ಮಗಳಿಗೆ ವರದಕ್ಷಿಣೆ ಕಿರುಕುಳ, ತಾಯಿ ವಿಷ ಸೇವಿಸಿ ಆತ್ಮಹತ್ಯೆ
ಮೈಸೂರು, ಮಾರ್ಚ್ 10: ವರದಕ್ಷಿಣೆ ಕೊಡುವಂತೆ ಮಗಳಿಗೆ ಪೀಡನೆ, ಜತೆಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಕಾರಣಕ್ಕೆ ಬೇಸತ್ತು ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೃತರನ್ನು ಬಸವೇಶ್ವರ ರಸ್ತೆ ನಿವಾಸಿ ರಾಜೇಶ್ವರಿ (50) ಎಂದು ಗುರುತಿಸಲಾಗಿದೆ. ರಾಜೇಶ್ವರಿ ಅವರ ಮಗಳು ಸೌಮ್ಯಶ್ರೀಯನ್ನು ಶ್ರೀರಂಗಪಟ್ಟಣ ಅಲಗೂಡು ಗ್ರಾಮದ ರವಿಕುಮಾರ್ ಗೆ ಎರಡು ವರ್ಷದ ಹಿಂದೆ ಮದುವೆ ಮಾಡಲಾಗಿತ್ತು. ನಾಲ್ಕು ತಿಂಗಳ ಕಾಲ ಅನ್ಯೋನ್ಯ ಜೀವನ ಸಾಗಿಸಿದ ನಂತರ ವರದಕ್ಷಿಣೆಗಾಗಿ ರವಿಕುಮಾರ್ ಕಿರುಕುಳ ನೀಡಿ ಪತ್ನಿ ಸೌಮ್ಯಶ್ರೀ ಯನ್ನು ತವರು ಮನೆಗೆ ಕಳುಹಿಸಿದ್ದ.

ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ನಂತರ ಸೌಮ್ಯಶ್ರೀ ಮತ್ತೆ ಪತಿ ಮನೆ ಸೇರಿದ್ದಳು. ಆದರೆ ರವಿಕುಮಾರ್ ಪದೇ ಪದೇ ವರದಕ್ಷಿಣೆ ಕಿರುಕುಳ ನೀಡುತ್ತಿದ್ದು, ಸೌಮ್ಯಶ್ರೀ ತಾಯಿ ರಾಜೇಶ್ವರಿ ಅಳಿಯನಿಗೆ ಮೊಬೈಲ್ ಫೋನ್ ನಲ್ಲಿ ಕರೆ ಮಾಡಿ ಬುದ್ಧಿವಾದ ಹೇಳಿದ್ದರು.[ಹಾಸನ: ಡಬಲ್ ಮರ್ಡರ್ ಕೇಸ್ ನಲ್ಲಿ ಏಳು ಮಂದಿ ಅರೆಸ್ಟ್]
ಇದನ್ನು ರೆಕಾರ್ಡ್ ಮಾಡಿಕೊಂಡ ರವಿಕುಮಾರ್, ತನಗೆ ಪತ್ನಿ ತವರು ಮನೆಯಿಂದ ಬೆದರಿಕೆ ಹಾಕಿದ್ದಾಗಿ ಅರಕೆರೆ ಠಾಣೆಗೆ ದೂರು ದಾಖಲಿಸಿದ್ದ. ಅಲ್ಲದೆ ರಾಜೇಶ್ವರಿಗೆ ಮಾನಸಿಕವಾಗಿ ಕಿರುಕುಳ ಕೊಟ್ಟಿದ್ದಾನೆ ಎನ್ನಲಾಗಿದೆ. ಇದರಿಂದ ಮನನೊಂದ ರಾಜೇಶ್ವರಿ ಗುರುವಾರ ರಾತ್ರಿ ಡೆತ್ ನೋಟ್ ಬರೆದಿಟ್ಟು, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿವಿಧ ಹೆಸರಿನಲ್ಲಿ ವಂಚಿಸುತ್ತಿದ್ದ ವ್ಯಕ್ತಿಯ ಬಂಧನ
