ಮೈಸೂರು; ಕೇವಲ ಮಣ್ಣಿನಿಂದಲೇ ನಿರ್ಮಾಣವಾಗುತ್ತಿದೆ ‘ಪರಿಸರ ಸ್ನೇಹಿ ಮನೆ’
ಮೈಸೂರು, ಏಪ್ರಿಲ್ 14: ನೆತ್ತಿಯ ಮೇಲೊಂದು ಸ್ವಂತ ಸೂರು ಕಟ್ಟಿಕೊಳ್ಳಬೇಕೆಂಬುದು ಪ್ರತಿಯೊಬ್ಬರ ಕನಸು. ಅದರಲ್ಲೂ ಬೆಲೆ ಏರಿಕೆಯಾಗಿರುವ ಈ ಸಮಯದಲ್ಲಿ ಕಡಿಮೆ ವೆಚ್ಚದಲ್ಲಿ ಮನೆ ಕಟ್ಟಲು ಬಹುತೇಕರು ಇಷ್ಟಪಡುತ್ತಾರೆ. ಅಂತೆಯೇ ಮೈಸೂರಿನಲ್ಲಿ ಕಟ್ಟಡ ನಿರ್ಮಾಣ ಸಂಸ್ಥೆಯೊಂದು ಮಣ್ಣಿನಿಂದಲೇ ಪರಿಸರ ಸ್ನೇಹಿಯಾಗಿ ಮನೆ ನಿರ್ಮಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ಭಾರತದಲ್ಲಿ ಮನೆಗಳನ್ನು ಕಟ್ಟುವಾಗ ಕೆಲವೊಂದು ವಿಷಯಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಡಲಾಗುತ್ತದೆ. ಇದರಿಂದಾಗಿ ಖರ್ಚು, ವೆಚ್ಚಗಳೂ ಹೆಚ್ಚಾಗುತ್ತದೆ. ವಿದೇಶಗಳಲ್ಲಿ ಹೊಸ ತಂತ್ರಜ್ಞಾನ, ವಿನ್ಯಾಸ ಬಳಸಿ ಕಡಿಮೆ ಖರ್ಚಿನಲ್ಲಿ ಉತ್ತಮ ಮನೆ ಕಟ್ಟಿಕೊಂಡಿದ್ದಾರೆ. ಹೊಸ ಪ್ರಯೋಗಕ್ಕೆ ನಮ್ಮನ್ನು ಒಡ್ಡಿಕೊಂಡರೆ ಖರ್ಚು ಕಡಿಮೆ ಮಾಡಬಹುದು.
ಇತ್ತೀಚೆಗೆ ಮೈಸೂರಿನಲ್ಲಿ ಸಾಂಪ್ರದಾಯಿಕ ಅಡಿಪಾಯ ಇಲ್ಲದೆಯೇ ಸದೃಢ ಮನೆಯೊಂದು ತಲೆ ಎತ್ತಿತ್ತು. ಆ ಮೂಲಕ ಫೌಂಡೇಶನ್ ಹಾಕದೆಯೇ ಗಟ್ಟಿಮುಟ್ಟಾದ ಮನೆ ಕಟ್ಟಲು ಸಾಧ್ಯ ಎಂಬುದನ್ನು ನಗರದ ಆರ್ಕಿಟೆಕ್ಟ್ ಶರತ್ ಕುಮಾರ್ ಎಂ.ಪಿ. ತೋರಿಸಿಕೊಟ್ಟಿದ್ದರು. ಅಡಿಪಾಯಕ್ಕೆ ತಗುಲಬಹುದಾದ ಶೇ.20ರಿಂದ 30ರಷ್ಟು ಹಣ ಉಳಿತಾಯ ಮಾಡಿಕೊಟಿದ್ದರು. ಫೌಂಡೇಶನ್ ಇಲ್ಲದೆ ಕರ್ನಾಟಕದಲ್ಲಿ ತಲೆ ಎತ್ತಿದ ಮೊದಲ ಮನೆ ಇದು.

