ಮೈಸೂರಿನಲ್ಲಿ ಸೆರೆ ಹಿಡಿದಷ್ಟೂ ಹುಲಿ-ಚಿರತೆಗಳು ಮತ್ತಷ್ಟು ಪ್ರತ್ಯಕ್ಷ: ಕಾರಣವೇನು..?
ಮೈಸೂರು, ಫೆಬ್ರವರಿ 17: ಮೈಸೂರಿನಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ಚಿರತೆ ಮತ್ತು ಹುಲಿಗಳ ಸೆರೆ ಸುದ್ದಿಗಳು ಸರ್ವೇ ಸಾಮಾನ್ಯವಾಗಿದೆ. ಜಿಲ್ಲೆಯಾದ್ಯಂತ ಮೇಲಿಂದ ಮೇಲೆ ಹುಲಿ ಮತ್ತು ಚಿರತೆಗಳ ದಾಳಿ ಹಾಗೂ ಸೆರೆ ಹಿಡಿದ ಪ್ರಕರಣಗಳು ನಡೆಯುತ್ತಲೇ ಇವೆ. ಮೊದಲೆಲ್ಲ ಕಾಡಂಚಿನ ಗ್ರಾಮಗಳಲ್ಲಿ ಮಾತ್ರ ಕಂಡು ಬರುತ್ತಿದ್ದ ಹುಲಿ, ಚಿರತೆಯ ಉಪಟಳ ಈಗ ನಗರ ಪ್ರದೇಶಕ್ಕೂ ವ್ಯಾಪಿಸಿರುವುದು ಆತಂಕಕಾರಿಯಾಗಿದೆ.
ಮೈಸೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಆಗೊಮ್ಮೆ ಈಗೊಮ್ಮೆ ಚಿರತೆ ಮತ್ತು ಹುಲಿಗಳ ದಾಳಿಯಿಂದ ಮಾನವ ಪ್ರಾಣ ಹಾನಿಯಾದ ಪ್ರಕರಣಗಳು ವರದಿಯಾಗುತ್ತಲೇ ಇದ್ದು, ಅದರಲ್ಲೂ ಗ್ರಾಮೀಣ ಪ್ರದೇಶದ ರೈತರು ಇವುಗಳ ಭಯದಿಂದ ಜಮೀನಿಗೆ ತೆರಳಲು ಭಯಪಡುವಂತಾಗಿದೆ. ಇದೆಲ್ಲದರ ನಡುವೆ ಕಳೆದ ಮೂರು ತಿಂಗಳಿಂದ ಮೈಸೂರು ತಾಲೂಕಿನ ವಿವಿಧ ಭಾಗಗಳಲ್ಲಿ ಚಿರತೆ ಮಾತ್ರವಲ್ಲದೆ, ಹುಲಿಗಳು ಆಗಾಗ್ಗೆ ಪ್ರತ್ಯಕ್ಷವಾಗುತ್ತಿವೆ. ಅದರಲ್ಲೂ ಸುಮಾರು ನಾಲ್ಕು ಹುಲಿಗಳಿದ್ದು ಅವು ಆಗಾಗ್ಗೆ ಕಾಣಿಸಿಕೊಂಡು ಜನರಲ್ಲಿ ಭಯ ಹುಟ್ಟಿಸಿವೆ.

ಇದೀಗ ಸ್ವಲ್ಪ ನೆಮ್ಮದಿ ಪಡುವ ವಿಷಯ ಏನೆಂದರೆ ಜನರ ನಿದ್ದೆಗೆಡಿಸಿದ್ದ ನಾಲ್ಕು ಹುಲಿಗಳ ಪೈಕಿ ಒಂದು ಹುಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಸೆರೆಯಾಗಿದೆ. ಈ ಹುಲಿಯು ಜಯಪುರ ಸಮೀಪದ ಚಿಕ್ಕನಹಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ಒಡಾಡಿ ಭಯಹುಟ್ಟಿಸಿತ್ತು. ಹುಲಿಯ ಹೆಜ್ಜೆ ನೋಡಿದ ಜನರು ಬೆಚ್ಚಿ ಬಿದ್ದಿದ್ದರು. ಹೀಗಾಗಿ ಅವರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಹೀಗಾಗಿ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಹೆಜ್ಜೆ ಗುರುತನ್ನು ಪರಿಶೀಲಿಸಿದಾಗ ಗ್ರಾಮದ ಜಮೀನೊಂದರಲ್ಲಿ ಹುಲಿ ಓಡಾಡಿರುವುದು ದೃಢಪಟ್ಟಿತ್ತು.
ಬೋನಿಗೆ ಬಿದ್ದ ಗಂಡು ಹುಲಿ
ಈ ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು, ಇತ್ತೀಚೆಗೆ ಹುಲಿ ಸೆರೆ ಹಿಡಿಯಲು ನೂತನವಾಗಿ ವಿನ್ಯಾಸಗೊಳಿಸಿದ ವಾಕ್ ಥ್ರೋ ಬೋನನ್ನು ಇರಿಸಿ, ಅದರ ಸುತ್ತ ಕ್ಯಾಮೆರಾ ಟ್ರ್ಯಾಪ್ ಅಳವಡಿಸಿದ್ದರು. ಫೆ.15ರ ಗುರುವಾರ ಮುಂಜಾನೆ 5ವರ್ಷದ ಗಂಡು ಹುಲಿ ಬೋನಿನಲ್ಲಿ ಸೆರೆಯಾಗಿದೆ. ಬಳಿಕ ಹುಲಿ ಬೋನಿಗೆ ಬಿದ್ದ ಸುದ್ದಿ ತಿಳಿಯುತ್ತಿದ್ದಂತೆ ಯೇ ಅಧಿಕಾರಿಗಳ ತಂಡ ಸ್ಥಳಕ್ಕೆ ತೆರಳಿ, ಹುಲಿಗೆ ಅರವಳಿಕೆ ನೀಡಿ ಪಶು ಚಿಕಿತ್ಸಾ ಘಟಕಕ್ಕೆ ಕೊಂಡೊಯ್ದು, ಆರೋಗ್ಯ ತಪಾಸಣೆ ನಡೆಸಿದ್ದಾರೆ.

