6 ಸಚಿವರನ್ನು ಸಂಪುಟದಿಂದ ವಜಾಗೊಳಿಸಿ; ಸಾ. ರಾ. ಮಹೇಶ್
ಮೈಸೂರು, ಮಾರ್ಚ್ 06: "ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಯಾವ ಸಚಿವರು ನ್ಯಾಯಾಲಯಕ್ಕೆ ಹೋಗಿದ್ದಾರೋ ಅವರನ್ನು ಸಂಪುಟದಿಂದ ವಜಾ ಮಾಡಿ" ಎಂದು ಜೆಡಿಎಸ್ ಶಾಸಕ ಸಾ. ರಾ. ಮಹೇಶ್ ಒತ್ತಾಯಿಸಿದರು.
ಶನಿವಾರದಂದು ಮೈಸೂರಿನಲ್ಲಿ ಮಾತನಾಡಿದ ಶಾಸಕರು, "ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಹದಗೆಟ್ಟಿದೆ. ಮಂತ್ರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿಲ್ಲ. ಇದೇ ವಿಚಾರದ ಕುರಿತು ಸದನದಲ್ಲೂ ಒತ್ತಾಯ ಮಾಡುತ್ತೇವೆ" ಎಂದು ಹೇಳಿದರು.
"ಅಂಗೈ ಹುಣ್ಣಿಗೆ ಕನ್ನಡಿ ಬೇಕೇ?. ಅರ್ಜಿ ಹಾಕಿರೋದೆ ನಾವೆಲ್ಲಾ ತಲೆ ತಗ್ಗಿಸೋ ವಿಚಾರವಾಗಿದೆ. ಇದೆಲ್ಲದರ ಹಿಂದೆ ಒಂದು ಷಡ್ಯಂತ್ರ ಇದೆ. ಅದು ಆಚೆಗೆ ಬರಬೇಕು" ಎಂದು ಒತ್ತಾಯಿಸಿದರು.

"ಮುಂಬೈನಲ್ಲಿ ಅಷ್ಟು ಭದ್ರತೆ ಇಟ್ಟುಕೊಂಡಿದ್ದರು. ಸರ್ಕಾರ ಬೀಳಿಸಲು ಎಲ್ಲರೂ ಅಲ್ಲಿಗೆ ಹೋಗಿದ್ದರು. ಈಗ ಯಾಕೆ ಅಲ್ಲಿ ಹೋದವರು ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದೀರಿ?" ಎಂದು ಸಾ. ರಾ. ಮಹೇಶ್ ಪ್ರಶ್ನಿಸಿದರು.
"ಇವರನ್ನು ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುವ ಷಡ್ಯಂತ್ರ ಮೊದಲೇ ಆಗಿತ್ತಾ?. ಸಚಿವರನ್ನೇ ಬ್ಲಾಕ್ ಮೇಲ್ ಮಾಡುವುದಾದರೆ ಜನಸಾಮಾನ್ಯರ ಗತಿ ಏನು?. ಮುಖ್ಯಮಂತ್ರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ನಮ್ಮ ಸ್ನೇಹಿತರು ಹಿಂದೆ ಹೇಳಿದಾಗ ಸುಳ್ಳು ಅಂದುಕೊಂಡೆ. ಆದರೆ, ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ" ಎಂದು ಸಾ. ರಾ. ಮಹೇಶ್ ತಿಳಿಸಿದರು.
"ಹುಣಸೂರಿನಿಂದ ಬಾಂಬೆವರೆಗೆ ಪುಸ್ತಕ ಬರೀತೀನಿ ಅಂದಿದ್ದರು. ಬಹುಶಃ ಅದರಲ್ಲಿ ಇದು ಉಲ್ಲೇಖ ಆಗಬಹುದು. ಜನಪರ ಸರ್ಕಾರ ತರಲು ಬಾಂಬೆಗೆ ಹೋಗಿದ್ದೆವು ಅಂದರು ಬಾಂಬೆಯಲ್ಲಿ ಏನು ಮಾಡುತ್ತಿದ್ದರು ಅಂತ ಈಗ ಹೇಳಲಿ?" ಎಂದು ಸಾ. ರಾ. ಮಹೇಶ್ ವ್ಯಂಗ್ಯವಾಡಿದರು.
"ಇವರು ಮಾಡಿರುವುದನ್ನು ಮಾತನಾಡಲು ಅಸಹ್ಯ ಆಗುತ್ತದೆ. ವಿಡಿಯೋ ಪ್ರಸಾರಕ್ಕೆ ತಡೆಕೋರಿ ಅರ್ಜಿ ಹಾಕಿರುವುದು ಶಾಸಕಾಂಗಕ್ಕೆ ಮಾಡಿದ ಅಪಮಾನ. ಅನೇಕ ಶಾಸಕರ ವಿಡಿಯೋ ಇದೆ ಅಂತ ಹೇಳಿದ್ದರು. ಈ ಘಟನೆಯಿಂದ ನಮ್ಮ ಕುಟುಂಬದವರೇ ಅನುಮಾನದಿಂದ ನೋಡುತ್ತಿದ್ದಾರೆ. ತಪ್ಪು ಮಾಡದೆ ಇದ್ದರೆ ನೀವು ಏಕೆ ನ್ಯಾಯಾಲಯಕ್ಕೆ ಹೋಗಿದ್ದೀರಿ?" ಎಂದು ಟೀಕಿಸಿದರು.












Click it and Unblock the Notifications