಿಯಿಂದ ಕೃಷಿಗೆ ಮತ್ತು ಕುಡಿಯಲು ನೀರನ್ನು ಬಳಸಿಕೊಳ್ಳಲಾಗುತ್ತಿದ್ದು, ಇದರ ಜತೆಗೆ ವನ್ಯಪ್ರಾಣಿಗಳು ಕೂಡ ಇದೇ ಜಲಾಶಯವನ್ನು ಆಶ್ರಯಿಸಿವೆ. ಹೀಗಾಗಿ ಇದರ ಪಾತ್ರ ಬಹಳಷ್ಟಿದ್ದು, ಮಳೆ ಬಾರದೆ ಹೋದರೆ ನೀರಿನ ಪ್ರಮಾಣ ಇನ್ನಷ್ಟು ಕುಸಿತ ಕಾಣುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ.

ಕಳೆದ ಐದು ವರ್ಷಗಳ ಕಾಲ ಮುಂಗಾರು ಆಶಾದಾಯಕವಾಗಿದ್ದರಿಂದ ಜಲಾಶಯದಲ್ಲಿ ನೀರಿನ ಪ್ರಮಾಣ ಇಳಿಮುಖವಾಗಿರಲಿಲ್ಲ. ಜತೆಗೆ ಪೂರ್ವ ಮುಂಗಾರು ಕೂಡ ಸಕಾಲದಲ್ಲಿ ಸುರಿದಿತ್ತು. 2022ರಲ್ಲಿ ಅಸಾನಿ ಚಂಡಮಾರುತ ಮೇ ತಿಂಗಳಲ್ಲಿ ಕಾಣಿಸಿಕೊಂಡು ವಾರಗಳ ಕಾಲ ಥೇಟ್ ಮುಂಗಾರು ಮಳೆಯಂತೆ ಸುರಿದಿತ್ತು. ಹೀಗಾಗಿ ನೀರಿಗೆ ಯಾವುದೇ ಸಮಸ್ಯೆಗಳು ಎದುರಾಗಿರಲಿಲ್ಲ. ಆದರೆ 2023ರಲ್ಲಿ ಪೂರ್ವ ಮುಂಗಾರು ಮಳೆ ಜತೆಗೆ ಮುಂಗಾರು ಮಳೆಯೂ ವಾಡಿಕೆಯಂತೆ ಸುರಿಯಲಿಲ್ಲ.
58 ಅಡಿಗೆ ಇಳಿದ ನೀರಿನ ಮಟ್ಟ
ಜಲಾಶಯಕ್ಕೂ ಪ್ರವಾಹೋಪಾದಿಯಲ್ಲಿ ನೀರು ಹರಿದು ಬರಲಿಲ್ಲ. ಸಂಪೂರ್ಣ ಭರ್ತಿಯೂ ಆಗಲಿಲ್ಲ. ಭರ್ತಿಯಾಗಿದ್ದ ನೀರನ್ನು ತಮಿಳುನಾಡಿಗೆ ಹರಿಯಲು ಬಿಟ್ಟ ಕಾರಣದಿಂದಾಗಿ ಮತ್ತೆ ಇಳಿಮುಖವಾಗಿತ್ತು. ಹಿಂಗಾರು ಮಳೆಯೂ ಸಮರ್ಪಕವಾಗಿ ಸುರಿಯಲಿಲ್ಲ. ಇದೆಲ್ಲ ಕಾರಣಗಳಿಂದ ಕಬಿನಿ ಜಲಾಶಯದಲ್ಲಿ ನೀರಿನ ಪ್ರಮಾಣ ಮೇಲಕ್ಕೆ ಏರಲೇ ಇಲ್ಲ. ಇದೀಗ ಬೇಸಿಗೆ ಕಾಲದ ಅಂತ್ಯದಲ್ಲಿದ್ದೇವೆ. ಹೀಗಾಗಿ ನೀರಿನ ಬಳಕೆ ಹೆಚ್ಚಾಗುತ್ತಿದ್ದು, ಜಲಾಶಯದಲ್ಲಿ ನೀರು ದಿನದಿಂದ ದಿನಕ್ಕೆ ತಗ್ಗುತ್ತಿದೆ. ಇದು ಮುಂದುವರೆದರೆ, ಮುಂಗಾರು ಸಕಾಲದಲ್ಲಿ ಆರಂಭವಾಗದೆ ಹೋದರೆ ಮುಂದಿನ ದಿನಗಳಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುವ ಪರಿಸ್ಥಿಕತಿ ನಿರ್ಮಾಣವಾದರೂ ಅಚ್ಚರಿಪಡಬೇಕಾಗಿಲ್ಲ.
