ನಾನು ಕ್ಷೇತ್ರ ಹುಡುಕುತ್ತಿಲ್ಲ, ನನ್ನನ್ನು ಕರೆಯುವವರ ಸಂಖ್ಯೆ ಹೆಚ್ಚಾಗಿದೆ ಅಷ್ಟೇ-ಸಿದ್ದರಾಮಯ್ಯ
ವರುಣಾದಿಂದ ಯತೀಂದ್ರ ಹೆಸರು ಸ್ಪಷ್ಟವಾಗಿದೆ. ಆದರೆ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಸ್ಪರ್ಧೆ ವಿಚಾರವಾಗಿ ಮತ್ತೆ ಗೊಂದಲದ ಹೇಳಿಕೆ ನೀಡಿದ್ದಾರೆ.
ಮೈಸೂರು, ಮಾರ್ಚ್ 22: ಒಂದೇ ಹೆಸರು ಇರುವ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಲಿದೆ. ಅದರಲ್ಲಿ ನನ್ನ ಹೆಸರು ಇರುತ್ತೊ ಇಲ್ಲವೋ ಗೊತ್ತಿಲ್ಲ. ವರುಣಾದಿಂದ ಯತೀಂದ್ರ ಹೆಸರು ಸ್ಪಷ್ಟವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಸ್ಪರ್ಧೆ ವಿಚಾರವಾಗಿ ಮತ್ತೆ ಗೊಂದಲದ ಹೇಳಿಕೆ ನೀಡಿದ್ದಾರೆ.
ಮೈಸೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸ್ಪರ್ಧಿಸುವ ಕ್ಷೇತ್ರದ ಬಗ್ಗೆ ಹೈ ಕಮಾಂಡ್ ಏನು ಮಾಡುತ್ತೊ ಗೊತ್ತಿಲ್ಲ. ನಾನು ಎಲ್ಲಾ ಆಯ್ಕೆಯನ್ನು ಹೈ ಕಮಾಂಡ್‌ಗೆ ಬಿಟ್ಟಿದ್ದೇನೆ. ಮನೆಯವರ ಅಭಿಪ್ರಾಯವನ್ನು ಕೇಳುತ್ತಿದ್ದೇನೆ. ಹೈ ಕಮಾಂಡ್ ನಿರ್ಧಾರವೇ ನನ್ನ ನಿರ್ಧಾರ. ನಾನು ಎಲ್ಲೇ ಸ್ಪರ್ಧಿಸಿದರು ಗೆಲ್ಲುವ ವಿಶ್ವಾಸ ಇದೆ ಎಂದು ತಮ್ಮ ಸ್ಪರ್ಧೆ ಜವಾಬ್ದಾರಿಯನ್ನು ಹೈ ಕಮಾಂಡ್ ಹೆಗಲಿಗೆ ಹೊರಸಿದ್ದಾರೆ.

ಮಾತು ಮುಂದುವರಿಸಿದ ಸಿದ್ದರಾಮಯ್ಯ, ನಾನು ಕ್ಷೇತ್ರಗಳನ್ನು ಹುಡುಕುತ್ತಿಲ್ಲ. ನನ್ನ ಕ್ಷೇತ್ರಕ್ಕೆ ಕರೆಯುವವರ ಸಂಖ್ಯೆ ಹೆಚ್ಚಾಗಿದೆ ಅಷ್ಟೇ. ನಾನು ಕ್ಷೇತ್ರ ಹುಡುಕುತ್ತಿದ್ದೇನೆ ಎನ್ನುವುದು ತಪ್ಪು ಗ್ರಹಿಕೆ. ಕ್ಷೇತ್ರ ಕೂತೂಹಲಕ್ಕೆ ಶೀಘ್ರವೇ, ನಾಳೆ ತೆರೆ ಬೀಳಬಹುದು, ಅಥವಾ ನಾಡಿದ್ದು ಬೀಳಬಹುದು. ಅದು ಹೈ ಕಮಾಂಡ್‌ಗೆ ಬಿಟ್ಟ ವಿಚಾರ. ಅಂದರೆ, ಮಾಡಿದರೆ ಎಂಬ ಪ್ರಶ್ನೆಗಳಿಗೆ ನಾನು ಉತ್ತರ ಕೊಡುವುದಿಲ್ಲ ಎಂದು ತಿಳಿಸಿದರು.
ಈ ವಾರ ಮತ್ತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮನ ಹಿನ್ನಲೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಅಡುಗೆ ಮಾಡಿದ್ದು ನಾವು ಅದನ್ನು ಬಡಿಸಲು ಈಗ ಪ್ರಧಾನಿ ಬರುತ್ತಿದ್ದಾರೆ ಅಷ್ಟೇ. ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಜಗತ್ತೇ ಕಣ್ಣು ಮುಚ್ಚಿಕೊಂಡಂತೆ ಆಗುವುದಿಲ್ಲ. ಪ್ರಧಾನ ಮಂತ್ರಿ ಮಾತುಗಳೆನ್ನೆಲ್ಲ ಜನ ನಂಬುವುದಿಲ್ಲ. ದಶಪಥ ರಸ್ತೆ ಮಾಡಿದ್ದು ನಾವು, ಐಐಟಿಗ ಜಾಗ ಕೊಟ್ಟು ಗುದ್ದಲಿ ಪೂಜೆ ಮಾಡಿದ್ದು ನಾನು. ಇವರು ಈಗ ಬರಿ ಉದ್ಘಾಟನೆಗೆ ಬರುತ್ತಿದ್ದಾರೆ. ಇದು ಜನರಿಗೆ ಅರ್ಥವಾಗುತ್ತದೆ ಬಿಡಿ ಎಂದರು.

