"ಪ್ರತಾಪ್ ಸಿಂಹ ಜೊತೆ ಹುಷಾರಾಗಿರು ಎಂದಿದ್ದರು ಸಿದ್ದರಾಮಯ್ಯ"; ಬಾಂಬ್ ಸಿಡಿಸಿದ ಸೋಮಣ್ಣ
ಮೈಸೂರು, ಅಕ್ಟೋಬರ್ 9: "ಪ್ರತಾಪ್ ಸಿಂಹನ ಜೊತೆ ಹುಷಾರಾಗಿರು. ಸುಲಭವಾಗಿ ಆತನನ್ನು ನಂಬಬೇಡ ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದರು" ಎಂದು ಹೇಳಿಕೊಂಡಿದ್ದಾರೆ ಸಚಿವ ವಿ ಸೋಮಣ್ಣ. ನಾಡ ಹಬ್ಬ ದಸರಾವನ್ನು ಯಶಸ್ವಿಯಾಗಿ ನಿರ್ವಹಿಸಿದ ನಂತರ ಸೋಮಣ್ಣ, ಪ್ರತಾಪ್ ಸಿಂಹ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಸಂತಸ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಈ ಹೇಳಿಕೆಯನ್ನೂ ನೀಡಿದ್ದಾರೆ. "ದಸರಾ ಆಚರಣೆ ಸಿದ್ಧತೆ ಸಂದರ್ಭ ಸಿದ್ದರಾಮಯ್ಯ ಅವರಿಗೆ ಸಲಹೆ ಪಡೆಯಲೆಂದು ಎರಡು ಮೂರು ಬಾರಿ ಕರೆ ಮಾಡಿದ್ದೆ. ಆ ವೇಳೆ ಅವರು ಪ್ರತಾಪ್ ಸಿಂಹ ತುಂಬ ಬುದ್ಧಿವಂತ. ಆತನ ಜೊತೆ ಎಚ್ಚರದಿಂದಿರು. ಸುಲಭವಾಗಿ ನಂಬಬೇಡ ಎಂದು ಕಿವಿ ಮಾತು ಹೇಳಿದರು. ನೀವೆಲ್ಲಾ ದಸರಾ ಕಾರ್ಯಕ್ರಮವನ್ನು ಚೆನ್ನಾಗಿ ಮಾಡುತ್ತೀರಾ ಎಂಬ ಭರವಸೆ ಇದೆ ಎಂದಿದ್ದರು" ಎಂದು ಬಾಂಬ್ ಹಾಕಿದರು.

"ಮೈಸೂರು ಉಸ್ತುವಾರಿ ಸಚಿವನಾಗಿ ದಸರಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರೈಸಿದ್ದೇನೆ. ಈ ಅವಕಾಶ ನೀಡಿದ್ದಕ್ಕೆ ಮುಖ್ಯಮಂತ್ರಿಗಳಿಗೆ ನಾನು ಧನ್ಯವಾದ ತಿಳಿಸುತ್ತೇನೆ. ಜಿಲ್ಲೆಯ ಎಲ್ಲಾ ಶಾಸಕರು, ಪರಿಷತ್ ಸದಸ್ಯರು, ಅಧಿಕಾರಿಗಳು ನನಗೆ ಸಹಕಾರ ನೀಡಿದರು" ಎಂದು ಧನ್ಯವಾದ ಅರ್ಪಿಸಿದರು. "ದಸರಾ ಅಂದರೆ ಅಂಬಾರಿ ಮೆರವಣಿಗೆಯಷ್ಟೇ ಅಂದುಕೊಂಡಿದ್ದೆ. ಆದರೆ ಇಷ್ಟೊಂದು ಕೆಲಸ ಕಾರ್ಯಗಳು ಇರುತ್ತವೆ ಎಂದು ಗೊತ್ತೇ ಇರಲಿಲ್ಲ. ಇಡೀ ದಸರಾ ಸಂಪೂರ್ಣವಾಗಿ ಯಶಸ್ವಿಯಾಗಿದೆ. ಇದಕ್ಕೆ ಕಾರಣ ಬಿಎಸ್ ಯಡಿಯೂರಪ್ಪ ಹಾಗೂ ಸಹಕಾರ ನೀಡಿದ ಜಿಲ್ಲೆಯ ಸಂಸದ ಪ್ರತಾಪ್ ಸಿಂಹ" ಎಂದು ಹೊಗಳಿದರು.
"ದಸರಾ ಉಸ್ತುವಾರಿ ವಹಿಸಿದ್ದಾಗಿನಿಂದ ನಿಷ್ಠೆಯಿಂದ ಕಾರ್ಯನಿರ್ವಹಿಸಿದ್ದೇನೆ. ಇನ್ನು ವಸತಿ ಸಚಿವನಾಗಿ ಸಂಪುಟದಲ್ಲಿರುತ್ತೇನೆ. ನಾಳೆಯಿಂದ ರಾಜ್ಯಾದ್ಯಂತ ಪ್ರವಾಸ ನಡೆಸಿ ಪ್ರವಾಹ ಸಂತ್ರಸ್ತರ ಕಷ್ಟ ಆಲಿಸುತ್ತೇನೆ. ಅವರಿಗೆ ಮನೆ ಕಟ್ಟಿಕೊಡುತ್ತೇನೆ" ಎಂದರು.












Click it and Unblock the Notifications