ಸದ್ಯ 82 ಅಡಿಗಳಷ್ಟು (19.52) ಕ್ಯೂಸೆಕ್ ಸಾಮರ್ಥ್ಯದ ಕಬಿನಿ ಜಲಾಶಯದಲ್ಲಿ ನೀರಿನ ಸಂಗ್ರಹದ ಮಟ್ಟ 58ಅಡಿಗಳಷ್ಟು ಮಾತ್ರ ಇದೆ. ಈ ನೀರನ್ನು ಕುಡಿಯುವ ಉದ್ದೇಶಕ್ಕೆ ನೀಡಿದರೂ ಸಾಕಾಗುವುದಿಲ್ಲ. ಇನ್ನು ಅರಣ್ಯದಲ್ಲಿರುವ ಜಲಮೂಲಗಳು ಬತ್ತಿರುವ ಕಾರಣ ಪ್ರಾಣಿ ಪಕ್ಷಿಗಳೆಲ್ಲವೂ ಜಲಾಶಯದ ನೀರನ್ನೇ ಆಶ್ರಯಿಸಿವೆ. ಹೀಗಾಗಿ ಜಲಾಶಯದ ಸ್ಥಿತಿಯನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಜಲಾಶಯದ ನೀರನ್ನು ಆಶ್ರಯಿಸಿದರ ಪಾಡೇನು ಎಂಬ ಪ್ರಶ್ನೆ ಹುಟ್ಟಿಕೊಳ್ಳದಿರದು.

ಮುಗಿಲತ್ತ ದೃಷ್ಟಿ ನೆಟ್ಟಿರುವ ರೈತರು
ಇನ್ನು ಸಕಾಲದಲ್ಲಿ ಮಳೆ ಸುರಿದರೆ ಅರಣ್ಯಗಳ ನಡುವೆ ಇರುವ ಜಲಮೂಲಗಳಲ್ಲಿ ನೀರು ಕಾಣಿಸಿಕೊಳ್ಳಲಿದ್ದು, ಅದನ್ನು ಪ್ರಾಣಿಗಳು ಬಳಸಿಕೊಳ್ಳಲಿವೆ. ಆಗ ಜಲಾಶಯದ ನೀರಿಗೆ ಒತ್ತಡ ಬೀಳುವುದಿಲ್ಲ. ಇದರ ಜೊತೆಗೆ ವಯನಾಡು ಭಾಗದಲ್ಲಿ ಉತ್ತಮ ಮಳೆಯಾದರೆ ನೀರು ಹರಿದು ಬಂದು ಜಲಾಶಯವನ್ನು ಸೇರಲಿದೆ. ಆಗ ನೀರಿನ ಸಮಸ್ಯೆ ನೀಗಬಹುದು. ಪ್ರತಿ ವರ್ಷ ಜಲಾಶಯದಲ್ಲಿ ನೀರಿರುತ್ತಿತ್ತು. ಹೀಗಾಗಿ ಕೃಷಿ ಚಟುವಟಿಕೆಗಳಿಗೆ ರೈತರಿಗೆ ನೀರು ಹರಿಸಲಾಗುತ್ತಿತ್ತು. ಈ ನೀರನ್ನು ಬಳಸಿಕೊಂಡು ರೈತರು ಕೃಷಿ ಮಾಡುತ್ತಿದ್ದರು.
