ಶ್ರೀರಂಗಪಟ್ಟಣ ದಸರಾದಲ್ಲಿ ಪಟಾಕಿ ಸದ್ದಿಗೆ ಬೆದರಿ ತಿರುಗಿಬಿದ್ದ ಆನೆ; ದಿಕ್ಕಾಪಾಲಾದ ಜನ
ಮೈಸೂರು, ಅಕ್ಟೋಬರ್ 9: ಮೈಸೂರು ಜಿಲ್ಲೆಯ ಶ್ರೀರಂಗಪಟ್ಟಣದ ದಸರೆಯಲ್ಲಿ ಭಾರೀ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದ್ದು, ಪಟಾಕಿ ಶಬ್ದಕ್ಕೆ ಬೆದರಿದ ಗೋಪಾಲಸ್ವಾಮಿ ಆನೆ ಗಾಬರಿಯಿಂದ ಹಠಾತ್ತನೆ ಜನರತ್ತ ತಿರುಗಿಬಿದ್ದ ಘಟನೆ ನಡೆದಿದೆ.
ಶ್ರೀರಂಗಪಟ್ಟಣ ದಸರಾ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ದೇವಿಯನ್ನು ಪ್ರತಿಷ್ಠಾಪಿಸಿದ್ದ ಅಂಬಾರಿ ಹೊತ್ತಿದ್ದ ಗೋಪಾಲಸ್ವಾಮಿ ಆನೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕುತ್ತಾ ಸಾಗುತ್ತಿದ್ದ. ಈ ವೇಳೆ ಸ್ಥಳೀಯರು ಪಟಾಕಿ ಸಿಡಿಸಿದ್ದಾರೆ.
ಪಟಾಕಿ ಸದ್ದಿಗೆ ಬೆದರಿದ ಗೋಪಾಲಸ್ವಾಮಿ, ಅಂಬಾರಿ ಸಹಿತ ಏಕಾಏಕಿ ಜನರತ್ತ ಹಿಂದಿರುಗಿ ಬಿದ್ದಿದ್ದಾನೆ. ಇದರಿಂದ ಗಾಬರಿಗೊಂಡ ಜನರು ದಿಕ್ಕಾಪಾಲಾಗಿ ಓಡಿದರು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ವಲ್ಪ ಕಾಲ ಮೆರವಣಿಗೆಯನ್ನು ಸ್ಥಗಿತಗೊಳಿಸಿದರು.

ಮೈಸೂರಿನಲ್ಲೂ ಪಟಾಕಿ ಟ್ರೈನಿಂಗ್ ಹಾಗೂ ಫಿರಂಗಿ ತಾಲೀಮಿನ ವೇಳೆಯಲ್ಲೂ ಗೋಪಾಲಸ್ವಾಮಿ ಆನೆ ಬೆದರಿದ್ದ. ಇದೀಗ ಪಟಾಕಿ, ವಾದ್ಯದ ಸದ್ದಿಗೆ ಬೆದರಿದ್ದಾನೆ.
ನಾಡದೇವಿಗೆ ಪುಷ್ಪಾರ್ಚನೆ ಬಳಿಕ ಮರದ ಅಂಬಾರಿ ಹೊತ್ತಿದ್ದ ಗೋಪಾಲಸ್ವಾಮಿ ಆನೆ ಬೆದರಿದ್ದು, ಶ್ರೀರಂಗಪಟ್ಟಣದ ಬನ್ನಿಮಂಟಪ ಬಳಿ ಈ ಘಟನೆ ನಡೆದಿದೆ. ಗಾಬರಿಗೊಂಡು ಒಂದು ಸುತ್ತು ತಿರುಗಿದ ಗೋಪಾಲಸ್ವಾಮಿ ಏಕಾಏಕಿ ಹಿಂದಕ್ಕೆ ತಿರುಗಿ ನಿಂತಿದ್ದಾನೆ. ಈ ನಡುವೆ ಆನೆ ಬೆದರುತ್ತಿದ್ದಂತೆ ಜನರು ಸಹ ಚೆಲ್ಲಾಪಿಲ್ಲಿಯಾಗಿ ಓಡಿದರು. ಈ ನಡುವೆ ವಾದ್ಯ, ಧ್ವನಿವರ್ಧಕ ಬಂದ್ ಮಾಡಿದ ಬಳಿಕ ಆನೆ ಸಮಾಧಾನಗೊಂಡಿತು.
ಶ್ರೀರಂಗಪಟ್ಟಣದ ದಸರಾ ಮಹೋತ್ಸವದಲ್ಲಿ ಪಟಾಕಿ ಸದ್ದಿಗೆ ಗೋಪಾಲಸ್ವಾಮಿ ಆನೆ ಬೆದರಿದ ಹಿನ್ನೆಲೆ ಜಂಬೂಸವಾರಿ ಮೆರವಣಿಗೆ ಸ್ಥಗಿತಗೊಳಿಸಲಾಗಿದೆ. ಗೋಪಾಲಸ್ವಾಮಿ ಬೆನ್ನ ಮೇಲಿದ್ದ ಮರದ ಅಂಬಾರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಕೆಳಗೆ ಇಳಿಸಿದರು. ನಂತರ ಬೆಳ್ಳಿ ರಥದಲ್ಲಿ ಚಾಮುಂಡೇಶ್ವರಿ ವಿಗ್ರಹ ಇಟ್ಟು ಮೆರವಣಿಗೆ ನಡೆಸಿದರು.

ಇದಕ್ಕೂ ಮುನ್ನ ಶ್ರೀರಂಗಪಟ್ಟಣ ದಸರಾಗೆ ವಿದ್ಯುಕ್ತ ಚಾಲನೆ ನೀಡಲಾಯಿತು. ನಾಡದೇವತೆ ಚಾಮುಂಡೇಶ್ವರಿ ವಿಗ್ರಹಕ್ಕೆ ಆದಿ ಚುಂಚನಗಿರಿ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ಪುಷ್ಟಾರ್ಚನೆ ಮಾಡುವ ಮೂಲಕ ಶ್ರೀರಂಗಪಟ್ಟಣ ದಸರಾ ಮೆರವಣಿಗೆಯನ್ನು ಉದ್ಘಾಟನೆ ಮಾಡಿದರು.
ಈ ವೇಳೆ ಚುಂಚಶ್ರೀ ಜೊತೆಗೆ ಕ್ರೀಡಾ ಸಚಿವ ಕೆ.ಸಿ. ನಾರಾಯಣಗೌಡ, ಸ್ಥಳೀಯ ಶಾಸಕ ರವೀಂದ್ರ ಶ್ರೀಕಂಠಯ್ಯ ಸೇರಿದಂತೆ ಅಧಿಕಾರಿಗಳು ಪುಷ್ಟಾರ್ಚನೆ ಮಾಡಿದರು. ಶುಭ ಕುಂಭ ಲಗ್ನದಲ್ಲಿ ಜಂಬೂ ಸವಾರಿ ಆರಂಭವಾಗಿತ್ತು. ಬನ್ನಿ ಮರಕ್ಕೆ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ಸಹ ನಡೆಸಲಾಗಿತ್ತು.
ಈ ಎಲ್ಲಾ ಪೂಜಾ ಕೈಂಕರ್ಯ ಮುಗಿದ ಬಳಿಕ ಜಂಬೂಸವಾರಿ ಆರಂಭಿಸಲಾಗಿತ್ತು. ನಾಡದೇವಿ ಚಾಮುಂಡೇಶ್ವರಿ ಹೊತ್ತ ಗೋಪಾಲಸ್ವಾಮಿ ಆನೆ ನಿಧಾನವಾಗಿ ಹೆಜ್ಜೆ ಹಾಕುತ್ತಾ ಮೆರವಣಿಗೆಯಲ್ಲಿ ಸಾಗುತ್ತಿದ್ದ. ಅಂಬಾರಿ ಹೊತ್ತು ಸಾಗುತ್ತಿದ್ದ ಗೋಪಾಲಸ್ವಾಮಿಗೆ ಕಾವೇರಿ ಆನೆ ಸಾಥ್ ನೀಡಿತ್ತು.
ಮೆರವಣಿಗೆಯಲ್ಲಿ ಭಾಗವಹಿಸಿದ್ದ 25ಕ್ಕೂ ಹೆಚ್ಚು ಕಲಾತಂಡಗಳು ಶ್ರೀರಂಗಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಶ್ರೀರಂಗನಾಥ ದೇವಾಲಯದ ಬಳಿ ಜಂಬೂಸವಾರಿ ಸಂಪನ್ನವಾಗಬೇಕಿತ್ತು. ಆದರೆ ದಾರಿ ಮಧ್ಯೆ ಆನೆಗಳು ಬೆದರಿದ ಕಾರಣ ಅರ್ಧದಲ್ಲೇ ನಿಲ್ಲಿಸಬೇಕಾಯಿತು.












Click it and Unblock the Notifications