ಚಾಮುಂಡೇಶ್ವರಿ ಕ್ಷೇತ್ರ: ಫಲಿತಾಂಶಕ್ಕೂ ಮುನ್ನವೇ ಸೋಲೊಪ್ಪಿಕೊಂಡ ಸಿದ್ದರಾಮಯ್ಯ?
ಮೈಸೂರು, ಮೇ 11: ಕಳೆದ ಬಾರಿ ಸಿದ್ದರಾಮಯ್ಯ ಹಾಗೂ ಜಿ.ಟಿ.ದೇವೇಗೌಡ ನಡುವೆ ಪ್ರತಿಷ್ಠೆ ಕಣವಾಗಿದ್ದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಗೆಲುವಿನ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅನುಮಾನ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಮಾವಿನಹಳ್ಳಿ ಸಿದ್ದೇಗೌಡ ಮೋಸಗಾರ ಎಂದು ಕಿಡಿಕಾರಿದರು. ಮಾವಿನಹಳ್ಳಿ ಸಿದ್ದೇಗೌಡ ಕಳೆದ ಒಂದು ವಾರದಿಂದ ಕ್ಷೇತ್ರದಲ್ಲಿ ಕಾಣಿಸಿಕೊಂಡಿಲ್ಲ. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಈ ಸಂಬಂಧ ಸುದ್ದಿಗಾರರ ಪ್ರಶ್ನೆಗೆ ಸಿದ್ದರಾಮಯ್ಯ ಬೇಸರ ಹಾಗೂ ಆಕ್ರೋಶದಿಂದಲೇ ಉತ್ತರಿಸಿದ್ದಾರೆ.

ಈತ ಇಂತಹವನು ಅಂತ ಗೊತ್ತಿದ್ದರೆ ನಮ್ಮ ಹುಡುಗನನ್ನೇ ನಿಲ್ಲಿಸುತ್ತಿದ್ದೆ. ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿದ್ದೇಗೌಡ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ದೂರು ನೀಡಿದ್ದಾರೆ ಎಂದು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ನಮಗೆ ಬಹುಮತ ಬರುವುದು ಖಚಿತವಾಗಿದೆ. ಅದನ್ನೇ ಬಹುತೇಕ ಎಲ್ಲಾ ಚುನಾವಣೋತ್ತರ ಸರ್ವೆಗಳೂ ಹೇಳುತ್ತಿದೆ. ನಾನು ಜನರ ನಾಡಿಮಿಡಿತ ಅರ್ಥಮಾಡಿಕೊಂಡಿರೋದು ಸರಿಯಿದೆ. ನಾನೇನು ಫಲಿತಾಂಶದ ನಿರೀಕ್ಷೆ ಮಾಡಿದ್ದೆನೋ ಅದೇ ಫಲಿತಾಂಶ ಬರಲಿದೆ. ಕರಾವಳಿ ಭಾಗದಲ್ಲಿ ಈ ಬಾರಿ ನಮ್ಮ ಸೀಟು ಹೆಚ್ಚಾಗಲಿದೆ. ಭಜರಂಗದಳ ವಿಚಾರ ಒಂದು ವಿವಾದದ ವಿಚಾರವೇ ಅಲ್ಲ. ನಾವು ನಮ್ಮ ಪ್ರಣಾಳಿಕೆಯಲ್ಲಿ ಬಹಳ ಸ್ಪಷ್ಟವಾಗಿ ಹೇಳಿದ್ದೇವೆ. ಬಿಜೆಪಿಯವರು ಅದನ್ನು ಅಪಪ್ರಚಾರ ಮಾಡಿದರು ಎಂದು ಹೇಳಿದರು.
ಲಿಂಗಾಯತ ನಾಯಕರೆಲ್ಲಾ ಭ್ರಷ್ಟಾಚಾರಿಗಳು ಅಂತ ನಾನೆಲ್ಲಿ ಹೇಳಿದ್ದೆ? ನಾನು ಬಸವರಾಜ ಬೊಮ್ಮಾಯಿ ಭ್ರಷ್ಟಾಚಾರಿ ಅಂತ ಹೇಳಿದ್ದೆ, ನನ್ನ ಮಾತನ್ನು ತಿರುಚಿ ಅಪಪ್ರಚಾರ ಮಾಡಿದರು. ವರುಣಾದಲ್ಲಿ ನಾನು ಬಹಳ ಸುಲಭವಾಗಿ ಗೆಲುವು ದಾಖಲಿಸಲಿದ್ದೇನೆ. ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಿನ ಪೈಪೋಟಿ ಇದೆ. ಬಿಜೆಪಿ ಎಲ್ಲೂ ಕೂಡ ನೇರವಾಗಿ ನಮ್ಮ ಜೊತೆ ಪೈಪೋಟಿ ಇಲ್ಲ
ಸೋಮಣ್ಣಂಗೆ ವರುಣಾ ಜನ ಯಾಕೆ ವೋಟ್ ಹಾಕಬೇಕು? ಕ್ಷೇತ್ರಕ್ಕೆ ಅವರ ಕೊಡುಗೆ ಏನು? ಅವರು ಜಾತಿ ಕಾರ್ಡ್ ಪ್ಲೇ ಮಾಡಿದ್ದಾರೆ, ಅದು ಬಿಟ್ಡರೆ ದುಡ್ಡಿನ ರಾಜಕೀಯ ಮಾಡಿದ್ದಾರೆ ಎಂದು ದೂರಿದರು.












Click it and Unblock the Notifications