ಕಳೆದ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ರೈತರು ನೀರಿಲ್ಲದೆ ಕೃಷಿಯಿಂದ ದೂರ ಸರಿಯುವಂತಾಗಿತ್ತು. ಕೃಷಿಯನ್ನೇ ನಂಬಿರುವ ರೈತರಿಗೆ ಈಗ ಆತಂಕ ಶುರುವಾಗಿದೆ. ಕೃಷಿಯೇ ಬದುಕಾಗಿರುವುದರಿಂದ ಈ ಬಾರಿಯೂ ನೀರು ಸಿಗದೆ ಹೋದರೆ ಮುಂದಿನ ಜೀವನ ಹೇಗೆ ಎಂದು ಮುಗಿಲತ್ತ ದೃಷ್ಟಿ ನೆಟ್ಟಿದ್ದಾರೆ. ಇನ್ನು ಕೆಲವರು ಜಾನುವಾರುಗಳಿಗೆ ಕುಡಿಯಲು ನೀರು ಸಿಕ್ಕರೆ ಸಾಕೆಂದು ಹೇಳುತ್ತಿದ್ದಾರೆ.

ಕುಡಿಯುವ ನೀರಿಗೆ ಸಮಸ್ಯೆಯಾಗದು
ಹೆಚ್.ಡಿ.ಕೋಟೆ ತಾಲೂಕಿನಲ್ಲಿಯೇ ಜಲಾಶಯವಿದ್ದರೂ ಅಲ್ಲಿನ ರೈತರಿಗೆ ಕೃಷಿಗೆ ನೀರು ಸಿಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಯನ್ನು ನಂಬಿ ಕೃಷಿ ಮಾಡುವುದು ಕಷ್ಟವಾಗಿದೆ. ಇನ್ನು ಅಂತರ್ಜಲದ ಕೊರತೆಯಿಂದ ಕೊಳವೆ ಬಾವಿಯಲ್ಲಿ ನೀರು ಬಾರದಂತಾಗಿದೆ. ಒಟ್ಟಾರೆ ರೈತರು ಕೃಷಿ ಮಾಡಲು ಮಳೆಯನ್ನು ಕಾಯುತ್ತಿದ್ದರೆ, ಜನ ಕುಡಿಯುವ ನೀರಿಗಾಗಿ ಮೊರೆಯಿಡುತ್ತಿದ್ದಾರೆ. ಮಳೆ ಸುರಿಯದೆ ಹೋದರೆ ಮಾತ್ರ ಸಂಕಷ್ಟ ತಪ್ಪಿದಲ್ಲ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಜಲಾಶಯದ ಅಧಿಕಾರಿಗಳ ಪ್ರಕಾರ ಕೇರಳದ ವೈನಾಡು ಪ್ರದೇಶ ಸೇರಿದಂತೆ ಜಲಾಶಯದ ಹಿನ್ನೀರು ವ್ಯಾಪ್ತಿ ಪ್ರದೇಶದಲ್ಲಿ ನಿರೀಕ್ಷೆಯಂತೆ ಮುಂಗಾರು ಮಳೆ ಸುರಿಯದ ಕಾರಣ ಮತ್ತು ಬಿಸಿಲ ತಾಪ ಹೆಚ್ಚಾಗಿರುವ ಕಾರಣದಿಂದ ಜಲಾಶಯದ ನೀರಿನ ಮಟ್ಟ ಇಳಿಕೆಯಾಗಿದೆ ಆದರೆ ಮುಂದಿನ ಜೂನ್, ಜುಲೈವರೆಗೆ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗುವ ಸಾಧ್ಯತೆಯಿಲ್ಲ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಕಳೆದ ಒಂದು ವಾರದಲ್ಲಿ ಮೈಸೂರು ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದೆ. ಇದು ಮುಂದುವರೆದರೆ ಭೂಮಿ ತೇವವಾಗಿ ಜಾನುವಾರುಗಳ ಮೇವಿನ ಸಮಸ್ಯೆ ನೀಗುವುದರೊಂದಿಗೆ ರೈತರ ಕೃಷಿ ಚಟುವಟಿಕೆಗೂ ಚಾಲನೆ ಸಿಗಲಿದೆ. ಇದರ ಜತೆಗೆ ಕಬಿನಿ ಹಿನ್ನೀರು ಪ್ರದೇಶದಲ್ಲಿ ಮಳೆಯಾದರೆ ಜಲಾಶಯಕ್ಕೆ ನೀರು ಹರಿದು ಬರಲಿದೆ ಎಂಬ ನಿರೀಕ್ಷೆ ಎಲ್ಲರದ್ದಾಗಿದೆ.












Click it and Unblock the Notifications