ಕಾವೇರಿ ನದಿ ನೀರಿನ ಗುಣಮಟ್ಟ ಕುಸಿತ: ತಾಂತ್ರಿಕ ತಜ್ಞರ ಸಮಿತಿ ಹೇಳಿದ್ದೇನು?
ಮೈಸೂರು, ಸೆಪ್ಟೆಂಬರ್ 11: ರಾಜ್ಯದ ಕೆಲವು ನಗರಗಳ ಗಾಳಿಯ ಗುಣಮಟ್ಟ ಕುಸಿದಿದೆ ಎನ್ನುವ ಅಘಾತಕಾರಿ ವಿಚಾರ ಹೊರ ಬಂದ ಬೆನ್ನಲ್ಲೇ ಕಾವೇರಿ ಕಣಿವೆಯ ನದಿಗಳು ಕೂಡ ಕಲುಷಿತವಾಗುತ್ತಿರುವ ವಿಚಾರ ಜನರಲ್ಲಿ ಆತಂಕವನ್ನುಂಟು ಮಾಡಿದೆ. ಅದರಲ್ಲೂ ಕಾವೇರಿ, ಲಕ್ಷ್ಮಣತೀರ್ಥ ಮತ್ತು ಕಪಿಲ ನದಿಗಳು ಕಲುಷಿತವಾಗುತ್ತಿದ್ದು, ಈ ನದಿಗಳ ನೀರಿನ ಗುಣಮಟ್ಟ ದಿನದಿಂದ ದಿನಕ್ಕೆ ಕುಗ್ಗುತ್ತಿರುವುದು ಗೋಚರಿಸಿದೆ.
ಹಾಗೆನೋಡಿದರೆ ರಾಜ್ಯದಲ್ಲಿರುವ ಬಹುತೇಕ ನದಿಗಳು ಕಲುಷಿತವಾಗಿದ್ದು, ಸ್ವಾಭಾವಿಕವಾಗಿಯೇ ಅವುಗಳ ಗುಣಮಟ್ಟ ಕುಗ್ಗುತ್ತಾ ಹೋಗುತ್ತಿವೆ. ಆದರೆ ಹಳೆ ಮೈಸೂರು ಭಾಗದ ಜನರ ಜೀವನಾಡಿಯಾಗಿರುವ ಕಾವೇರಿ ಕಲುಷಿತಗೊಂಡು ಇದರ ಗುಣಮಟ್ಟ ಕುಸಿದಿದೆ ಎಂದರೆ ಭಯವಾಗುವುದು ಸಹಜವೇ... ಆದರೆ ಇದಕ್ಕೆ ಕಾರಣ ನಾವೇ ಆಗಿದ್ದೇವೆ ಎಂಬುದನ್ನು ಕೂಡ ಒಪ್ಪಿಕೊಳ್ಳಲೇ ಬೇಕಾಗಿದೆ.

ಇದೀಗ ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಮೈಸೂರು ನಗರಕ್ಕೆ ಕುಡಿಯುವ ನೀರು ಒದಗಿಸುವ ಕಾವೇರಿ, ಕಪಿಲಾ ಹಾಗೂ ಲಕ್ಷ್ಮಣ ತೀರ್ಥ ನದಿ ಕಲುಷಿತಗೊಂಡಿರುವ ಬಗ್ಗೆ ತಾಂತ್ರಿಕ ತಜ್ಞರ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈ ವರದಿಯಲ್ಲಿ ಏನಿದೆ ಎಂಬುದನ್ನು ನೋಡುವ ಮುನ್ನ ಕರ್ನಾಟಕ ಸೇರಿದಂತೆ ದೇಶದ ಎಲ್ಲ ನದಿಗಳ ನೀರಿನ ಗುಣಮಟ್ಟದ ಬಗ್ಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ವೈಜ್ಞಾನಿಕ ಸಂಶೋಧನೆ ಮೂಲಕ ಸಮೀಕ್ಷೆ ನಡೆಸಿದ್ದು ಅದರ ಪ್ರಕಾರ ರಾಜ್ಯದ 17 ನದಿಗಳು ಸೇರಿದಂತೆ ದೇಶದ 311 ನದಿಗಳು ಕಲುಷಿತಗೊಂಡಿವೆಯಂತೆ. ಈ ಬಗ್ಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ 2022ರಲ್ಲಿ ವರದಿ ಪ್ರಕಟಿಸಿದೆ.
