ಸಿದ್ದರಾಮನಹುಂಡಿಯಿಂದ ನಾಮಪತ್ರ ಸಲ್ಲಿಸಲು ಹೊರಟ ಸಿದ್ದರಾಮಯ್ಯ
ಮೈಸೂರು, ಏಪ್ರಿಲ್ 19: ವರುಣಾ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸಿದ್ದರಾಮಯ್ಯ ಅವರು ಬುಧವಾರ ತಮ್ಮ ಸ್ವಗ್ರಾಮ ಸಿದ್ದರಾಮಯ್ಯನಹುಂಡಿಯಿಂದ ನಾಮಪತ್ರ ಸಲ್ಲಿಸಲು ಹೊರಟಿದ್ದಾರೆ.
ಸಿದ್ದರಾಮನಹುಂಡಿಯಿಂದ ಹೊರಟ ಸಿದ್ದರಾಮಯ್ಯ ಅವರಿಗೆ ಸ್ವಗ್ರಾಮದ ಮುಂಭಾಗ ಗ್ರಾಮಸ್ಥರು ಕಾರ್ಯಕರ್ತರು ಭಾರಿ ಸಂಖ್ಯೆಯಲ್ಲಿ ಸೇರಿ ಹೂಮಳೆಗರೆದರು. ಅಪಾರ ಸಂಖ್ಯೆಯಲ್ಲಿದ್ದ ಜನರು ಸಿದ್ದರಾಮಯ್ಯ ಅವರಿಗೆ ಜೈ, ಕಾಂಗ್ರೆಸ್ ಪಾರ್ಟಿಗೆ ಜೈ ಹಾಗೂ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಜೈ ಎಂದು ಘೋಷಣೆ ಕೂಗಿ ಬೆಂಬಲ ಸೂಚಿಸಿದರು.

ಸಿದ್ದರಾಮಯ್ಯ ಅವರು ಬುಧವಾರ 2 ಗಂಟೆಗೆ ನಂಜನಗೂಡು ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ಇದಕ್ಕೂ ಮೊದಲು ಹಲವಾರು ಗ್ರಾಮ ಸೇರಿದಂತೆ ಮೈಸೂರಿನ ಹಲವೆಡೆ ಮತಯಾಚನೆ ಮಾಡುವ ಸಾಧ್ಯತೆ ಇದೆ, ಇದಲ್ಲದೆ ಸಭೆಗಳು ಇವೆ ಎನ್ನಲಾಗಿದೆ.
ವರುಣಾ ವಿಧಾನಸಭಾ ಕ್ಷೇತ್ರದಿಂದ ಸಿದ್ದರಾಮಯ್ಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದು, ಇವರ ವಿರುದ್ಧ ಬಿಜೆಪಿಯಿಂದ ಅಭ್ಯರ್ಥಿಯಾಗಿ ವಿ ಸೋಮಣ್ಣ ಅವರು ಕಣಕ್ಕೆ ಇಳಿಯುತ್ತಿದ್ದಾರೆ. ಈಗಾಗಲೇ ಮತಯಾಚನೆ ಭರ್ಜರಿ ಪ್ರಚಾರ ನಡೆಸುತ್ತಿರುವ ಅವರು ಹಲವೆಡೆ ಸಭೆಗಳನ್ನು ನಡೆಸುತ್ತಿದ್ದಾರೆ.
ನಿನ್ನೆ ಮಂಗಳವಾರ ನಾಮಪತ್ರ ಸಲ್ಲಿಸುವ ಬಗ್ಗೆ ಸಿದ್ದರಾಮಯ್ಯ ಅವರು ಭ್ರಷ್ಟ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕಿತ್ತೆಸೆದು 'ಸರ್ವರನ್ನೂ ಒಳಗೊಂಡ, ಸರ್ವತೋಮುಖ ಪ್ರಗತಿಯ ಜನಪರ ಕಾಂಗ್ರೆಸ್ ಸರ್ಕಾರ' ವನ್ನು ಅಧಿಕಾರಕ್ಕೆ ತರುವ ಸಂಕಲ್ಪದೊಂದಿಗೆ ವರುಣಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಳೆ ನಾಮಪತ್ರ ಸಲ್ಲಿಸುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ಅಲ್ಲದೆ ನಾನು ವರುಣಾ ಕ್ಷೇತ್ರದಲ್ಲಿ ಹುಟ್ಟಿ ಬೆಳೆದ, ಇಲ್ಲಿನ ಮಣ್ಣಿನ ಮಗ. ಇವ ನಮ್ಮವ ಎಂಬ ಭಾವನೆ ಇಲ್ಲಿನ ಜನರಲ್ಲಿದೆ. ಈ ಹಿಂದೆ ವರುಣಾವನ್ನು ಪ್ರತಿನಿಧಿಸಿದಾಗೆಲ್ಲ ಕ್ಷೇತ್ರದ ಅಭಿವೃದ್ಧಿಗೆ ಶಕ್ತಿಮೀರಿ ದುಡಿದಿದ್ದೇನೆ. ನನ್ನ ಸಾಧನೆಗಳು ಇಲ್ಲಿನ ಜನರ ಬದುಕಿನಲ್ಲಿದೆ. ನನ್ನ ಗೆಲುವಿಗೆ ಇದಕ್ಕಿಂತ ಹೆಚ್ಚೇನು ಬೇಕು? ಎಂದು ಕೂಡ ಟ್ವೀಟ್ ಮಾಡಿದ್ದಾರೆ.
ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪ್ರಬಲ ಅಭ್ಯರ್ಥಿಯಾಗಿದ್ದಾರೆ, ಆದರೆ ಅವರ ವಿರುದ್ಧ ವಿ ಸೋಮಣ್ಣ ಕಣಕ್ಕೆ ಇಳಿದಿರುವುದರಿಂದ ಈಗ ವರುಣಾ ಹೈವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಟ್ಟಿದೆ. ಹೈವೋಲ್ಟೇಜ್ ಕಣವಾದ ವರುಣಾದಲ್ಲಿ ಇಂಡಿಯಾ ಟುಡೇ ವರದಿಗಾರ್ತಿಯೊಬ್ಬರು ಸಿದ್ದರಾಮಯ್ಯ ಅವರ ಬಗ್ಗೆ ಕೇಳಿದಾಗ, ಜನ ಧರಿಸಿದ್ದ ಚಪ್ಪಲಿಯನ್ನು ತೆಗೆದು ಉತ್ತರಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ರಾಷ್ಟ್ರೀಯ ಮಾಧ್ಯಮ ವರದಿಗಾರ್ತಿ ಜೊತೆ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವಾಗ ಜನ ಚಪ್ಪಲಿ ತೆಗೆದು ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ತಕ್ಷಣ ವರದಿಗಾರ್ತಿ ಚಪ್ಪಲಿ ಯಾಕೆ ತೆಗೆದಿರಿ ಎಂದು ಕೇಳಿದಾಗ, ವಯಸ್ಸಾದ ವ್ಯಕ್ತಿಯೊಬ್ಬರು 'ಅವರು ನಮ್ಮ ದೇವರು, ಹಾಗಾಗಿ ಉತ್ತರಿಸಲು ಪಾದರಕ್ಷೆ ತೆಗೆದಿದ್ದೇನೆ' ಎಂದು ಹೇಳಿದ್ದಾರೆ.












Click it and Unblock the Notifications