ಸ್ವಚ್ಛತಾ ಹಿ ಸೇವಾ ಆಂದೋಲನಕ್ಕೆ ಮೆರಗು ತಂದ ಪಿಡಿಓ: ಹೇಗೆ ಮತ್ತು ಎಲ್ಲಿ?
ಮೈಸೂರು, ಅಕ್ಟೋಬರ್ 29: ನಾವು ಉಪಯೋಗಕ್ಕೆ ಬರಲ್ಲವೆಂದು ಎಲ್ಲೆಲ್ಲೋ ಎಸೆಯುವ ಯಾವುದೇ ಪದಾರ್ಥಗಳು ವ್ಯರ್ಥ ವಸ್ತು ಅಲ್ಲ. ಅವು ಕೊನೆ ಪಕ್ಷ ಅದು ಕೊಳೆತು ಗೊಬ್ಬರವಾಗಿಯಾದರೂ ಭೂಮಿ ಸೇರಬೇಕು. ನಾವು ನಿತ್ಯ ಬಳಸಿ ಪೇಪರ್, ರಟ್ಟು, ಬಾಟಲಿ, ಹೀಗೆ ಹಳೆಯ ವಸ್ತುಗಳನ್ನೆಲ್ಲ ಇದು ನಿರುಪಯೋಗಿ ಎಂದು ಎಸೆದು ಬಿಡುತ್ತೇವೆ.
ಆದರೆ ಕಸವೂ ರಸವಾಗುತ್ತದೆ ಎಂಬುದನ್ನು ನಮ್ಮ ನಿಮ್ಮ ನಡುವೆ ಹಲವರು ಹಲವು ರೀತಿಯಲ್ಲಿ ತೋರಿಸಿದ್ದಾರೆ. ಇಂತಹವರ ನಡುವೆ ಗ್ರಾಪಂ ಪಿಡಿಓ ಒಬ್ಬರು ಒಂದು ಹೆಜ್ಜೆ ಮುಂದೆ ಹೋಗಿ ಅನುಪಯುಕ್ತ ವಸ್ತುಗಳಿಂದಲೇ ಹಲವು ಕಲಾಕೃತಿಗಳನ್ನು ತಯಾರಿಸಿ ಸಾರ್ವಜನಿಕರಿಗೆ ಸ್ವಚ್ಛತೆಯ ಅರಿವು ಮೂಡಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

ನಮ್ಮ ನಿಮ್ಮ ನಡುವೆ ಇರುವ ಕಲೆಗಾರರ ಕೈಗೆ ಏನೇ ಸಿಕ್ಕರೂ ಅದು ಕಲಾಕೃತಿಯಾಗುತ್ತದೆ ಎನ್ನುವುದು ಹಿಂದಿನಿಂದಲೂ ರೂಢಿಯಲ್ಲಿರುವ ಮಾತಾಗಿದೆ. ಅದು ನಿಜ ಎಂಬುದನ್ನು ಇದೀಗ ಜಿಲ್ಲೆಯ ಟಿ ನರಸೀಪುರ ತಾಲೂಕಿನ ಹೊಸಕೋಟೆಯ ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿ ವಿ.ಎನ್.ಪೂರ್ಣಿಯಾ ತೋರಿಸಿಕೊಟ್ಟಿದ್ದಾರೆ. ಇವರ ಹೊಸ ಕಲ್ಪನೆಯಾಗಿರುವ 'ವೇಸ್ಟ್ ಟು ಆರ್ಟ್; ನಿಜಕ್ಕೂ ಜನಸಾಮಾನ್ಯರ ಗಮನಸೆಳೆಯುವಂತೆ ಮಾಡಿದೆ. ಜೊತೆಗೆ ಗ್ರಾಮದ ಜನರಲ್ಲಿ ಸ್ವಚ್ಛತೆಯ ಅರಿವನ್ನುಂಟು ಮಾಡುತ್ತಿದೆ.
ಈ ಭೂಮಿ ಮೇಲೆ ಯಾವುದೂ ವ್ಯರ್ಥ ವಸ್ತುವಲ್ಲ ಅದನ್ನು ಒಂದಲ್ಲ ಒಂದು ರೀತಿಯಲ್ಲಿ ಮರು ಬಳಕೆ ಮಾಡಬಹುದು. ಅಷ್ಟೇ ಅಲ್ಲದೆ ಎಸೆಯುವ ಪ್ರತಿ ವಸ್ತುಗಳಿಂದಲೂ ಏನಾದರೊಂದು ಆಕರ್ಷಕ ಕಲಾ ಕೃತಿಗಳನ್ನು ತಯಾರಿಸಬಹುದು ಎಂಬುದನ್ನು ತೋರಿಸಿಕೊಟ್ಟು ಇತರರಿಗೆ ಮಾದರಿಯಾಗಿದ್ದಾರೆ. ಅಯ್ಯೋ ಮಾಡೋದಕ್ಕೆ ಸಾಕಷ್ಟು ಕೆಲಸವಿರುವಾಗ ಇದೆಲ್ಲ ತಲೆನೋವು ನಮಗ್ಯಾಕೆ ನಮ್ಮದೆಷ್ಟು ಇದೆಯೋ ಅಷ್ಟು ಕೆಲಸವನ್ನು ಮಾಡಿಕೊಂಡು ಹೋದರೆ ಸಾಕು ಎಂದು ಹೇಳುವ ಸರ್ಕಾರಿ ನೌಕರರ ನಡುವೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ವಿ.ಎನ್.ಪೂರ್ಣಿಯಾ ಅವರ ಕಾರ್ಯ ಶ್ಲಾಘನೀಯವಾಗಿದೆ.