ಕಳೆದ ಮೂರು ತಿಂಗಳ ಹಿಂದೆ ಮೈಸೂರು ತಾಲೂಕಿನ ದೊಡ್ಡಕಾನ್ಯ, ಚಿಕ್ಕಕಾನ್ಯ ಸೇರಿದಂತೆ ವಿವಿಧ ಭಾಗಗಳಲ್ಲಿ ಹುಲಿಗಳ ಓಡಾಟ ಸಾರ್ವಜನಕರ ಗಮನಕ್ಕೆ ಬಂದಿದ್ದು, ಅರಣ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಅದರಂತೆ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಹುಲಿ ಇರುವುದನ್ನು ದೃಢಪಡಿಸಿದ್ದರು. ಬಳಿಕ ಕ್ಯಾಮೆರಾ ಟ್ರ್ಯಾಪ್ ಹಾಗೂ ಡ್ರೋಣ್ ಕ್ಯಾಮೆರಾ ಮೂಲಕ ಹುಲಿ ಪತ್ತೆಗೆ ಹಲವು ಕಾರ್ಯಾಚರಣೆ ನಡೆಸಿದ್ದರೂ ಚಾಲಕಿ ಹುಲಿ ಪತ್ತೆಯಾಗಿರಲಿಲ್ಲ.
ಹುಲಿಗೆ ಕಾಲರ್ ಅಳವಡಿಕೆ
ಇದಾದ ಎರಡು ತಿಂಗಳ ಬಳಿಕ ಮೈಸೂರು-ನಂಜನಗೂಡು ನಡುವಿನ ಮೈಸೂರಿನ ವಿಮಾನ ನಿಲ್ದಾಣದ ಬಳಿ ಹುಲಿಯೊಂದು ಅಪಘಾತದಿಂದ ಮೃತಪಟ್ಟಿತ್ತು. ಬಳಿಕ ಮೈಸೂರು- ಬನ್ನೂರು ಮುಖ್ಯರಸ್ತೆಯಲ್ಲಿಯೂ ಹುಲಿ ಚಲನವಲನ ಪತ್ತೆಯಾಗಿತ್ತು. ಈಗ ಸರಗೂರು ತಾಲೂಕಿನ ಚಿಕ್ಕನಹಳ್ಳಿ ಬಳಿಯ ಜಮೀನಿನಲ್ಲಿ ಹುಲಿ ಸೆರೆಯಾಗಿದೆ. ಇನ್ನು ಸೆರೆ ಸಿಕ್ಕ ಹುಲಿ ಆರೋಗ್ಯವಾಗಿರುವ ಹಿನ್ನೆಲೆಯಲ್ಲಿ ಮತ್ತು ಹುಲಿಯ ವಯಸ್ಸು ಚಿಕ್ಕದಾಗಿರುವುದರಿಂದ ರೇಡಿಯೋ ಕಾಲರ್ ಅಳವಡಿಸಿ, ಹುಲಿ ಸಂರಕ್ಷಿತಾರಣ್ಯಕ್ಕೆ ಸ್ಥಳಾಂತರ ಮಾಡಲು ಅರಣ್ಯ ಇಲಾಖೆ ನಿರ್ಧರಿಸಿದೆ.
ನಾಗರಹೊಳೆ ಮತ್ತು ಬಂಡೀಪುರ ಸೇರಿದಂತೆ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿರುವ ಗ್ರಾಮಗಳಲ್ಲಿ ಹುಲಿಗಳು ಪ್ರತ್ಯಕ್ಷವಾಗುವುದು ಸಾಮಾನ್ಯವಾಗಿದೆ. ಹೀಗಾಗಿ ಈ ವ್ಯಾಪ್ತಿಯಲ್ಲಿನ ಜಮೀನುಗಳಲ್ಲಿ ಕೆಲಸ ಮಾಡುವ, ದನಕರುಗಳನ್ನು ಮೇಯಿಸುವವರು ಎಚ್ಚರ ವಹಿಸುವುದು ಬಹುಮುಖ್ಯವಾಗಿದೆ. ಒಂದು ವೇಳೆ ಹುಲಿಗಳ ಬಗ್ಗೆ ಮಾಹಿತಿ ಗೊತ್ತಾದರೆ ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡುವುದು ಒಳಿತು.












Click it and Unblock the Notifications