ಐತಿಹಾಸಿಕ ಜಂಬೂ ಸವಾರಿ ಹೇಗೆ ನಡೆಯಲಿದೆ ಗೊತ್ತಾ?
ಕಳೆದ 9 ದಿನಗಳ ಕಾಲ ವಿದ್ಯುದ್ದೀಪದ ಬೆಳಕಿನಲ್ಲಿ ಅಡ್ಡಾಡುತ್ತಾ, ಅರಮನೆ, ಆಹಾರಮೇಳ, ಯುವದಸರಾ, ವಸ್ತುಪ್ರದರ್ಶನ, ಫಲಪುಷ್ಪಪ್ರದರ್ಶನ ಹೀಗೆ ಮೈಸೂರು ನಗರದಾದ್ಯಂತ ಸುತ್ತಾಡಿ ದಸರಾದ ಸಡಗರ ಸಂಭ್ರಮ ಅನುಭವಿಸಿದವರು ವಿಜಯದಶಮಿಯಂದು ನಡೆಯಲಿರುವ ಐತಿಹಾಸಿಕ ಜಂಬೂಸವಾರಿಯನ್ನು ಕಣ್ತುಂಬಿಸಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ.
ಮೈಸೂರು ದಸರಾ ಎಂದರೆ ಅದು ಜಂಬೂಸವಾರಿ. ಆ ಜಂಬೂಸವಾರಿ ದೇಶ ವಿದೇಶಗಳ ಗಮನಸೆಳೆದಿದ್ದು ಇದನ್ನು ಅದ್ಧೂರಿಯಾಗಿ ಯಶಸ್ವಿಯಾಗಿ ನಡೆಸುವುದು ಬಹುಮುಖ್ಯವಾಗಿದ್ದು, ಈ ಜಂಬೂಸವಾರಿಗಾಗಿ ಕಳೆದ ಕೆಲವು ತಿಂಗಳುಗಳಿಂದಲೇ ತಯಾರಿ ಆರಂಭವಾಗಿದೆ. ಗಜಪಡೆ ಎರಡು ಹಂತವಾಗಿ ಅರಮನೆಯನ್ನು ಪ್ರವೇಶಿಸಿ ತಾಲೀಮು ಆರಂಭಿಸಿ, ಇದೀಗ ಸರ್ವ ರೀತಿಯಲ್ಲಿ ಸಜ್ಜಾಗಿವೆ. ಅಭಿಮನ್ಯು ಈ ಬಾರಿ ಅಂಬಾರಿ ಹೊತ್ತು ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ಸಾಗಲಿದ್ದಾನೆ.
ಈ ಜಂಬೂಸವಾರಿಗೆ ಸ್ತಬ್ದ ಚಿತ್ರಗಳು, ಕಲಾತಂಡಗಳು, ಅಶ್ವದಳ ಪೊಲೀಸ್ ಪಡೆ ಹೀಗೆ ಹಲವು ತಂಡಗಳು ಸಾಥ್ ನೀಡಲಿವೆ. ಸುಮಾರು 5 ಕಿ. ಮೀ. ಮೆರವಣಿಗೆ ನಡೆಯಲಿದೆ. ಬನ್ನಿಮಂಟಪಕ್ಕೆ ತೆರಳುವ ಮೂಲಕ ಸುಮಾರು ಹತ್ತು ದಿನಗಳ ದಸರಾ ಸಂಭ್ರಮಕ್ಕೆ ತೆರೆಬೀಳಲಿದೆ.
ಆದರೆ ಜಂಬೂಸವಾರಿಗೆ ಲಕ್ಷಾಂತರ ಜನ ಆಗಮಿಸುವ ಸಾಧ್ಯತೆಯಿದೆ. ಹೀಗಾಗಿ ಅರಮನೆ ಆವರಣದಲ್ಲಿ ಗಣ್ಯರಿಗೆ ಮತ್ತು ಪಾಸ್ ಪಡೆದವರಿಗೆ ಅವಕಾಶವಿದೆ. ಉಳಿದಂತೆ ಅರಮನೆಯಿಂದ ಬನ್ನಿಮಂಟಪದವರೆಗಿನ ಹಾದಿ ನಡುವೆ ಅಲ್ಲಲ್ಲಿ ಶಾಮಿಯಾನ ಮತ್ತು ಆಸನಗಳ ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ಮನೆಗಳ ಜಗುಲಿ ಮೇಲೆ ಕಟ್ಟಡಗಳ ಮೇಲೆ, ರಸ್ತೆ ಬದಿಯಲ್ಲಿ ನಿಂತು, ಕುಳಿತು ನೋಡುವುದು ಅನಿವಾರ್ಯವಾಗಿದೆ.

