ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಪ್ರಚಾರ ಆರಂಭ: ಸೋಮಶೇಖರ್
ಮೈಸೂರು, ಏಪ್ರಿಲ್ 08; ದಕ್ಷಿಣ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ನಡೆಯವು ಚುನಾವಣೆ ಸಂಬಂಧ ಪಕ್ಷದ ಅಭ್ಯರ್ಥಿ ಪರವಾಗಿ ಚುನಾವಣೆ ಪ್ರಚಾರ ಆರಂಭಿಸಲಾಗಿದೆ.
ಶುಕ್ರವಾರ ಮೈಸೂರಿನಲ್ಲಿ ಮಾತನಾಡಿದ ಸಹಕಾರ, ಜಿಲ್ಲಾಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್, "ಚುನಾವಣಾ ಪ್ರಚಾರವನ್ನು ಆರಂಭಿಸಲಾಗಿದೆ. ಹಲವರನ್ನು ಭೇಟಿ ಮಾಡಲಾಗುತ್ತಿದೆ" ಎಂದು ಹೇಳಿದರು.
"ಏಪ್ರಿಲ್ 11 ರಿಂದ 14ರವರೆಗೆ ಮೈಸೂರು ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಮತ ಯಾಚನೆ ಮಾಡಲಾಗುತ್ತದೆ. ಅಭ್ಯರ್ಥಿ ರವಿಶಂಕರ್‌ಗೆ ಬೆಂಬಲ ನೀಡುವಂತೆ ಮಾಜಿ ಕುಲಪತಿ ರಂಗಪ್ಪ ಅವರಿಗೂ ಮನವಿ ಮಾಡಲಾಗಿದೆ" ಎಂದರು.

ಶೆಟ್ಟರ್ ಭೇಟಿ; ಜಗದೀಶ್ ಶೆಟ್ಟರ್ ಅಮಿತ್ ಶಾ ಭೇಟಿ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವರು, "ಜಗದೀಶ್ ಶೆಟ್ಟರ್ ಇದೇ ಮೊದಲು ದೆಹಲಿಗೆ ಹೋಗಿಲ್ಲ. ಈ ಹಿಂದೆ ಅನೇಕ ಬಾರಿ ಹೋಗಿದ್ದಾರೆ. ಮುಖ್ಯಮಂತ್ರಿಗಳು ನಾನಾ ಯೋಜನೆಗಳ ಸಂಬಂಧ ವಿವಿಧ ಇಲಾಖೆಗಳ ಸಚಿವರನ್ನು ಭೇಟಿ ಮಾಡಿದ್ದಾರೆ" ಎಂದು ಸಷ್ಟಪಡಿಸಿದರು.
"ರೈತರಿಗೆ ಶೇ 1ರಷ್ಟು ಉಳಿತಾಯ ಆಗುತ್ತದೆ ಎಂಬ ಆಲೋಚನೆಯಿಂದ ಡಿಸಿಸಿ ಬ್ಯಾಂಕ್‌ಗಳನ್ನು ಅಪೆಕ್ಸ್ ಬ್ಯಾಂಕ್‌ಗೆ ವಿಲೀನ ಮಾಡುವ ಚಿಂತನೆ ಮಾಡಲಾಗುತ್ತಿದೆ. ಬೇರೆ ರಾಜ್ಯಗಳಲ್ಲಿ ವಿಲೀನ ಮಾಡಲಾಗಿದೆ. ಅಧಿಕಾರಿಗಳು ಅಲ್ಲಿಗೆ ಪ್ರವಾಸಕ್ಕೆ ತೆರಳಿ ವರದಿ ಸಿದ್ಧಪಡಿಸಲಿದ್ದಾರೆ. ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿದ ನಂತರ ಕೇಂದ್ರಕ್ಕೆ ವರದಿ ಸಲ್ಲಿಸಲಾಗುವುದು" ಎಂದು ಸಹಕಾರ ಸಚಿವರು ಹೇಳಿದರು.
"ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಮಾಡುವ ವಿಚಾರವಾಗಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಮೈಸೂರಿನ ಅಭಿವೃದ್ಧಿ ಬಗ್ಗೆ ಗಮನಹರಿಸಲಾಗಿದೆ. ಫಿಲ್ಮ್ ಸಿಟಿ ನಿರ್ಮಾಣ, ಏರ್ ಪೋರ್ಟ್, ಕೆಆರ್ ಆಸ್ಪತ್ರೆಗೆ ಹಣ ಬಿಡುಗಡೆಯಾಗಿದೆ" ಎಂದು ಸೋಮಶೇಖರ್ ಮಾಹಿತಿ ನೀಡಿದರು.
"ಮೈಸೂರು ಪಾಲಿಕೆ ಚುನಾವಣೆ ವಿಚಾರ ನಗರಾಭಿವೃದ್ಧಿ ಸಚಿವರಿಗೆ ಬರುತ್ತದೆ. ಬಜೆಟ್ ಆದ ಬಳಿಕ ಮೀಸಲಾತಿ ಪ್ರಕಟವಾಗುವ ಸಾಧ್ಯತೆ ಇದೆ. ಚುನಾವಣೆ ನಡೆಸುವ ಸಂಬಂಧ ಪಾಲಿಕೆ ಸದಸ್ಯರು ಕೋರ್ಟ್ ಮೊರೆಗೆ ಹೋಗುವುದಕ್ಕೆ ಅವರು ಸ್ವತಂತ್ರ" ಎಂದರು.
