ವಿಧಾನಸೌಧದಲ್ಲಿ ಭ್ರಷ್ಟಾಚಾರ ನನ್ನ ಕಣ್ಣಿಗೆ ಕಂಡಿಲ್ಲ: ಸಿದ್ದರಾಮಯ್ಯ
ಮೈಸೂರು, ಜೂನ್ 12 : ವಿಧಾನಸೌಧದಲ್ಲಿ ಭ್ರಷ್ಟಾಚಾರ ನನ್ನ ಕಣ್ಣಿಗೆ ಬಿದ್ದಿಲ್ಲ. ಒಂದು ವೇಳೆ ಕುಮಾರಸ್ವಾಮಿ ಅವರಿಗೆ ಕಂಡಿದ್ದರೆ ಅವರೇ ಬಗೆಹರಿಸಲಿ ಎಂದು ಸಿದ್ದರಾಮಯ್ಯ ಹೇಳಿದರು.
ಮೈಸೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಸಿಎಂ ಹುದ್ದೆ ಬೇಕಿರಲಿಲ್ಲ ಕಾಂಗ್ರೆಸ್ ನವರೇ ಬೇಡ ಬೇಡ ಎಂದು ಕೊಟ್ಟರು ಎಂಬ ಕುಮಾರಸ್ವಾಮಿ ಹೇಳಿಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಅದರ ಬಗ್ಗೆ ನೋ ಕಾಮೆಂಟ್ಸ್. ನಾನು ಎಂದಿಗೂ ಅವರ ಜೊತೆ ಆ ಬಗ್ಗೆ ಮಾತನಾಡಿಲ್ಲ. ಅದು ನನಗೆ ಸಂಬಂಧ ಇರದ ವಿಚಾರ.
ಬಾದಾಮಿ ಕ್ಷೇತ್ರದ ಜನರು ನನ್ನ ಕೈಹಿಡಿದರು. ಅಲ್ಲಿನ ಜನರಿಗೆ ಧನ್ಯವಾದ ತಿಳಿಸಿದ್ದೇನೆ. ಚಾಮುಂಡೇಶ್ವರಿಯಲ್ಲಿ ಸೋಲು ಅಭವಿಸಿದ್ದು ನನಗೆ ಶಾಕಿಂಗ್ ಅಲ್ಲ. ಅದು ಕೇವಲ ಮಾಧ್ಯಮಗಳಿಗಷ್ಟೇ. ನಾನು ಜನರ ತೀರ್ಪನ್ನು ಸ್ವೀಕರಿಸಿದ್ದೇನೆ. ಅದು ಈಗಾಗಲೇ ಮುಗಿದು ಹೋಗಿದೆ. ಸೋಲು ಹೇಗಾಯ್ತು ಎನ್ನುವುದನ್ನು ವಿಶ್ಲೇಷಣೆ ಮಾಡುವುದಿಲ್ಲ ಎಂದರು.

ಅತೃಪ್ತ ಕಾಂಗ್ರೆಸ್ ಶಾಸಕರ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಕಾಂಗ್ರೆಸ್ ನಲ್ಲಿ ಯಾರು ಅತೃಪ್ತರಿಲ್ಲ. ಎಲ್ಲರು ಈಗ ತೃಪ್ತರಾಗಿದ್ದಾರೆ. ಎಲ್ಲರ ಜೊತೆ ಮಾತನಾಡಿದ್ದೇನೆ. ಯಾರು ಸಹ ಅಸಮಾಧಾನದಿಂದ ಇಲ್ಲ.
ಬಿಜೆಪಿಯವರು ನಮ್ಮ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ನಮ್ಮ ಯಾವ ಶಾಸಕರು ಬಿಜೆಪಿಗೆ ಹೋಗುವುದಿಲ್ಲ. ಈ ಸರ್ಕಾರ 5 ವರ್ಷ ಪೂರೈಸಲಿ ಎಂದು ಜನ ಆರ್ಶಿವಾದ ಮಾಡಿದ್ದಾರೆ. ಅವರ ಆಶೀರ್ವಾದದಂತೆ 5 ವರ್ಷ ಪೂರೈಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಅದು ಕೇವಲ ಮಾಧ್ಯಮಗಳ ಸೃಷ್ಟಿ. ನಾನು ಚುನಾವಣಾ ರಾಜಕಾರಣದಿಂದ ದೂರ ಇರುತ್ತೇನೆ ಎಂದು ತಿಳಿಸಿದರು.












Click it and Unblock the Notifications