ಇದೀಗ ಬೇರೆ ಮಾದರಿಯಲ್ಲಿ ಮೈಸೂರಿನಲ್ಲಿ ಮನೆಯೊಂದು ನಿರ್ಮಾಣವಾಗುತ್ತಿದೆ. ಇದಕ್ಕೆ ಬಳಸಿರುವುದು ಕೇವಲ ಮಣ್ಣು ಎಂಬುದೇ ಮತ್ತೊಂದು ವಿಶೇಷ. ಮೈಸೂರಿನ ಕುವೆಂಪು ನಗರದಲ್ಲಿರುವ ಆರ್-ಲೀಪ್ ಸಂಸ್ಥೆ ಕಳೆದ 10 ವರ್ಷಗಳಿಂದ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಸಕ್ರಿಯವಾಗಿದೆ. ಕಟ್ಟಡ ತ್ಯಾಜ್ಯವನ್ನು ಸಹ ಮನೆ ನಿರ್ಮಾಣ ಕಾರ್ಯಕ್ಕೆ ಬಳಸುವ ಮೂಲಕ ಮೈಸೂರು ನಗರವನ್ನು ಡೆಬ್ರಿಸ್ ಮುಕ್ತ ನಗರವನ್ನಾಗಿಸಲು ಕೈ ಜೋಡಿಸಿದೆ. ಮನೆ ಕಟ್ಟಲು ನೂತನ ಪ್ರಯೋಗಗಳು ನಡೆಯುತ್ತಿರುವ ಸಮಯದಲ್ಲೇ ವೆಚ್ಚ ಕಡಿಮೆ ಮಾಡುವ ಹಾಗೂ ಪರಿಸರ ಸ್ನೇಹಿ ಮನೆ ನಿರ್ಮಾಣಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಸೂರು ಕಟ್ಟಿಕೊಳ್ಳಲು ಹಂಬಲಿಸುತ್ತಿರುವವರಿಗೆ ವರದಾನವಾಗಿ ಪರಿಣಮಿಸಿದೆ.

ಕಡಿಮೆ ವೆಚ್ಚದಲ್ಲಿ ಸ್ವಂತ ಸೂರು ಪಡೆಯಬೇಕು ಎಂಬ ನಿರೀಕ್ಷೆಯಲ್ಲಿರುವ ಜನರಿಗೆ ಹಳೆಯ ಕಾಲದಂತೆ ಮಣ್ಣಿನಲ್ಲಿಯೂ ಗುಣಮಟ್ಟದ ಮನೆಗಳನ್ನು ನಿರ್ಮಿಸಬಹುದು ಎಂಬುದನ್ನು ತೋರಿಸಿಕೊಟ್ಟಿದೆ. ಇದರಿಂದ ಮನೆ ನಿರ್ಮಾಣ ವೆಚ್ಚದಲ್ಲಿ ಶೇ.10 ರಿಂದ 30ರವರೆಗೂ ಕಡಿತವಾಗಲಿದೆ. ಈಗಾಗಲೇ ಮೈಸೂರಿನಲ್ಲಿ ಸಂಸ್ಥೆಯು 15ಕ್ಕೂ ಮಣ್ಣಿನ ಮನೆಗಳನ್ನು ನಿರ್ಮಿಸಿದ್ದು, ಈ ಮನೆಗಳಿಗೆ ಮಂಗಳೂರು ಹೆಂಚು ಅಳವಡಿಕೆಯೊಂದಿಗೆ ಕಾಂಕ್ರೀಟ್ ತಾರಸಿಯನ್ನೂ ಹಾಕಲಾಗಿದೆ. ಕಡಿಮೆ ವೆಚ್ಚದಲ್ಲಿ ಮಣ್ಣಿನಿಂದಲ್ಲೇ ಒಂದಸ್ತಿನ ಮನೆಯನ್ನು ನಿರ್ಮಿಸಬಹುದು ಎಂಬುದನ್ನು ಸಂಸ್ಥೆ ತೋರಿಸಿಕೊಟ್ಟಿದ್ದು, ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿಯೂ ನಿರತವಾಗಿದೆ.