ಪೂರ್ಣಿಯಾ ಅವರು ಅಭಿವೃದ್ಧಿ ಅಧಿಕಾರಿಯಾಗಿರುವ ಹೊಸಕೋಟೆಯ ಗ್ರಾಮ ಪಂಚಾಯತ್ ಭೇಟಿ ನೀಡಿದರೆ ತ್ಯಾಜ್ಯ ವಸ್ತುಗಳು ಇಲ್ಲಿ ಹೊಸರೂಪ ತಾಳಿ ನಿಂತಿವೆ. ಹಳೆ ಚಮಚ -ರಟ್ಟುಗಳಿಂದ ರಣಹದ್ದಿನ ಕಲಾಕೃತಿ , ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಎಲ್ಲೆಂದರಲ್ಲಿ ಎಸೆಯಲಾಗುವ ಮೊಳೆ, ಮತ್ತಿತರ ವಸ್ತುಗಳಿಂದ ಬುದ್ಧನ ಪ್ರತಿಕೃತಿ, ಬಿಯರ್- ವೈನ್ ಬಾಟಲ್ ಗಳಿಂದ ಮನೆಯ ಅಲಂಕಾರಿಕ ವಸ್ತುಗಳು, ಶ್ರೀ ಕೃಷ್ಣನ ಪ್ರತಿಕೃತಿ, ಸವೆದ ವಾಹನ ಚಕ್ರಗಳಿಂದ, ಸ್ಥಳೀಯವಾಗಿ ದೊರಕುವ ಕಲ್ಲುಗಳಿಂದ ನೇತಾಡುವ ಕನ್ನಡಿ ಕಣ್ಮನ ಸೆಳೆಯುತ್ತವೆ.

ಇಷ್ಟಕ್ಕೆ ಮುಗಿಯುವುದಿಲ್ಲ ಬಿಸಾಡಲು ಯೋಗ್ಯವಾದ ಬಟ್ಟೆಗಳಿಂದ ನೈಸರ್ಗಿಕ ಬಣ್ಣ ಬಳಸಿ ನಾನಾ ಬ್ಯಾನರ್ ಗಳನ್ನು ತಯಾರಿಸಿದ್ದರೆ, ಎಲ್ಲೆಂದರಲ್ಲಿ ಸಿಗುವ ತ್ಯಾಜ್ಯ ವಸ್ತುಗಳಿಗೆ ಇಲ್ಲಿ ಕಲೆಯ ಸ್ಪರ್ಶ ನೀಡಿ, ಅವುಗಳ ಮೂಲಕ ಸ್ವಚ್ಛ ಭಾರತದ ಸಂದೇಶ ರವಾನಿಸುವ ಕೆಲಸವನ್ನು ಮಾಡಿದ್ದಾರೆ. ಹೀಗಾಗಿ ಇಲ್ಲಿನ ಗ್ರಾಮ ಪಂಚಾಯತ್ ಕಚೇರಿ ಕೇವಲ ಕಚೇರಿಯಾಗಿ ಕಾಣದೆ ಒಂದು ಕಲಾ ಕೇಂದ್ರದಂತೆ ಕಂಗೊಳಿಸುತ್ತಿದೆ ಎಂದರೆ ಅತಿ ಶಯೋಕ್ತಿಯಾಗಲಾರದು. ಇದೆಲ್ಲವನ್ನು ಮಾಡುವ ಮೂಲಕ ಸೃಜನಶೀಲ ಗ್ರಾಪಂ ಅಭಿವೃದ್ಧಿ ಅಧಿಕಾರಿಯಾಗಿರುವ ಪೂರ್ಣಿಯಾ ಅವರು ದೇಶದೆಲ್ಲೆಡೆ ಸಾಗುತ್ತಿರುವ ಸ್ವಚ್ಛತಾ ಹಿ ಸೇವಾ ಆಂದೋಲನಕ್ಕೆ ತಮ್ಮ ಪಂಚಾಯಿತಿ ಮೂಲಕ ವಿಭಿನ್ನ ಮತ್ತು ವಿಶಿಷ್ಟವಾಗಿ ಸಾಥ್ ನೀಡಿದ್ದಾರೆ.












Click it and Unblock the Notifications