ಸಿದ್ದರಾಮಯ್ಯ ಒಬ್ಬ ತಲಾಕ್ ರಾಜಕಾರಣಿ: ಈಶ್ವರಪ್ಪ ವ್ಯಂಗ್ಯ
ಸಿದ್ದರಾಮಯ್ಯ ಒಬ್ಬ ತಲಾಖ್ ರಾಜಕಾರಣಿ. ಅಧಿಕಾರ ಸಿಗಲಿಲ್ಲ ಅಂತ ಜೆಡಿಎಸ್ ಪಕ್ಷಕ್ಕೆ ತಲಾಖ್ ನೀಡಿದರು. ಇದೀಗ ಮುಖ್ಯಮಂತ್ರಿ ಸ್ಥಾನದಿಂದ ಇಳಿದ ಮೇಲೆ ಕಾಂಗ್ರೆಸ್ ಗೂ ತಲಾಖ್ ನೀಡಲಿದ್ದಾರೆ ಎಂದು ಈಶ್ವರಪ್ಪ ಹೇಳಿದರು.
ಮೈಸೂರು, ಏಪ್ರಿಲ್ 4 : ತಾಯಿಯ ಎದೆ ಹಾಲು ಕುಡಿದು ಅವಳಿಗೆ ವಿಷ ಉಣಿಸುವ ಕೆಲಸವನ್ನು ನಾನೆಂದೂ ಮಾಡೋಲ್ಲ. ನನ್ನ ಹುಟ್ಟು-ಸಾವು ಎಲ್ಲವೂ ಬಿಜೆಪಿಯಲ್ಲೇ. ನನ್ನ ಪಕ್ಷ ನಿಷ್ಠೆ ಬಗ್ಗೆ ಮಾತನಾಡಬೇಡಿ ಎಂದು ವಿಧಾನ ಪರಿಷತ್ ವಿಪಕ್ಷನಾಯಕ ಕೆ.ಎಸ್.ಈಶ್ವರಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
ಮೈಸೂರಿನ ಖಾಸಗಿ ಹೊಟೇಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷ ನಿಷ್ಠೆ ಬಗ್ಗೆ ಮಾತನಾಡಿದರೆ ನನ್ನ ತಾಯಿಯ ಬಗ್ಗೆ ಮಾತನಾಡಿದಷ್ಟು ಕೋಪ ಬರುತ್ತೆ. ಸಿದ್ದರಾಮಯ್ಯ ನಿಮಗೆ ಪಕ್ಷ ನಿಷ್ಠೆ ಎಂದರೆ ಏನು ಅಂತ ಗೊತ್ತಿಲ್ಲ.ಅದಕ್ಕೇ ಬೇರೆಯವರ ಪಕ್ಷ ನಿಷ್ಠೆ ಬಗ್ಗೆ ಮಾತನಾಡುತ್ತಿರಿ. ಸಿದ್ದರಾಮಯ್ಯ ಒಬ್ಬ ತಲಾಖ್ ರಾಜಕಾರಣಿ. ಅಧಿಕಾರ ಸಿಗಲಿಲ್ಲ ಅಂತ ಜೆಡಿಎಸ್ ಪಕ್ಷಕ್ಕೆ ತಲಾಖ್ ನೀಡಿದರು. ಇದೀಗ ಮುಖ್ಯಮಂತ್ರಿ ಸ್ಥಾನದಿಂದ ಇಳಿದ ಮೇಲೆ ಕಾಂಗ್ರೆಸ್ ಗೂ ತಲಾಖ್ ನೀಡಲಿದ್ದಾರೆ ಎಂದು ವ್ಯಂಗ್ಯವಾಗಿ ಹೇಳಿದರು.[ಕೃಷ್ಣರ 'ದೂರಾಲೋಚನೆ' ಹೇಳಿಕೆಗೆ ಸಿದ್ದು ತಿರುಗೇಟು]

ಸಿದ್ದರಾಮಯ್ಯ ನನ್ನ ಬಗ್ಗೆ ಟೀಕೆ ಮಾಡಿದರೆ ಅದಕ್ಕೆ ನನ್ನ ಅಭ್ಯಂತರವಿಲ್ಲ. ಆದರೆ ನನ್ನ ತಾಯಿಯ ಬಗ್ಗೆ ಮಾತನಾಡಬೇಡಿ. ಇಂಥ ಹೇಳಿಕೆಗಳಿಗೆ ಈ ಕೂಡಲೇ ಕ್ಷಮೆ ಕೇಳಿ ಎಂದು ಒತ್ತಾಯಿಸಿದರು. ನನಗೆ ತಲೆ ಕೆಟ್ಟಿದ್ದರೆ ಅದನ್ನ ನೋಡಲು ಒಳ್ಳೆಯ ಡಾಕ್ಟರ್ ಇದ್ದಾರೆ. ಆದರೆ ಸಿದ್ದರಾಮಯ್ಯ ಅವರ ನಡವಳಿಕೆ ಹಾಗೂ ಭಾವನೆ ಅರ್ಥ ಮಾಡಿಕೊಳ್ಳಲು ಯಾರೂ ಇಲ್ಲ ಎಂದು ಕುಟುಕಿದರು.[84ರ ಪ್ರಾಯದಲ್ಲಿ ಮದುವೆ ಆಗೋಕೆ ಸಾಧ್ಯವೇ: ಕೃಷ್ಣಗೆ ಇಬ್ರಾಹೀಂ ಲೇವಡಿ]
ಸಿದ್ದರಾಮಯ್ಯ ತಾವೇ ದಲಿತರ ಚಕ್ರಾಧಿಪತಿ ಎಂದುಕೊಂಡಿದ್ದಾರೆ. ಆದರೆ ಅವರೊಬ್ಬ ಸುಳ್ಳಿನ ಸರದಾರ. ಸುಳ್ಳು ಹೇಳುವುದರಲ್ಲಿ ನೊಬೆಲ್ ಪ್ರಶಸ್ತಿ ನೀಡುವುದಿದ್ದರೆ ಅದನ್ನು ಸಿದ್ದರಾಮಯ್ಯನವರಿಗೆ ನೀಡಬೇಕಾಗುತ್ತಿತ್ತು ಎಂದರು.[ಸಿದ್ದರಾಮಯ್ಯ ಸರ್ಕಾರಕ್ಕೆ ದೂರದೃಷ್ಟಿ ಇಲ್ಲ: ಕೃಷ್ಣ ಟೀಕೆ]
ಏಪ್ರಿಲ್ 9, ಭಾನುವಾರದಂದು ನಡೆಯಲಿರುವ ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯ ಪ್ರಚಾರದಲ್ಲಿ ತೊಡಗಿರುವ ಉಭಯ ಪಕ್ಷಗಳ ನಾಯಕರು ಪರಸ್ಪರ ಮಾತಿನಲ್ಲೇ ಕೆಸರೆರಚಾಟ ಆರಂಭಿಸಿದ್ದು, ಏಪ್ರಿಲ್ 13, ಗುರುವಾರ ಫಲಿತಾಂಶ ಪ್ರಕಟವಾಗುವವರೆಗೂ ಜನರಿಗೆ ಮನರಂಜನೆಗಂತೂ ಕೊರತೆಯಿಲ್ಲ![ನಂಜನಗೂಡು: ಜನಸೇವೆ ಮಾಡುವ ಅಭ್ಯರ್ಥಿಗೆ ಮತನೀಡಿ-ಸಿದ್ದರಾಮಯ್ಯ]












Click it and Unblock the Notifications