ವ್ಯಕ್ತಿಯೋರ್ವ ತನ್ನನ್ನು ವಿವಿಧ ಹೆಸರುಗಳಲ್ಲಿ ಪರಿಚಯಿಸಿಕೊಂಡು, ರಾಜ್ಯಾದ್ಯಂತ ಹಲವರಿಗೆ ಕೆಲಸ ಕೊಡಿಸುವುದಾಗಿ ಲಕ್ಷಾಂತರ ರುಪಾಯಿ ಪಂಗನಾಮ ಹಾಕಿ ಇದೀಗ ಪೊಲೀಸರ ಆತಿಥ್ಯ ಸ್ವೀಕರಿಸುತ್ತಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ 2.80 ಲಕ್ಷ ರುಪಾಯಿ ಹಣ ಪಡೆದು, ವಂಚಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಹಾಸನ ಮೂಲದ ಪ್ರೀತಂ ಎಂದು ಗುರುತಿಸಲಾಗಿದೆ. ಈತ ಕೆ.ಆರ್.ಮೊಹಲ್ಲಾ ನಿವಾಸಿ ಉಮೇಶ್ ಎಂಬವರ ಬಳಿ ನಿಮ್ಮ ಮಗನಿಗೆ ರೈಲ್ವೆ ಇಲಾಖೆಯಲ್ಲಿ ಟಿಕೆಟ್ ಪರಿವೀಕ್ಷಕ ಹುದ್ದೆ ಕೊಡಿಸುವುದಾಗಿ ಹೇಳಿ, 10 ಲಕ್ಷ ರುಪಾಯಿ ನೀಡುವಂತೆ ಕೇಳಿದ್ದ.
ಮೊದಲು 2.80 ಲಕ್ಷ ನೀಡಿ, ನೇಮಕ ಆದೇಶ ಬಂದ ನಂತರ ಉಳಿದ ಹಣ ನೀಡಬಹುದು ಎಂದಿದ್ದ. ಪ್ರೀತಂ ಮಾತನ್ನು ನಂಬಿ, ಪುಷ್ಪಾ ಅವರ ಬ್ಯಾಂಕ್ ಖಾತೆಗೆ ಎರಡು ಬಾರಿ 90 ಸಾವಿರ ರುಪಾಯಿ ಜಮಾ ಮಾಡಿದ್ದಾರೆ. ಆ ನಂತರ 1 ಲಕ್ಷ ರುಪಾಯಿ ಜಮಾ ಮಾಡಿದ್ದಾರೆ.[ಕಳ್ಳತನದ ಆರೋಪ: ಪತಿ-ಪತ್ನಿ ಆತ್ಮಹತ್ಯೆ]
ಹಣ ಪಡೆದ ನಂತರ ಕೆಲಸ ಈಗ ಕೊಡಿಸುತ್ತೇನೆ, ಆಗ ಕೊಡಿಸುತ್ತೇನೆ ಎಂದು ಸತಾಯಿಸುತ್ತಿದ್ದ. ಇದರಿಂದ ಬೇಸರಗೊಂಡ ಉಮೇಶ್ ಕೆ.ಆರ್.ಠಾಣೆಗೆ ದೂರು ನೀಡಿದ್ದು, ಆರೋಪಿಯ ಜಾಡು ಹಿಡಿದು ಹೊರಟ ಪೊಲೀಸರಿಗೆ ಈತ ಮಾಡಿದ ಹಲವು ವಂಚನೆ ಪ್ರಕರಣಗಳು ತಿಳಿದುಬಂದಿದೆ.
ಈತ ಸುಮಾರು 1500 ಯುವತಿಯರನ್ನು ಮ್ಯಾಟ್ರಿಮೋನಿಯಲ್ ಮೂಲಕ ಪರಿಚಯಿಸಿಕೊಂಡು ನಂತರ ಕೆಲಸ ಕೊಡಿಸುವ ಆಮಿಷವೊಡ್ಡಿ ವಂಚಿಸುತ್ತಿದ್ದ. ವಿವಿಧ ಹೆಸರುಗಳಲ್ಲಿ ತನ್ನನ್ನು ಪರಿಚಯಿಸಿಕೊಂಡಿದ್ದ.
