ರವಿ ಪೂಜಾರಿ ಬಗ್ಗೆ ಹೊಸ ಬಾಂಬ್ ಸಿಡಿಸಿದ ತನ್ವೀರ್ ಸೇಠ್
ಮೈಸೂರು, ಫೆಬ್ರವರಿ 24: ರವಿ ಪೂಜಾರಿಯಿಂದ ಶಾಸಕ ತನ್ವೀರ್ ಸೇಠ್ ಗೆ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಹೊಸ ಬಾಂಬ್ ಸಿಡಿಸಿದ ಶಾಸಕ ತನ್ವೀರ್ ಸೇಠ್, "ನನಗೆ ಮತ್ತು ಸಾ.ರಾಗೆ ಮಾತ್ರ ಬೆದರಿಕೆ ಇರಲಿಲ್ಲ. ಇನ್ನೂ ಸಾಕಷ್ಟು ಜನ ಶಾಸಕರಿಗೆ ಬೆದರಿಕೆ ಇತ್ತು. ನಾನು, ಸಾ.ರಾ.ಮಹೇಶ್ ಮಾತ್ರ ದೂರು ಕೊಟ್ಟಿದ್ದೆವು" ಎಂದಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಅವರು, "ತನಿಖೆ ನಂತರ ಯಾವೆಲ್ಲ ಶಾಸಕರಿಗೆ ಬೆದರಿಕೆ ಇತ್ತು ಎಂಬುದು ಬಯಲಾಗುತ್ತದೆ. ಸದ್ಯ ಆತನನ್ನು ಬಂಧಿಸಿ ಕರೆತಂದಿದ್ದಾರೆ. ಇನ್ನು ಮೇಲೆ ಎಲ್ಲಾ ವಿಚಾರಗಳು ಬೆಳಕಿಗೆ ಬರಲಿವೆ. ನನಗೆ ಬೆದರಿಕೆ ಹಾಕಿದ್ದ ಬಗ್ಗೆ ಅಂದು ದೂರು ನೀಡಿದ್ದೆ. ಆದರೆ ಹೆಚ್ಚಾಗಿ ಆ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ" ಎಂದರು.
ಪಿಎಫ್ ಐ, ಎಸ್‌ಡಿಪಿಐ ಬ್ಯಾನ್ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, "ನನ್ನ ಮೇಲೆ ಯಾರು, ಏತಕ್ಕಾಗಿ ಹಲ್ಲೆ ಮಾಡಿದ್ದಾರೆ ಗೊತ್ತಿಲ್ಲ. ಅದನ್ನು ಗೊತ್ತಿಲ್ಲದೆ ನಾನು ಹೇಳಲು ಸಾಧ್ಯವಿಲ್ಲ. ಸದ್ಯ ಪ್ರಕರಣವನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ಮುಕ್ತಾಯದ ಬಳಿಕ ಈ ಬಗ್ಗೆ ಸ್ಪಷ್ಟನೆ ಸಿಗಲಿದೆ" ಎಂದರು.

"ನನಗೆ ಹೆಚ್ಚಿನ ಭದ್ರತೆ ಬೇಕಿಲ್ಲ, ನನ್ನ ಜೊತೆ ನನ್ನ ಕಾರ್ಯಕರ್ತರೇ ಇದ್ದಾರೆ. ಸಾವನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ. ಆದರೆ ನನಗೆ ಒಳ್ಳೆಯ ಸಾವು ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ನಾನು ಈಗ ಆರೋಗ್ಯವಾಗಿದ್ದೇನೆ. ಧ್ವನಿ ಪೆಟ್ಟಿಗೆ ಮಾತ್ರ ಹಂತಹಂತವಾಗಿ ಸರಿಯಾಗಲಿದೆ. ಧ್ವನಿ ಸರಿಯಾಗಲು ಥೆರಪಿ ಟ್ರೀಟ್ ಮೆಂಟ್ ನಡೆಯುತ್ತಿದೆ. ಅದನ್ನು ಹೊರತುಪಡಿಸಿ ನಾನು ಫುಲ್ ಆರಾಮವಾಗಿದ್ದೇನೆ" ಎಂದು ತಿಳಿಸಿದರು.












Click it and Unblock the Notifications