ಶಾಸಕ ತನ್ವೀರ್ ಸೇಠ್ ನಿವೃತ್ತಿ ನಿರ್ಧಾರ: ಅಭಿಮಾನಿಗಳಿಂದ ಆತ್ಮಹತ್ಯೆ ಯತ್ನ
ಶಾಸಕ ತನ್ವೀರ್ ಸೇಠ್ ಚುನಾವಣೆಯಿಂದ ಹಿಂದೆ ಸರಿಯಬಾರದು ಎಂದು ಆಗ್ರಹಿಸಿ ಅವರ ಅಭಿಮಾನಿಗಳು ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ಒಬ್ಬ ಅಭಿಮಾನಿ ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆದಿದೆ.
ಮೈಸೂರು, ಫೆಬ್ರವರಿ 28: ನರಸಿಂಹ ರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಚುನಾವಣೆಯಿಂದ ಹಿಂದೆ ಸರಿಯಬಾರದು ಎಂದು ಆಗ್ರಹಿಸಿ ಅವರ ಅಭಿಮಾನಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು. ಅಲ್ಲದೇ, ಅಭಿಮಾನಿಗಳು ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆದಿದೆ.
ಶಾಸಕ ತನ್ವೀರ್ ಸೇಠ್ ನಿರ್ಧಾರದಿಂದ ಬೇಸರಗೊಂಡ ಕೆಸರೆ ಬಡಾವಣೆಯ ಬೆಂಬಲಿಗ ರಸೂಲ್ ಎಂಬಾತ ದಿಢೀರನೇ ಸೀಮೆಎಣ್ಣೆಯನ್ನು ಸುರಿದು ಬೆಂಕಿ ಹಚ್ಚಿಕೊಳ್ಳಲು ಮುಂದಾದನು. ತಕ್ಷಣವೇ ಅವರನ್ನು ತಡೆದು ನೀರು ಸುರಿದು ಶರ್ಟ್ ಬಿಚ್ಚಿದ ಕಾರ್ಯಕರ್ತರು ಮುಂದಾಗುವ ಅನಾಹುತವನ್ನು ತಪ್ಪಿಸಿದರು.

ಮತ್ತೊಂದು ಕಡೆ ಸೈಯದ್ ಇಕ್ಬಾಲ್ ಎಂಬಾತ ಮನೆ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಬೀಳಲು ಯತ್ನಿಸಿದನು. ತಕ್ಷಣವೇ ಪೊಲೀಸರು ಮತ್ತು ಕಾರ್ಯಕರ್ತರು ತಾರಸಿ ಏರಿ ಆತನನ್ನು ತಡೆದರು. ಈ ವೇಳೆ ಎಲ್ಲರನ್ನು ತಳ್ಳಿ ಕೆಳಗೆ ಬೀಳುತ್ತೇನೆಂದು ನಿಂತಿದ್ದ ಎಕ್ಬಾಲ್‌ರನ್ನು ಪೊಲೀಸರು ಬುದ್ಧಿವಾದ ಹೇಳಿ ಕೆಳಗಿಳಿಯುವಂತೆ ಮಾಡಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, "2019ರ ನವೆಂಬರ್‌ನಲ್ಲಿ ಆದ ಮಾರಣಾಂತಿಕ ಹಲ್ಲೆಯು ಆರೋಗ್ಯದ ಮೇಲೆ ಪರಿಣಾಮ ಬೀರಿದ್ದು, ಇನ್ನೂ ಚೇತರಿಸಿಕೊಂಡಿಲ್ಲ. ಅನಾರೋಗ್ಯದ ಕಾರಣ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲ. ಬೆಳಗಾವಿ ವಿಧಾನಸಭಾ ಅಧಿವೇಶನದ ಸಂದರ್ಭದಲ್ಲಿಯೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ ಸಿಂಗ್ ಸುರ್ಜೇವಾಲ, ವಿಧಾನಸಭೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದೆ. ಯಾವ ನಿರ್ಧಾರ ತೆಗೆದುಕೊಳ್ಳದಂತೆ, ಯಾರಿಗೂ ಹೇಳದಂತೆ ಸೂಚಿಸಿದ್ದರು'' ಎಂದು ತಿಳಿಸಿದರು.

ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಒತ್ತಡವಿದ್ದರಿಂದ ಎನ್.ಆರ್.ಕ್ಷೇತ್ರದ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದೆ. ಇತ್ತೀಚೆಗೆ ಛತ್ತೀಸಗಡದ ರಾಯಪುರದಲ್ಲಿ ನಡೆದ ಕಾಂಗ್ರೆಸ್ ಮಹಾಧಿವೇಶನದಲ್ಲೂ ವರಿಷ್ಠರು ಆತುರದ ನಿರ್ಧಾರ ತೆಗೆದುಕೊಳ್ಳದಂತೆ ನಿರ್ದೇಶಿಸಿದ್ದರು. ಹೀಗಾಗಿ ಸ್ಪರ್ಧಿಸದಿರುವ ಕುರಿತು ಡಿಸೆಂಬರ್‌ನಿಂದ ಗೌಪ್ಯತೆ ಕಾಯ್ದುಕೊಂಡಿದ್ದೆ ಎಂದು ತಿಳಿಸಿದರು.
ಇನ್ನು ಇದೀಗ ಮಾಧ್ಯಮಗಳ ಮೂಲಕ ಗೊತ್ತಾಗಿದೆ. ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದು, ರಾಜಕಾರಣದಲ್ಲಿ ಇರುವವರೆಗೂ ಕಾಂಗ್ರೆಸ್‌ನಲ್ಲಿ ಇರುತ್ತೇನೆ. ಅನಾರೋಗ್ಯದ ನಡುವೆಯೂ ಕಳೆದ 4 ವರ್ಷದಿಂದ ಜವಾಬ್ದಾರಿ ನಿರ್ವಹಿಸಿರುವ ತೃಪ್ತಿ ಇದೆ. ಹೈಕಮಾಂಡ್ ನಿರ್ಧಾರದಂತೆ ನಡೆದುಕೊಳ್ಳುವೆ, ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡುವೆ ಎಂದು ತನ್ವೀರ್ ಸೇಠ್ ಹೇಳಿದರು.
ಚುನಾವಣಾ ರಾಜಕಾರಣದಿಂದ ನಿವೃತ್ತಿಗೆ ಮಾಜಿ ಸಚಿವ, ಶಾಸಕ ತನ್ವೀರ್ ಸೇಠ್ ನಿರ್ಧರಿಸಿದ್ದು, ಈ ಸಂಬಂಧ ಪಕ್ಷದ ಹೈಕಮಾಂಡ್‌ಗೆ ಪತ್ರ ಬರೆದಿದ್ದಾರೆ. ಕಳೆದ ಡಿಸೆಂಬರ್ ತಿಂಗಳಿನಲ್ಲೇ ತನ್ವೀರ್ ಸೇಠ್ 'ತಾವು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ' ಎಂದು ಲಿಖಿತವಾಗಿ ಎಐಸಿಸಿ ಹಾಗೂ ಕೆಪಿಸಿಸಿ ನಾಯಕರಿಗೆ ತಿಳಿಸಿದ್ದಾರೆ. ಆದರೆ, ರಾಜ್ಯದ ಚುನಾವಣೆ ಉಸ್ತುವಾರಿ ವಹಿಸಿರುವ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ನಿರ್ಧಾರ ಕೈಬಿಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777












Click it and Unblock the Notifications