ಬೆಂಗಳೂರಿನ ಹೆಬ್ಬುಗೋಡಿ ಠಾಣೆಯಲ್ಲೂ ಈತನ ಮೇಲೆ ವಂಚನೆ ಪ್ರಕರಣ ದಾಖಲಾಗಿದೆ. ಈತ ನಕಲಿ ಗುರುತಿನ ಪತ್ರಗಳನ್ನು ಬಳಸಿ ವಂಚಿಸುತ್ತಿದ್ದ. ಬೆಂಗಳೂರು, ಧಾರವಾಡ, ಹುಬ್ಬಳ್ಳಿ ಸೇರಿದಂತೆ ಹಲವೆಡೆ ಅಮಾಯಕರನ್ನು ವಂಚಿಸಿದ್ದಾನೆ.[ಹಾಸನದ ಲಾಡ್ಜ್ ನಲ್ಲಿ ನೇಣಿಗೆ ಕೊರಳು ಕೊಟ್ಟ ಅಣ್ಣ-ತಮ್ಮ]
ರೈಲ್ವೆ ಇಲಾಖೆಯಲ್ಲಿ ದಾಖಲೆ ಪರಿಶೀಲನೆ ವಿಭಾಗದ ಅಧಿಕಾರಿ ಎಂದು ಎಲ್ಲರನ್ನೂ ನಂಬಿಸಿ ವಂಚಿಸಿದ್ದಾನೆ. ಕೆ.ಆರ್.ಠಾಣೆ ಇನ್ ಸ್ಪೆಕ್ಟರ್ ಪ್ರಕಾಶ್, ಎಎಸ್ ಐ ಲಕ್ಷ್ಮಿನಾರಾಯಣ ತನಿಖೆ ನಡೆಸುತ್ತಿದ್ದಾರೆ. ಬಂಧಿತನಿಂದ ಕಾರನ್ನು ವಶಕ್ಕೆ ಪಡೆದಿದ್ದಾರೆ.
ಬಸ್ಸು ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಸಾವು
ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಸೇರಿದ ಬಸ್ಸು ಹಾಗೂ ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿಯಾದ ಪರಿಣಾಮ ದ್ವಿಚಕ್ರವಾಹನ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಮುಡಾ ವೃತ್ತದ ಬಳಿ ಗುರುವಾರ ರಾತ್ರಿ 10ರ ಸುಮಾರಿಗೆ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಸೇರಿದ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ದ್ವಿಚಕ್ರವಾಹನ ಸವಾರ ಉರುಳಿಬಿದ್ದ ಪರಿಣಾಮ ತಲೆಗೆ ಗಂಭೀರ ಏಟು ಬಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಬಸ್ಸು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.[ಮೈಸೂರಿನಲ್ಲಿ ಪ್ರಾಣರಕ್ಷಣೆಗಾಗಿ ರೌಡಿಗೆ ಚಾಕುವಿನಿಂದ ತಿವಿತ]
ಅಪಘಾತದ ಸಂಭವಿಸುತ್ತಿದ್ದಂತೆ ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರು ಪ್ರತಿಭಟನೆಯಲ್ಲಿ ನಿರತರಾದರು. ಇಲ್ಲಿ ಒಂದು ಹಂಪ್ಸ್ ಹಾಗೂ ಸಿಗ್ನಲ್ ಅಳವಡಿಸಿಲ್ಲ. ನಾಲ್ಕು ಕಡೆಯಿಂದಲೂ ವಾಹನಸ ವಾರರು ಏಕಾಏಕಿ ನುಗ್ಗುತ್ತಾರೆ. ಇದರಿಂದ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ ಎಂದು ಆರೋಪಿಸಿದರು.












Click it and Unblock the Notifications