ಮೆರವಣಿಗೆ ಮುನ್ನಡೆಸುವ ನಿಶಾನೆ ಆನೆ ಅರ್ಜುನ
ಬುಧವಾರ ಮಧ್ಯಾಹ್ನ 2.36ರಿಂದ 2.50ರ ಒಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಗಜಪಡೆಯ ಮಾಜಿ ಕ್ಯಾಪ್ಟನ್ ಅರ್ಜುನ ನಿಶಾನೆ ಆನೆಯಾಗಿ ದಸರಾ ಮೆರವಣಿಗೆಯನ್ನು ಮುನ್ನಡೆಸಲಿದ್ದಾನೆ. ಈತನ ಹಿಂದೆಯೇ ಇದರ ಜತೆಗೆ ಮೆರವಣಿಗೆಯಲ್ಲಿ ರಾಜ್ಯದ 31 ಜಿಲ್ಲಾ ಪಂಚಾಯಿತಿಗಳ, ರಾಜ್ಯಮಟ್ಟದ ವಿವಿಧ ಇಲಾಖೆಗಳು, ನಿಗಮ ಮಂಡಳಿಗಳು, ಸ್ತಬ್ಧಚಿತ್ರ ಉಪಸಮಿತಿ ಸೇರಿ 43 ಸ್ತಬ್ಧಚಿತ್ರಗಳು ಸೇರಿದಂತೆ 100ಕ್ಕೂ ಜಾನಪದ ಕಲಾ ತಂಡಗಳು, ವಾದ್ಯವೃಂದದ ತಂಡಗಳು, ಪೊಲೀಸ್ ಬ್ಯಾಂಡ್, ಅಶ್ವರೋಹಿ ದಳ ಭಾಗವಹಿಸಲಿವೆ.

ವಿದ್ಯುತ್ ದೀಪದ ಬೆಳಕಲ್ಲಿ ಜಂಬೂ ಸವಾರಿ
ಆ ನಂತರ ಸಂಜೆ 5.07ರಿಂದ 5.18ರ ಒಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ವಿಜಯದಶಮಿ (ಜಂಬೂಸವಾರಿ)ಮೆರವಣಿಗೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಸೇರಿದಂತೆ 8 ಮಂದಿ ಗಣ್ಯರು ಚಿನ್ನದ ಅಂಬಾರಿಯಲ್ಲಿ ವೀರಾಜಮಾನಳಾದ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ. ಈ ಬಾರಿ ಜಂಬೂಸವಾರಿ ತಡವಾಗಿ ಆರಂಭವಾಗುವುದರಿಂದ ಬನ್ನಿಮಂಟಪ ತಲುಪುವುದು ತಡವಾಗಲಿದೆ. ಹೀಗಾಗಿಯೇ ಗಜಪಡೆಗಳಿಗೆ ವಿದ್ಯುದ್ದೀಪದ ಬೆಳಕಿನಲ್ಲಿ ಸಾಗಲು ಅನುಕೂಲವಾಗುವಂತೆ ತಾಲೀಮು ನಡೆಸಲಾಗಿದೆ.

ಅಂಬಾರಿ ಆನೆ ಸುತ್ತ ಬಿಗಿಭದ್ರತೆ
ಚಿನ್ನದ ಅಂಬಾರಿ ಹೊತ್ತು ಸಾಗುವ ಆನೆಯ ಸುತ್ತಲೂ ಸಾರ್ವಜನಿಕರ ಪ್ರವೇಶ ತಡೆಯಲು ವಿಶೇಷ ಪೊಲೀಸ್ ತುಕಡಿ ನಿಯೋಜಿಸಲಾಗುತ್ತದೆ. ಇದಲ್ಲದೆ ಅರಮನೆಯಲ್ಲಿ ಭದ್ರತಾ ದೃಷ್ಟಿಯಿಂದ ಕಮಾಂಡೋ ಪಡೆ ತುಕಡಿಗಳನ್ನು ನೇಮಿಸಲಾಗಿದೆ. ಜಂಬೂ ಸವಾರಿ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದ್ದು, ಅರಮನೆ ಸುತ್ತಮುತ್ತ ಹಾಗೂ ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ಹದ್ದಿನ ಕಣ್ಣಿಡಲಾಗಿದೆ. ಮೈಸೂರು ನಗರದ 1255, ಹೊರ ಜಿಲ್ಲೆಗಳ 3580 ಸಿಬ್ಬಂದಿ, 650 ಗೃಹ ರಕ್ಷಕ ಸಿಬ್ಬಂದಿ ಸೇರಿದಂತೆ ಒಟ್ಟು 5485 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಅ.5ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6ರವರೆಗೆ ಸಾರ್ವಜನಿಕರಿಗೆ ಅರಮನೆಗೆ ಪ್ರವೇಶ ನಿರ್ಬಂಧಿಸಲಾಗಿದೆ. ಅರಮನೆಗೆ ಪ್ರವೇಶ ಮಾಡುವ ದ್ವಾರಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಗಣ್ಯರು, ಸಾರ್ವಜನಿಕರು ಪ್ರವೇಶಿಸುವ ಕಡೆ ತಪಾಸಣೆ ಮಾಡಲಾಗುತ್ತದೆ. ಅಷ್ಟೇ ಅಲ್ಲದೆ ಅರಮನೆಯ ಸುತ್ತಮುತ್ತಲ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದ್ದು, ಹದ್ದಿನ ಕಣ್ಣಿಟ್ಟು ಕಾಯಲಾಗುತ್ತದೆ.

