ಸಿದ್ದರಾಮಯ್ಯ ಪರವಾಗಿ ಶಿವಣ್ಣ ಪ್ರಚಾರ ಮಾಡಿದ್ದಕ್ಕೆ ಸೋಮಣ್ಣ ಅಸಮಾಧಾನ?
ವರುಣಾದಲ್ಲಿ ಸಿದ್ದರಾಮಯ್ಯಗೆ ಸೋಲಿನ ಭಯ ಶುರುವಾಗಿದೆ ಅದಕ್ಕಾಗಿಯೇ ಜನರನ್ನು ಸೇರಿಸಲು ಚಿತ್ರರಂಗದವರನ್ನು ಕರೆಸಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಹೇಳಿದ್ದಾರೆ. ಇನ್ನು ಸಿದ್ದರಾಮಯ್ಯ ಪರವಾಗಿ ಶಿವರಾಜ್‌ಕುಮಾರ್ ಪ್ರಚಾರ ಮಾಡಿದ್ದಕ್ಕೆ ಕೂಡ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವರುಣಾದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಒಂದೇ ದಿನ ಪ್ರಚಾರಕ್ಕೆ ಬರುತ್ತೇನೆ ಎಂದ ಸಿದ್ದರಾಮಯ್ಯ ಈಗ ಮತ್ತೆ ಮತ್ತೆ ಪ್ರಚಾರ ಮಾಡಲು ಬರುತ್ತಿದ್ದಾರೆ. ಅವರಿಗೆ ಸೋಲಿನ ಭಯ ಕಾಡುತ್ತಿರಬೇಕು ಎಂದರು. ಇನ್ನು ಡಾ. ರಾಜ್‌ಕುಮಾರ್ ಕುಟುಂಬದ ಜೊತೆ ನನಗೆ 40 ವರ್ಷದ ಅವಿನಾಭಾವ ಸಂಬಂಧವಿದೆ. ನಮ್ಮ ಕ್ಷೇತ್ರದಲ್ಲಿ ಪುನೀತ್ ರಾಜ್‌ಕುಮಾರ್ ಹೆಸರಿನಲ್ಲಿ ದೊಡ್ಡ ಆಸ್ಪತ್ರೆ ಕಟ್ಟಿಸಿದ್ದೇನೆ. ವಿಜಯ್, ರಮ್ಯಾ ಬಗ್ಗೆ ಗೊತ್ತಿಲ್ಲ ಆದರೆ ಶಿವರಾಜ್‌ಕುಮಾರ್ ಯಾಕೆ ಹಿಂಗ್ ಮಾಡುದ್ರು ಗೊತ್ತಿಲ್ಲ" ಎಂದು ಪರೋಕ್ಷವಾಗಿಯೇ ಅಸಮಾಧಾನ ಹೊರಹಾಕಿದರು.

ರಾಘವೇಂದ್ರ ರಾಜ್‌ಕುಮಾರ್ ಕೂಡ ನನ್ನನ್ನು ಹೊಗಳಿದ್ದಾರೆ. ಆದರೆ ಶಿವಣ್ಣ ಯಾಕೆ ಬಂದರೋ ಗೊತ್ತಿಲ್ಲ ಎಂದು ಹೇಳಿದರು. ನನ್ನ ವಿರುದ್ಧ ಪ್ರಚಾರ ಮಾಡಲು ಸಿದ್ದರಾಮಯ್ಯ ಸ್ಟಾರ್ ಪ್ರಚಾರಕರ ಜೊತೆ ಬರುತ್ತಿದ್ದಾರೆ ಅದೇ ಖುಷಿ, ಹೆಚ್ಚಿನ ಜನರನ್ನು ಸೇರಿಸಲು ಅವರು ಸ್ಟಾರ್ ಗಳ ಜೊತೆ ಬಂದಿದ್ದಾರೆ ಎಂದು ಸೋಮಣ್ಣ ಹೇಳಿದ್ದಾರೆ.
ಸಿದ್ದರಾಮಯ್ಯ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿಲ್ಲ
ಸಿದ್ದರಾಮಯ್ಯ ವರುಣಾದಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ, ಅವರು ಮನಸ್ಸು ಮಾಡಿದ್ದರೆ ವರುಣಾ ಅಭಿವೃದ್ಧಿಯಾಗುತ್ತಿತ್ತು. ಆದರೆ, ಇಂದಿಗೂ ಕ್ಷೇತ್ರದಲ್ಲಿ ಒಂದು ಕಾಲೇಜು ಇಲ್ಲ, ಆಸ್ಪತ್ರೆ ಇಲ್ಲ, ಸರಿಯಾದ ರಸ್ತೆಗಳು ಕೂಡ ಇಲ್ಲ ಎಂದು ಹೇಳಿದರು. ಬಾದಾಮಿ ಕ್ಷೇತ್ರದಲ್ಲಿ ಕೂಡ ಸಿದ್ದರಾಮಯ್ಯ ಯಾವುದೇ ಅಭಿವೃದ್ಧಿ ಮಾಡಿಲ್ಲ, ಜನರ ಋಣ ತೀರಿಸಲೂ ಕೂಡ ಬದ್ಧತೆ ಬೇಕು ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ. ವರುಣಾದಲ್ಲಿ ನನ್ನನ್ನು ಗೆಲ್ಲಿಸಿದರೆ, ಕ್ಷೇತ್ರದಲ್ಲೇ ಇರುತ್ತೇನೆ ಇಲ್ಲಿ ಶಾಶ್ವತವಾಗಿ ಮನೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ರಂಗೇರಿದ ವರುಣಾ ಕ್ಷೇತ್ರ
ಚುನಾವಣೆ ಸಮೀಪವಾಗುತ್ತಿದ್ದಂತೆ ರಾಜ್ಯ ರಾಜಕೀಯ ರಂಗೇರಿದೆ. ಹಲವು ಸ್ಟಾರ್ ಪ್ರಚಾರಕರು ಕಾಂಗ್ರೆಸ್ ಮತ್ತು ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ರಾಜ್ಯಸಭಾ ಸದಸ್ಯ, ಚಿತ್ರ ನಟ ಜಗ್ಗೇಶ್ ವರುಣಾದಲ್ಲಿ ಸೋಮಣ್ಣ ಪರ ಪ್ರಚಾರ ಮಾಡಿದ್ದರು. ಅಮಿತ್ ಶಾ ಕೂಡ ವರುಣಾದಲ್ಲಿ ಪ್ರಚಾರ ಮಾಡಿದ್ದು, ಸಿದ್ದರಾಮಯ್ಯರನ್ನು ವರುಣಾದಲ್ಲಿ ಸೋಲಿಸಲು ಬಿಜೆಪಿ ರಣತಂತ್ರ ರೂಪಿಸಿದೆ.












Click it and Unblock the Notifications