"ಮೇಯರ್ ಚುನಾವಣೆಯಲ್ಲಿ ಕಳೆದ ಬಾರಿ ಜೆಡಿಎಸ್ ಸಹಕಾರ ನೀಡಿತ್ತು. ಈ ಬಾರಿ ಬೆಂಬಲ ಕೇಳುವ ಕುರಿತು ಹೈಕಮಾಂಡ್ ಸೂಚನೆಯಂತೆ ಕ್ರಮಕೈಗೊಳ್ಳಲಾಗುವುದು. ಉದ್ದೇಶಪೂರ್ವಕವಾಗಿ ಮೇಯರ್ ಚುನಾವಣೆ ಮುಂದೂಡಿಕೆ ಮಾಡಲಾಗುತ್ತಿದೆ ಎಂಬುದು ಸುಳ್ಳು" ಎಂದು ಹೇಳಿದರು.
"ಮಹಿಳಾ ಮೇಯರ್ ಮೇಲೆ ಕಾಂಗ್ರೆಸ್, ಜೆಡಿಎಸ್‌ಗೆ ಏಕೆ ಕೋಪ. ಅವಧಿ ಮುಗಿದಿದೆ, ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಮೈಸೂರು ಅಭಿವೃದ್ಧಿ ಬಗ್ಗೆ ಅವರದ್ದೇ ಆದ ಕನಸುಗಳಿವೆ. ಹೀಗಾಗಿ ಅವರು ಪಾಲಿಕೆ ಬಜೆಟ್ ಮಂಡಿಸಲು ಉತ್ಸುಕರಾಗಿದ್ದಾರೆ" ಎಂದರು.
ಮೈಸೂರು ಪ್ರವಾಸದಲ್ಲಿರುವ ಸಚಿವರು ಮೈಸೂರಿನ ವಸಂತನಗರ ಮತ್ತು ಮಾನಸಗಂಗೋತ್ರಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಡಿ. ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯಗಳ ಸಮುಚ್ಛಯಗಳನ್ನು ಶುಕ್ರವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ, ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಶಾಸಕರಾದ ನಾಗೇಂದ್ರ, ಜಿ. ಟಿ. ದೇವೇಗೌಡ, ಮೂಡಾ ಅಧ್ಯಕ್ಷ ರಾಜೀವ್, ಮೈಸೂರು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಿಎಂ ಮಾತಾಡುವ ಬಸವಣ್ಣ ಅಲ್ಲ; "ಸಿಎಂ ಮಾತಾಡುವ ಬಸವಣ್ಣ. ಅಲ್ಲ ದುಡಿಯುವ ಬಸವಣ್ಣ" ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದರು.
ಶುಕ್ರವಾರ ಮೈಸೂರಿನಲ್ಲಿ ಮಾತನಾಡಿದ ಅವರು, "ಸಿಎಂ ಬಸವರಾಜ ಬೊಮ್ಮಾಯಿ ಮೈಸೂರು ಏರ್ ಪೋರ್ಟ್ ವಿಸ್ತರಣೆಗೆ ಅನುದಾನ, ಕೆ. ಆರ್. ಆಸ್ಪತ್ರೆಗೆ ಅನುದಾನ ನೀಡುವುದಾಗಿ ಹೇಳಿದ್ದಾರೆ. ಮೈಸೂರಿನ ಶಕ್ತಿಧಾಮಕ್ಕೆ 5 ಕೋಟಿ ಅನುದಾನ ನೀಡಿದ್ದಾರೆ. ನಿತ್ಯ ಕರ್ಕಶ ಧ್ವನಿಯಲ್ಲಿ ಮಾತನಾಡುವವರಿಗೆ ಇದೆಲ್ಲಾ ಅರ್ಥವಾಗಲ್ಲ" ಎಂದು ವಿರೋಧ ಪಕ್ಷದ ನಾಯಕರಿಗೆ ತಿರುಗೇಟು ನೀಡಿದರು.
"ಎಚ್. ಡಿ. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಹೇಳಿಕೆಗೆ ಯಾವುದೇ ಆಧಾರ ಇಲ್ಲ. ಅವರ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ, ಕೋಡಿ ಮಠದಸ್ವಾಮಿ ಇವರ ಹೇಳಿಕೆಗೆ ನಿಖರತೆ ಸ್ಪಷ್ಟತೆ ಇಲ್ಲ. ರಾಜ್ಯದ ಎಲ್ಲಾ ವಿಚಾರಗಳಲ್ಲೂ ಈ ಮೂವರ ಹೇಳಿಕೆಗಳು ಅಸ್ಪಷ್ಟವಾಗಿಯೇ ಇರುತ್ತವೆ ಎಂದು ಹೇಳಿದರು.
"ಹಿಜಾಬ್ ವಿಚಾರ ಬಂದಾಗ ಪ್ರತಿಪಕ್ಷಗಳು ಯಾಕೆ ಆ ಸಮುದಾಯಕ್ಕೆ ಬುದ್ಧಿ ಹೇಳಲಿಲ್ಲ?. ಸಮವಸ್ತ್ರ ಎಲ್ಲರಿಗೂ ಕಡ್ಡಾಯ. ಅದನ್ನು ಪಾಲಿಸಿ ಎಂದು ಪ್ರತಿಪಕ್ಷಗಳು ಹೇಳಿದ್ದರೆ ರಾಜ್ಯದಲ್ಲಿ ವಿವಾದಗಳೇ ಸೃಷ್ಟಿಯಾಗುತ್ತಿರಲಿಲ್ಲ. ಆವತ್ತು ಅವರಿಗೆ ಇಲ್ಲದ ಕಾನೂನಿನ ಕಥೆ ಹೇಳಿಕೊಟ್ಟು ಗೊಂದಲ ಸೃಷ್ಟಿಗೆ ಕಾರಣ ಇವರು"ಎಂದರು.












Click it and Unblock the Notifications