"ಅನಾದಿ ಕಾಲದಿಂದಲೂ ಮಣ್ಣಿಗೆ ವಿಶೇಷವಾದ ಮಹತ್ವ ನಮ್ಮ ದೇಶದಲ್ಲಿ ಇದೆ. ಹಿಂದೆಲ್ಲಾ ಮನೆಗಳನ್ನು ಮಣ್ಣಿನಿಂದಲೇ ಕಟ್ಟಲಾಗುತ್ತಿತ್ತು. ಅಲ್ಲದೆ, ತುಂಬಾ ವರ್ಷಗಳವರೆಗೆ ಬಾಳಿಕೆ ಬರುತ್ತಿತ್ತು. ಅದೇ ಪರಿಕಲ್ಪನೆ ಇಟ್ಟು ಕಡಿಮೆ ವೆಚ್ಚದಲ್ಲಿ ಮಣ್ಣಿನಿಂದಲೇ ಪರಿಸರ ಸ್ನೇಹಿಯಾಗಿ ಮನೆ ನಿರ್ಮಿಸಲಾಗುತ್ತಿದೆ. ಈ ಮನೆಗಳು ಉಷ್ಣಾಂಶ ರಹಿತವಾಗಿದ್ದು, ಪರಿಸರಕ್ಕೆ ಪೂರಕವಾಗಿರುತ್ತದೆ. ಮಣ್ಣು, ಡೆಬ್ರಿಸ್ ಬಳಕೆ ಹಾಗೂ ಸಿಮೆಂಟ್ ಬಳಕೆ ತುಂಬಾ ಮುಖ್ಯ," ಎಂದು ಆರ್-ಲೀಪ್ ಸಂಸ್ಥೆ ಮುಖ್ಯಸ್ಥ ಎಂ. ರಾಜೇಶ್ ಕುಮಾರ್ ಜೈನ್ ತಿಳಿಸಿದ್ದಾರೆ.
Recommended Video
"ನಂಜನಗೂಡು ರಸ್ತೆಯ ಕಡಕೊಳದಲ್ಲಿ ಸಂಸ್ಥೆಯ ಕಾರ್ಖಾನೆಯಲ್ಲಿ ಮಣ್ಣಿನಿಂದ ಗೋಡೆ, ಕಮಾನು ನಿರ್ಮಾಣ ಮಾಡುವುದು ಹೇಗೆ ಎಂಬುದನ್ನು ವಿದ್ಯಾರ್ಥಿಗಳ ಕೈಯಿಂದಲೇ ಮಾಡಿಸಿ, ಈ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಜತೆಗೆ ಈಗಾಗಲೇ ಸಂಸ್ಥೆ ನಿರ್ಮಾಣ ಮಾಡಿರುವ ಮಣ್ಣಿನ ಮನೆಗಳಿರುವ ಸ್ಥಳಗಳಿಗೂ ಭೇಟಿ ಕೊಡಿಸಿ, ಹೇಗೆ ನಿರ್ಮಾಣವಾಗಿದೆ ಎಂಬುದನ್ನು ಸಾಕ್ಷ್ಯ ಸಮೇತ ಪ್ರದರ್ಶಿಸಲಾಗುತ್ತಿದೆ," ಎಂದು ಒಡೆಯರ್ ಸೆಂಟರ್ ಫಾರ್ ಆರ್ಕಿಟೆಕ್ಚರ್ ವಿದ್ಯಾಶಂಕರ್ ತಿಳಿಸಿದ್ದಾರೆ.












Click it and Unblock the Notifications