ನಟ ಚೇತನ್ ಅಹಿಂಸಾ ಬಂಧನ ವಿಚಾರ ಮಾತನಾಡಿದ ಸಿದ್ದರಾಮಯ್ಯ, ಸಂವಿಧಾನದಲ್ಲಿ ವಾಕ್ ಸ್ವಾತಂತ್ರ್ಯ ನೀಡಲಾಗಿದೆ. ಹೇಳಿಕೆ ನೀಡಿದ ಮಾತ್ರಕ್ಕೆ ಬಂಧಿಸುವುದು ಸರಿಯಲ್ಲ. ಕೋರ್ಟ್‌ನಲ್ಲಿ ಇದೆಲ್ಲ ನಿಲ್ಲುವುದಿಲ್ಲ. ಮಹಿಳೆ ಮೇಲೆ ದೌರ್ಜನ್ಯ ನಡೆಯುತ್ತಿದೆ ಅಂತ ರಾಹುಲ್ ಗಾಂಧಿ ಹೇಳಿದ್ದರು. ಅದು ತಪ್ಪಾ ? ಪ್ರಜಾಪ್ರಭುತ್ವದಲ್ಲಿ ಮಾತನಾಡೋದು ತಪ್ಪಾ ? ಎಂದು ಪ್ರಶ್ನಿಸಿದರು.
ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು
ವರುಣ ಕ್ಷೇತ್ರಕ್ಕೆ ಡಾ.ಯತೀಂದ್ರ ಸಿದ್ದರಾಮಯ್ಯ ಅವರೇ ಅಭ್ಯರ್ಥಿ. ಮತ್ತೊಮ್ಮೆ ವರುಣಾ ಕ್ಷೇತ್ರಕ್ಕೆ ತಾವು ಬರುವುದನ್ನು ತಳ್ಳಿ ಹಾಕುವಂತಿಲ್ಲ ಎಂದ ಸಿದ್ದರಾಮಯ್ಯ. ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಕೋಲಾರ ಜನರಿಗೂ ಹೈಕಮಾಂಡ್ ಜೊತೆ ಚರ್ಚೆ ಮಾಡಿ ತಿಳಿಸುತ್ತೇನೆ ಎಂದು ಹೇಳಿದ್ದೇನೆ. ಒಂದೇ ಬಾರಿ ಎರಡೆರಡು ರೀತಿ ಹೇಳಿಕೆ ಕೊಟ್ಟ ಸಿದ್ದರಾಮಯ್ಯ. ಬಾದಾಮಿ, ಕೋಲಾರ, ವರುಣ ನನ್ನ ಆಯ್ಕೆ. ನನ್ನ ಅರ್ಜಿಯಲ್ಲಿ ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟಿದ್ದೇನೆ ಅಂತ ಬರೆದಿದ್ದೇನೆ. ನಾನು ಎಲ್ಲಿ ಸ್ಪರ್ಧಿಸಬೇಕು ಎನ್ನುವುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.
ರಾಜ್ಯ ರಾಜಕೀಯದಲ್ಲಿ ಮತ್ತೆ ಸಿದ್ದರಾಮಯ್ಯ ಅವರು ಎಲ್ಲಿ ಸ್ಪರ್ಧೆ ಮಾಡುತ್ತಾರೆ ಎನ್ನುವ ಚರ್ಚೆ ಶುರುವಾಗಿದೆ. ಈ ಚರ್ಚೆ ಕಳೆದೊಂದು ವರ್ಷದಿಂದ ನಿರಂತರವಾಗಿ ನಡೆಯುತ್ತಲೇ ಇದೆ. ಗೆಲುವು ತಂದುಕೊಡಬಹುದಾದ ಮೈಸೂರಿನ ವರುಣಾ ಕ್ಷೇತ್ರದತ್ತ ಸಿದ್ದರಾಮಯ್ಯ ಮುಖ ಮಾಡುತ್ತಾರೆ ಎಂಬ ಸುದ್ದಿ ಪ್ರಚಲಿತದಲ್ಲಿದೆ. ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರು ಸ್ಪರ್ಧಿಸಿದರೆ ಸುಲಭವಾಗಿ ಗೆಲುವು ಸಾಧಿಸುತ್ತಾರೆ ಎಂಬುದು ನಿಜವೇ ಆಗಿದ್ದರೂ ತಮಗಾಗಿ ತಮ್ಮ ಮಗನ ರಾಜಕೀಯ ಭವಿಷ್ಯಕ್ಕೆ ತೊಂದರೆ ಮಾಡಲು ಅವರು ತಯಾರಿದ್ದಾರಾ ಎಂಬ ಪ್ರಶ್ನೆಗಳು ಕಾಡಲಾರಂಭಿಸಿದ್ದವು, ಆದರೆ ಸಿದ್ದರಾಮಯ್ಯ ವರುಣ ಕ್ಷೇತ್ರಕ್ಕೆ ಡಾ.ಯತೀಂದ್ರ ಸಿದ್ದರಾಮಯ್ಯ ಅವರೇ ಅಭ್ಯರ್ಥಿ ಎಂದು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications