ಧರ್ಮಸ್ಥಳದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಸೌಜನ್ಯ ಪೋಷಕರೊಂದಿಗೆ ಸಂವಾದ
ಮೈಸೂರು, ಜುಲೈ, 14: ಧರ್ಮಸ್ಥಳದಲ್ಲಿ ಕಳೆದ ಹತ್ತು ವರ್ಷಗಳ ಹಿಂದೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಸೌಜನ್ಯ ಪ್ರಕರಣ ಸಂಬಂಧ ಮೈಸೂರಿನ ಒಡನಾಡಿ ಸಂಸ್ಥೆ, ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ಜನತಂತ್ರ ಜಾಗೃತಿ ವೇದಿಕೆಯು ಸಂತ್ರಸ್ತೆಯ ಪೋಷಕರ ಜೊತೆ ಸಂವಾದ ಏರ್ಪಡಿಸಿತ್ತು.
ಈ ವೇಳೆ ಸಂವಾದದಲ್ಲಿ ಸೌಜನ್ಯಳ ತಾಯಿ ಕುಸುಮ ಮಾತನಾಡಿ, ನನ್ನ ಮಗಳ ಸಾವಿನ ಬಗ್ಗೆ ಇದ್ದ ಹಲವು ಸಾಕ್ಷ್ಯಗಳನ್ನು ನಾಶಪಡಿಸಿದರು. ನನ್ನ ಮಗಳನ್ನು ಕೊಲೆ ಮಾಡಿರುವ ಆರೋಪಿಗಳನ್ನು ವ್ಯವಸ್ಥಿತವಾಗಿ ರಕ್ಷಿಸಿದರು ಎಂದು ಕಣ್ಣೀರಿಟ್ಟರು. ಅಲ್ಲದೆ ನನ್ನ ಮಗಳ ಸಾವಿಗೆ ನ್ಯಾಯ ಬೇಕು ಎಂದು ಒತ್ತಾಯಿಸಿದರು.

ಧರ್ಮಸ್ಥಳದಲ್ಲಿ ನಡೆದಿರುವ ಮಗಳ ಸಾವು ಹಾಗೂ ನಂತರ ನಡೆದ ಘಟನೆಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು. ನಂತರ ಮಗಳ ಸಾವಿನ ಸತ್ಯಾಂಶ ಮುಚ್ಚಿ ಹಾಕುವ ಉದ್ದೇಶದಿಂದ ನನಗೆ ಮಾನಸಿಕ ಅಸ್ವಸ್ಥೆ ಎಂಬ ಹಣೆ ಪಟ್ಟಿ ಕಟ್ಟಿದರು ಎಂದು ದೂರಿದರು.
ವಕೀಲ ಶ್ರೀನಿವಾಸ್ ಮಾತನಾಡಿ, ಸೌಜನ್ಯ ಸಾವಿನ ಬಗ್ಗೆ ಈಗಾಗಲೇ ಪೊಲೀಸ್ ಹಾಗೂ ಸಿಬಿಐ ತನಿಖೆ ಆಗಿರುವ ಕಾರಣ ಬೇರೆ ರೀತಿಯ ತನಿಖೆಯಿಂದ ನ್ಯಾಯ ಪಡೆಯುವ ಬಗ್ಗೆ ಹೋರಾಟ ರೂಪಿಸಬೇಕಿದೆ. ಈ ನಿಟ್ಟಿನಲ್ಲಿ ನನ್ನ ವಕೀಲರ ತಂಡದ ಜೊತೆ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.
ಪ್ರಭಾವಿಗಳು ಸೌಜನ್ಯಳ ಸಾವಿನ ಸಾಕ್ಷಿಗಳನ್ನು ನಾಶಪಡಿಸಿದ್ದಾರೆ. ದೇಶದ ಜನರು ತುಂಬಾ ನಂಬಿಕೆ ಇಟ್ಟಿರುವ ತನಿಖಾ ಸಂಸ್ಥೆ ಸಿಬಿಐನಿಂದಲೂ ನಮಗೆ ನ್ಯಾಯ ಸಿಕ್ಕಿಲ್ಲ. ಈಗ ನ್ಯಾಯಾಲಯ ನೀಡಿರುವ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದರೆ, ಮತ್ತೆ ಅಮಾಯಕ ವ್ಯಕ್ತಿಯೇ ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ. ಇದರಿಂದ ಸೌಜನ್ಯ ಸಾವಿಗೆ ಮೂಲ ಕಾರಣರಾದ ಆರೋಪಿಗಳಿಗೆ ಶಿಕ್ಷೆಯಾಗುವುದಿಲ್ಲ ಎಂದರು.
ಸಂವಾದದಲ್ಲಿ ಒಡನಾಡಿ ಸಂಸ್ಥೆಯ ನಿರ್ದೇಶಕರಾದ ಸ್ಪಾನಿ, ಪರುಶು, ಸೌಜನ್ಯಳ ಸಹೋದರಿ, ಮಾವ ವಿಠಲ್ ಗೌಡ, ಧರ್ಮಸ್ಥಳದ ಹೋರಾಟಗಾರ ಮಹೇಶ್ ಶೆಟ್ಟಿ, ಪ್ರಗತಿಪರ ಚಿಂತಕರಾದ ಸಿ.ಬಸವಲಿಂಗಯ್ಯ, ನಾ.ದಿವಾ ಕರ, ಪ್ರೊ.ಕಾಳೇಗೌಡ ನಾಗವಾರ, ಸವಿತಾ ಪ.ಮಲ್ಲೇಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.












Click it and Unblock the Notifications