ಜೆಡಿಎಸ್, ಬಿಜೆಪಿಯ ಕೆಲವರು ಕಾಂಗ್ರೆಸ್ ಮನೆ ಬಾಗಿಲು ತಟ್ಟುತ್ತಿದ್ದಾರೆ
ಮೈಸೂರು, ಜುಲೈ 3: "ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ಹಾಗೂ ಬಿಜೆಪಿಯ ಕೆಲ ಶಾಸಕರು ಬರುವ ಪ್ರಯತ್ನದಲ್ಲಿ ಇದ್ದಾರೆ. ಕೆಲ ಶಾಸಕರು ನಮ್ಮ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ,'' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಹೇಳಿದ್ದಾರೆ.
"ಆದರೆ ಅವರು ಯಾರು ಎಂಬುದನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಬೇರೆ ಪಕ್ಷದ ಶಾಸಕರುಗಳ ಸೇರ್ಪಡೆ ಬಗ್ಗೆ ಒಂದು ಸಮಿತಿ ಇದೆ. ಅದನ್ನು ಸಮಿತಿ ತೀರ್ಮಾನ ಮಾಡುತ್ತದೆ,'' ಎಂದು ಮಾಧ್ಯಮಗಳ ಬಳಿ ಸೂಕ್ಷ್ಮವಾಗಿ ತಿಳಿಸಿದರು.
"ಜಿ.ಪಂ., ತಾ.ಪಂ. ಚುನಾವಣೆಗೆ ಮೀಸಲಾತಿ ಪ್ರಕಟಗೊಂಡಿದೆ. ನಾವು ಚುನಾವಣೆಗೆ ಸಿದ್ಧರಿದ್ದೇವೆ. ಕೋವಿಡ್ ಸಂದರ್ಭದಲ್ಲಿ ಪಕ್ಷ ನಿರಂತರವಾಗಿ ಸಂಘಟನೆಯಲ್ಲಿ ತೊಡಗಿಕೊಂಡಿದೆ. ಕಳೆದ ಗ್ರಾ.ಪಂ. ಚುನಾವಣೆ ಕಾಂಗ್ರೆಸ್‌ಗೆ ಉತ್ತಮ ಫಲಿತಾಂಶ ಬಂದಿದೆ. ಮೈಸೂರು, ಚಾಮರಾಜನಗರದಲ್ಲಿ ಪಕ್ಷ ಶಕ್ತಿಯುತವಾಗಿದೆ. ಸ್ವತಃ ಮುಖ್ಯಮಂತ್ರಿ ಬಿಎಸ್‌ವೈ ಕಾಂಗ್ರೆಸ್ ಪಕ್ಷಕ್ಕಿಂತ ಬಿಜೆಪಿ ನಾಲ್ಕು ಹೆಜ್ಜೆ ಹಿಂದಿದ್ದೇವೆ ಎಂದು ಹೇಳಿದ್ದಾರೆ,'' ಎಂದರು.

"ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳಾಪಟ್ಟಿ ಇನ್ನೂ ಪ್ರಕಟ ಆಗಿಲ್ಲ. ಆದರೂ ಚುನಾವಣೆ ಎದುರಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ,'' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಹೇಳಿದರು.
"ಕಾಂಗ್ರೆಸ್‌ನಲ್ಲಿ ದಲಿತ ಸಿಎಂ ಕೂಗು ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, "ನಮ್ಮ ಪಕ್ಷದಲ್ಲಿ ಮಲ್ಲಿಕಾರ್ಜುನ ಖರ್ಗೆ ಸೀನಿಯರ್ ಮೋಸ್ಟ್ ದಲಿತ ಲೀಡರ್. ಅವರು ಸಿಎಂ ಆಗುವುದರಲ್ಲಿ ತಪ್ಪೇನಿಲ್ಲ. ಎಂದೋ ಅವರು ಮುಖ್ಯಮಂತ್ರಿ ಆಗಬೇಕಿತ್ತು. ಆ ಸಂದರ್ಭದಲ್ಲಿ ಪಕ್ಷ ಅಧಿಕಾರಕ್ಕೆ ಬರಲಿಲ್ಲ. ನಾವಿನ್ನೂ ಜೂನಿಯರ್, ನಾವು ಎಂದೂ ಆ ಸ್ಥಾನಕ್ಕೆ ಆಸೆ ಪಟ್ಟವನಲ್ಲ. ಪಕ್ಷ ನನಗೆ ದೊಡ್ಡ ಜವಾಬ್ದಾರಿ ನೀಡಿದೆ. ದಲಿತರಿಗೆ ಕಾಂಗ್ರೆಸ್ ಪಕ್ಷ ಸಾಕಷ್ಟು ಸ್ಥಾನ ಮಾನ ನೀಡಿದೆ. ಬೇರೆ ಪಕ್ಷಗಳಿಗಿಂತ ದಲಿತರಿಗೆ ಹೆಚ್ಚು ಸ್ಥಾನಮಾನ ಸಿಕ್ಕಿರುವುದು ಕಾಂಗ್ರೆಸ್ ಪಕ್ಷದಲ್ಲಿ,'' ಎಂದು ಸಮರ್ಥಿಸಿಕೊಂಡರು.












Click it and Unblock the Notifications