ಸಿದ್ದರಾಮಯ್ಯಗೆ ಗಲಿಬಿಲಿ ಯಾಕೆ?; ಬಸವರಾಜ ಬೊಮ್ಮಾಯಿ
ಮೈಸೂರು, ಏಪ್ರಿಲ್ 07; "ಅಲ್ ಖೈದಾ ಹೇಳಿಕೆ ನೀಡಿದರೆ ಸಿದ್ದರಾಮಯ್ಯಗೆ ಗಲಿಬಿಲಿ ಯಾಕೆ?.
ಸಿದ್ದರಾಮಯ್ಯ ಹೇಳಿಕೆ ಆಧಾರವಿಲ್ಲದ ಹೇಳಿಕೆಯಾಗಿದೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಗುರುವಾರ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, "ಈ ನೆಲದ ಮತ್ತು ಕಾನೂನಿನ ವಿರುದ್ಧ ನಿರಂತರ ಷಡ್ಯಂತ್ರ ನಡೆದಿವೆ. ಈ ಬಗ್ಗೆ ತನಿಖೆಗೆ ಪೊಲೀಸರಿಗೆ ಸೂಚಿಸಿದ್ದೇನೆ, ವರದಿ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ" ಎಂದರು.
"ಅಲ್ ಖೈದಾ ಹೇಳಿಕೆ ಹಿಂದೆ ಆರ್‌ಎಸ್‌ಎಸ್ ಕೈವಾಡವಿದೆ" ಎಂಬ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿ, "ಅಲ್ ಖೈದಾ ಹೇಳಿಕೆ ನೀಡಿದರೆ ಸಿದ್ದರಾಮಯ್ಯಗೆ ಗಲಿಬಿಲಿ ಯಾಕೆ?" ಎಂದು ಪ್ರಶ್ನಿಸಿದರು.

"ದೆಹಲಿ ಪ್ರವಾಸ ಯಶಸ್ವಿಯಾಗಿದೆ. ರಾಜ್ಯದ ಬೇಡಿಕೆಗಳಿಗೆ ಕೇಂದ್ರದಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಅನೇಕ ವಿಚಾರಗಳ ಕುರಿತು ಚರ್ಚಿಸಿದ್ದೇನೆ. ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರೊಂದಿಗೆ ಸ್ತೂಲ ಚರ್ಚೆ ಮಾಡಿದ್ದೇನೆ" ಎಂದು ಹೇಳಿದರು.
"ಮುಂದಿನ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಂಪುಟ ವಿಸ್ತರಣೆ ಆಗುವ ಬಗ್ಗೆ ನಿರ್ಧಾರವಾಗುವ ನಿರೀಕ್ಷೆ ಇದೆ" ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಹೇಳಿಕೆಯನ್ನು ಖಂಡಿಸಬೇಕು; ಗುರುವಾರ ಮೈಸೂರಿನಲ್ಲಿ ಮಾತನಾಡಿದ್ದ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ ನಾರಾಯಣ ಸಹ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದರು, "ಸಿದ್ದರಾಮಯ್ಯ ಗಾಳಿಯಲ್ಲಿ ಗುಂಡು ಹೊಡೆಯುತ್ತಿದ್ದಾರೆ" ಎಂದು ದೂರಿದ್ದರು.
"ಇಂತಹ ಸೂಕ್ಷ್ಮ ವಿಚಾರದ ಬಗ್ಗೆ ಈ ರೀತಿ ಯಾವುದೇ ಪುರಾವೆ ಇಲ್ಲದೆ ಆರೋಪ ಮಾಡುವುದು ಸರಿಯಲ್ಲ. ಸಿದ್ದರಾಮಯ್ಯ ಮೊದಲು ಅಲ್ ಖೈದಾ ಸಂಘಟನೆಯ ಹೇಳಿಕೆ ಖಂಡಿಸಬೇಕು. ಇದನ್ನು ಬಿಟ್ಟು ಈ ರೀತಿ ಬೇಜಾವಾಬ್ದಾರಿಯಾಗಿ ಒಂದು ಸಂಘಟನೆ ಮೇಲೆ ಆರೋಪ ಮಾಡುವುದು ಸರಿಯಲ್ಲ" ಎಂದು ಹೇಳಿದ್ದರು.
"ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಯಾವ ಬೆಲೆಯೂ ಇಲ್ಲ. ಹಿಂದೆ ಹಿಜಾಬ್ ಬಗ್ಗೆ ಮಾತಾಡುತ್ತಾ ಅದನ್ನು ಖಾವಿಗೆ ಹೋಲಿಸಿ ಜನರಿಂದ ಟೀಕೆಗೆ ಒಳಗಾಗಿದ್ದರು. ಈ ಹೇಳಿಕೆಯಿಂದಲ್ಲೂ ಸಿದ್ದರಾಮಯ್ಯ ಇದೇ ರೀತಿ ಟೀಕೆಗೆ ಒಳಗಾಗುತ್ತಾರೆ" ಎಂದು ಅಶ್ವತ್ಥ್ ನಾರಾಯಣ ತಿಳಿಸಿದ್ದರು.
"ವೀಡಿಯೋ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇದರ ಬಗ್ಗೆ ಪೊಲೀಸರು ಮಾಹಿತಿಗಳನ್ನು ಪಡೆಯುತ್ತಿದ್ದಾರೆ" ಎಂದು ಸ್ಪಷ್ಟಪಡಿಸಿದ್ದರು.












Click it and Unblock the Notifications