ನದಿಗಳ ಶುದ್ಧತೆಯ ಪ್ರಮಾಣ ಹೇಗಿದೆ?
ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ ಪ್ರತಿ ಲೀಟರ್ ಶುದ್ಧ ನೀರಿನಲ್ಲಿ 1ಎಂಜಿ ಬಯೋ ಕೆಮಿಕಲ್ ಆಕ್ಸಿಜನ್ ಡಿಮ್ಯಾಂಡ್ (ಬಿಒಡಿ) ಇರಬೇಕು. ಆದರೆ ಕಾವೇರಿ ನದಿ ನೀರಿನಲ್ಲಿ 6 ಬಿಒಡಿ ಪ್ರಮಾಣವಿದ್ದರೆ, ಕಪಿಲಾ ನೀರಿನಲ್ಲಿ 3.8 ಇದ್ದರೆ,ಲಕ್ಷ್ಮಣ ತೀರ್ಥದಲ್ಲಿ 5.6ರಷ್ಟು ಬಿಒಡಿ ಪ್ರಮಾಣವಿದೆಯಂತೆ.

ಇದಲ್ಲದೆ ಬೆಂಗಳೂರಿನ ನಂದಿ ಬೆಟ್ಟದಲ್ಲಿ ಹುಟ್ಟುವ ಪಿನಾಕಿನಿ ನದಿ ನೀರಿನಲ್ಲಿ 111, ಅಘನಾಶಿನಿಯಲ್ಲಿ 3.3, ಅರ್ಕಾವತಿಯಲ್ಲಿ 39, ಭದ್ರಾದಲ್ಲಿ 7, ಭೀಮಾದಲ್ಲಿ 4, ಗಂಗಾವಳಿಯಲ್ಲಿ 3.4, ಕಾಗಿಣದಲ್ಲಿ 3.1, ಕೃಷ್ಣದಲ್ಲಿ 4.7, ನೇತ್ರಾವತಿಯಲ್ಲಿ 6, ಶರಾವತಿಯಲ್ಲಿ 3.3, ಶಿಂಶಾದಲ್ಲಿ 9.5, ತುಂಗಾದಲ್ಲಿ 6.2 ರಷ್ಟಿದೆ ಎಂದು ವರದಿ ಹೇಳಿದೆ.
ಕಾವೇರಿ, ಕಪಿಲಾ, ಲಕ್ಷ್ಮಣ ತೀರ್ಥ ಸೇರಿದಂತೆ ಕರ್ನಾಟಕದ 17 ನದಿಗಳ ಕಲುಷಿತತೆ ಬಗ್ಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಸಿರು ನ್ಯಾಯ ಮಂಡಳಿಗೆ ಪ್ರಮಾಣ ಪತ್ರ ಕೂಡ ಸಲ್ಲಿಸಿತ್ತು. ಈ ಹಿನ್ನೆಲೆ ಕರ್ನಾಟಕದ ಕಾವೇರಿ, ಕಪಿಲಾ, ಲಕ್ಷ್ಮಣ ತೀರ್ಥ ಸೇರಿದಂತೆ 17 ನದಿಗಳ ಬಗ್ಗೆ ವೈಜ್ಞಾನಿಕ ಸಂಶೋಧನೆ ನಡೆಸಿ ವರದಿ ನೀಡುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ ನೀಡಿತ್ತು.