ಇಪ್ಪತ್ತು ಸಾವಿರ ಮಂದಿಗೆ ಆಸನ ವ್ಯವಸ್ಥೆ
ಅರಮನೆ ಆವರಣದಲ್ಲಿ ಇಪ್ಪತ್ತು ಸಾವಿರ ಮಂದಿ ಕೂರಲು ಆಸನ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಪೆಂಡಾಲ್ ಹಾಕಿ ಆಸನದ ವ್ಯವಸ್ಥೆ ಮಾಡಲಾಗಿದೆ. ಗೋಲ್ಡ್ ಕಾರ್ಡ್, ವಿವಿಐಪಿ, ವಿಐಪಿ ಪಾಸ್ ಹೊಂದಿದವರಿಗೆರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಜಂಬೂ ಸವಾರಿ ವೇಳೆ ಸಾರ್ವಜನಿಕರು ರಸ್ತೆಗೆ ಬರದಂತೆ ಎರಡೂ ಕಡೆ ಮರದ ಬ್ಯಾರಿಕೇಡ್ ನಿರ್ಮಿಸಲಾಗಿದೆ. ಹಾಗೆಯೇ ಎಲ್ಲರ ಮೇಲು ಹದ್ದಿನ ಕಣ್ಣಿಡಲು ಕೆ. ಆರ್. ವೃತ್ತ, ಆಯುರ್ವೇದ ಕಾಲೇಜು ವೃತ್ತ, ಹೈವೈ ಸರ್ಕಲ್ ಸೇರಿದಂತೆ ಪ್ರಮುಖ ವೃತ್ತ ಸೇರಿದಂತೆ ಅಂಬಾರಿ ಸಂಚರಿಸುವ ಮಾರ್ಗ ಹಾಗೂ ವಿವಿಧೆಡೆಗಳಲ್ಲಿ ಸಾವಿರಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಪಂಜಿನ ಕವಾಯತಿನೊಂದಿಗೆ ವಿದಾಯ
ಜಂಬೂಸವಾರಿ ಅರಮನೆಯ ಆವರಣದಿಂದ ಹೊರಟು ಬನ್ನಿಮಂಟಪ ತಲುಪುವ ವೇಳೆಗೆ ಅತ್ತ ಬನ್ನಿಮಂಟಪದಲ್ಲಿ ದಸರಾದ ಅಂತಿಮ ಕಾರ್ಯಕ್ರಮವಾಗಿರುವ ಪಂಜಿನ ಕವಾಯತಿಗೆ ಸಿದ್ಧತೆಗಳು ನಡೆಯಲಿವೆ. ಈ ರಾತ್ರಿ 7.30ರಿಂದ ಪಂಜಿನಕವಾಯತು ಆರಂಭವಾಗಲಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕವಾಯತು ವೀಕ್ಷಿಸಿ ಗೌರವ ವಂದನೆ ಸ್ವೀಕರಿಸಲಿದ್ದಾರೆ.
ಆ ನಂತರ ನಾಡಗೀತೆ ಹಾಡಲಿದ್ದು ಅದಾದ ಬಳಿಕ ಎರಡು ಗಂಟೆಗಳ ಕಾಲ ಪೊಲೀಸ್ ಸಿಬ್ಬಂದಿ ಸಾಹಸಮಯ ಪ್ರದರ್ಶನ ನಡೆಯಲಿದ್ದು, ಮೈನವಿರೇಳಿಸುವ ಬೈಕ್ ಪ್ರದರ್ಶನ ಒಂದೆಡೆಯಾದರೆ ಅಶ್ವಾರೋಹಿ ಪಡೆಗಳ ಸಾಹಸ ಪ್ರದರ್ಶನವೂ ವೀಕ್ಷಕರ ಮನರಂಜಿಸಲಿದೆ. ಕರ್ನಾಟಕ ಪೊಲೀಸ್ ಪಡೆಯ ಪಂಜಿನ ಕವಾಯತು ಮೂಲಕ ದಸರಾಕ್ಕೆ ತೆರೆ ಬೀಳಲಿದೆ.












Click it and Unblock the Notifications