ದಸರಾ ಪ್ರವಾಸಿಗರಿಗೆ ಉಚಿತ ಆಯುರ್ವೇದ ಸೇವೆ
ಮೈಸೂರು, ಸೆ. 11 : ಈ ಬಾರಿಯ ಮೈಸೂರು ದಸರಾಕ್ಕೆ ಬರುವ ಪ್ರವಾಸಿಗರಿಗೆ ಆಯುರ್ವೇದದ ಬಗ್ಗೆ ಮಾಹಿತಿ ನೀಡಲು ಸರ್ಕಾರ ಸಿದ್ಧತೆ ನಡೆಸಿದೆ. ಈ ಯೋಜನೆಯ ಅಂಗವಾಗಿ ಹೋಟೆಲ್‌ಗಳಲ್ಲಿ ವಾಸ್ತವ್ಯ ಹೂಡುವ ಪ್ರವಾಸಿಗರಿಗೆ ಆಯುರ್ವೇದ ಸೇವೆ ಒದಗಿಸಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಬುಧವಾರ ಮೈಸೂರಿನ ಆಯುರ್ವೇದ ಸಂಶೋಧನಾ ಹಾಗೂ ಸ್ನಾತಕೋತ್ತರ ಕೇಂದ್ರಕ್ಕೆ ಭೇಟಿ ನೀಡಿದ ನಂತರ ಮಾತನಾಡಿದ ಸಚಿವ ಯು.ಟಿ.ಖಾದರ್ ಅವರು, ಆಯುರ್ವೇದ ಚಿಕಿತ್ಸೆಯನ್ನು ಹೆಚ್ಚು ಪ್ರಚಲಿತಗೊಳಿಸಿ ಅದರ ಉಪಯುಕ್ತತೆಯ ಬಗ್ಗೆ ಸಾರ್ವಜನಿಕರಿಗೆ ತಿಳಿಸಲು ಈ ಸೇವೆಯನ್ನು ಆರಂಭಿಸಲಾಗುತ್ತಿದೆ ಎಂದರು.

ನಗರದ 60 ರಿಂದ 70 ಹೋಟೆಲ್‌ಗಳಲ್ಲಿ ಪ್ರತಿದಿನ ಬೆಳಗ್ಗೆ ಒಂದು ಗಂಟೆಯ ಆಯುರ್ವೇದ ಸೇವೆ ಒದಗಿಸಲಾಗುವುದು. ಈ ಕಾರ್ಯಕ್ಕಾಗಿ 60 ಸಿಬ್ಬಂದಿಗಳನ್ನು ಆಯುಷ್ ಇಲಾಖೆಯಿಂದ ನಿಯೋಜಿಸಲಾಗುತ್ತದೆ. ಉಚಿತವಾಗಿ ಸೇವೆ ಒದಗಿಸುವ ಬಗ್ಗೆ ಪ್ರವಾಸೋದ್ಯಮ ಸಚಿವರೊಂದಿಗೆ ಚರ್ಚೆ ನಡೆಸಿದ್ದು, ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಯು.ಟಿ.ಖಾದರ್ ಹೇಳಿದರು.
ಹಲವಾರು ಜನರ ಆಯುರ್ವೇದ ಚಿಕಿತ್ಸೆಗೆ ದುಬಾರಿ ವೆಚ್ಚವಾಗುತ್ತದೆ ಎಂಬ ಮನೋಭಾವನೆ ಹೊಂದಿದ್ದಾರೆ. ಕಡಿಮೆ ವೆಚ್ಚದಲ್ಲಿ ಜನ ಸಾಮಾನ್ಯರಿಗೆ ಆಯುರ್ವೇದ ಚಿಕಿತ್ಸೆ ನೀಡುವ ಬಗ್ಗೆ ವೈದ್ಯರು ಚಿಂತಸಬೇಕು ಎಂದು ಸಚಿವರು ಸಲಹೆ ನೀಡಿದರು. ಭಾರತೀಯ ವೈದ್ಯಕೀಯ ಸಂಸ್ಕೃತಿ ನಮ್ಮ ಆಯುರ್ವೇದ ಚಿಕಿತ್ಸೆಯಲ್ಲಿದೆ ಇದನ್ನು ಹೆಚ್ಚು ಜನಪ್ರಿಯಗೊಳಿಸಿ ವಿದೇಶದಲ್ಲೂ ಸೇವೆ ಒದಗಿಸುವ ಮಟ್ಟಿಗೆ ಆಯುಷ್ ಇಲಾಖೆ ಬೆಳಯಬೇಕು ಎಂದರು. [ಖಡ್ಗವಿಟ್ಟು ದಸರಾ ಖಾಸಗಿ ದರ್ಬಾರ್ ಆಚರಣೆ]

ಆಯುರ್ವೇದ ಚಿಕಿತ್ಸೆ ಹಾಗೂ ಸಂಶೋಧನಾ ಕೇಂದ್ರದಲ್ಲಿನ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿದ ಸಚಿವರು, ಕೇಂದ್ರದಲ್ಲಿ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಿ, ವಾಕಿಂಗ್ ಟ್ರಾಕ್ ನಿರ್ಮಾಣ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಸೂಚನೆ ನೀಡಿದರು.ಆಯುಷ್ ಇಲಾಖೆ ನಿರ್ದೇಶಕ ವಿಜಯ್ ಕುಮಾರ ಗೋಗಿ, ಮಾಜಿ ವಿಧಾನ ಪರಿಷತ್ ಸದಸ್ಯ ಮಾದೇಗೌಡ, ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ ಸತ್ಯನಾರಾಯಣ್ ಭಟ್ ಮುಂತಾದವರು ಸಚಿವರ ಜೊತೆ ಉಪಸ್ಥಿತರಿದ್ದರು. [ದಸರಾ ವಿವರ ಪಡೆಯಲು ಇಲ್ಲಿ ಕ್ಲಿಕ್ ಮಾಡಿ]












Click it and Unblock the Notifications