ನದಿಗಳ ಗುಣಮಟ್ಟ ಪರಿಶೀಲನೆಗೆ ಸಮಿತಿ
ಈ ನಡುವೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಕೂಡ ಸರ್ಕಾರಕ್ಕೆ ಪತ್ರ ಬರೆದು ನಗರ ಪ್ರದೇಶದ ಕಲುಷಿತ ನೀರು ನೇರವಾಗಿ ಕಾವೇರಿ ನದಿ ನೀರು ಸೇರುತ್ತಿದ್ದು, ಇದಕ್ಕೆ ಕೂಡಲೇ ಕಡಿವಾಣ ಹಾಕಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಹಿನ್ನೆಲೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನಿರ್ದೇಶನದ ಮೇರೆಗೆ ಮಂಡಳಿಯ ಮೈಸೂರು ವಿಭಾಗ ತಾಂತ್ರಿಕ ತಜ್ಞರ ಸಮತಿಯೊಂದನ್ನು ರಚಿಸಿತ್ತು.
ಈ ಸಮಿತಿಯಲ್ಲಿ ಪ್ರಧಾನ ಪರಿಸರ ಅಧಿಕಾರಿ ಡಾ.ಪಿ.ನಿರಂಜನ್, ನಿವೃತ್ತ ಪರಿಸರ ಅಧಿಕಾರಿ ಡಾ.ಬಿ.ಎಂ.ಪ್ರಕಾಶ್, ಕರ್ನಾಟಕ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯ ಎಕ್ಸಿಕ್ಯೂಟಿವ್ ಎಂಜಿನಿಯರ್, ಕಾವೇರಿ ನೀರಾವರಿ ನಿಗಮದ ಸೂಪರಿಡೆಂಟೆಂಟ್ ಎಂಜಿನಿಯರ್, ಮೈಸೂರು ವಿಶ್ವವಿದ್ಯಾನಿಲಯದ ಒಬ್ಬ ಪ್ರಾಧ್ಯಾಪಕರು ಹಾಗೂ ಎಸ್ ಜೆಸಿಇ ಒಬ್ಬ ಪ್ರಾಧ್ಯಾಪಕ ಸೇರಿದಂತೆ ತಂತ್ರಜ್ಞರು ಇದ್ದರು.
ನದಿ ನೀರು ಕಲುಷಿತವಾಗುತ್ತಿರುವುದು ಹೇಗೆ?
ಕೊಡಗಿನಲ್ಲಿ ಹುಟ್ಟುವ ಕಾವೇರಿ ನದಿ ಕುಶಾಲನಗರ, ಹುಣಸೂರು, ಪಿರಿಯಾಪಟ್ಟಣ, ಕೆ.ಆರ್. ನಗರ, ಮೈಸೂರು, ಶ್ರೀರಂಗಪಟ್ಟಣ, ತಿ.ನರಸೀಪುರ, ಕೊಳ್ಳೆಗಾಲ ಮಾರ್ಗದಲ್ಲಿ ಹರಿಯುವಾಗ ಕಲುಷಿತಗೊಳ್ಳುತ್ತಿದೆ. ಅದರಲ್ಲೂ ಮೈಸೂರು ನಗರದ ಒಳ ಚರಂಡಿ ನೀರು ನೇರವಾಗಿ ಕಾವೇರಿ ನದಿ ಸೇರುತ್ತಿದೆ ಎಂಬ ಆರೋಪವೂ ಇದೆ. ಇಷ್ಟೇ ಅಲ್ಲದೆ, ಕಬಿನಿ ಜಲಾಶಯದಿಂದ ಬರುವ ಕಪಿಲಾ ನದಿಗೆ ಕೂಡ ಕಲುಷಿತ ನೀರು ಸೇರುತ್ತಿದೆ.
ನಂಜಗೂಡು ಕೈಗಾರಿಕಾ ಪ್ರದೇಶದ ತ್ಯಾಜ್ಯ ನೀರು ಹಾಗೂ ನಂಜನಗೂಡು ಪಟ್ಟಣದ ಒಳ ಚರಂಡಿ ನೀರು ಕಪಿಲಾ ನದಿ ನೀರು ಸೇರುತ್ತಿದೆ. ಲಕ್ಷ್ಮಣ ತೀರ್ಥ ನದಿಯ ಪರಿಸ್ಥಿತಿ ಇದಕ್ಕಿಂತ ಭಿನ್ನಾವಾಗಿಲ್ಲ. ಹುಣಸೂರು, ಕೆ.ಆರ್.ನಗರ ಸೇರಿದಂತೆ ಇತರೆಡೆಯ ಕಲುಷಿತ ನೀರು ಲಕ್ಷ್ಮಣ ತೀರ್ಥ ನದಿಯನ್ನು ಸೇರುತ್ತಿದ್ದು, ಕಾವೇರಿಯನ್ನು ಸಂಗಮವಾಗುವ ಮುನ್ನವೇ ಇದು ಕಲುಷಿತವಾಗುತ್ತಿರುವುದನ್ನು ಒಪ್ಪಿಕೊಳ್ಳಲೇ ಬೇಕಾಗಿದೆ.
ಪರಿಸರ ಅಧಿಕಾರಿ ಸವಿತಾ ಹೇಳುವುದೇನು?
ತಾಂತ್ರಿಕ ತಜ್ಞರ ಸಮಿತಿ ಸುಮಾರು ಒಂದೂವರೆ ತಿಂಗಳ ಕಾಲ ಮೂರು ನದಿಗಳ ಕಲುಷಿತತೆ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಅಧ್ಯಯನ ಮಾಡಿ, ಮೂರು ನದಿಗಳ ನೀರು ಕಲುಷಿತವಾಗಿದೆ ಎಂದು 15 ದಿನಗಳ ಹಿಂದೆಯೇ ಸಮಗ್ರ ವರದಿಯನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದೆ. ಇನ್ನು ಈ ಕುರಿತಂತೆ ಮಾತನಾಡಿರುವ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಪರಿಸರ ಅಧಿಕಾರಿ ಸವಿತಾ ಅವರು, ತಾಂತ್ರಿಕ ತಜ್ಞರ ಸಮಿತಿಯು ಕಾವೇರಿ, ಕಪಿಲಾ ಹಾಗೂ ಲಕ್ಷ್ಮಣ ತೀರ್ಥ ನದಿಗಳ ನೀರು ಕಲುಷಿತವಾಗಿರುವ ಬಗ್ಗೆ ವರದಿ ಸಲ್ಲಿಸಿದೆ.
ನದಿ ನೀರು ಕಲುಷಿತಗೊಳ್ಳುವುದನ್ನು ಯಾವ ರೀತಿ ತಡೆಯಬಹುದು ಎಂಬ ಬಗ್ಗೆ ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ. ಜತೆಗೆ ತರ್ತಾಗಿ ಕೈಗೊಳ್ಳಬೇಕಾದ ಕ್ರಮ ಹಾಗೂ ಶಾಶ್ವತವಾಗಿ ರೂಪಿಸಬೇಕಾದ ಯೋಜನೆ ಬಗ್ಗೆ ವರದಿಯಲ್ಲಿ ತಿಳಿಸಲಾಗಿದೆ. ತಾಂತ್ರಿಕ ತಜ್ಞರ ಸಮಿತಿ ನೀಡಿರುವ ವರದಿ ಆಧಾರದ ಮೇಲೆ ಸರ್ಕಾರ ನಮಗೆ ಏನು ಸೂಚನೆ ನೀಡುತ್ತದೆಯೊ ಅದರಂತೆ ನಾವು ಕೆಲಸ ಮಾಡುವುದಾಗಿ ಹೇಳಿದ್ದಾರೆ.












Click it and Unblock the Notifications