ಬಾದಾಮಿಯಿಂದ ಸ್ಪರ್ಧೆಗೆ ಥಂಬ್ಸ್ ಅಪ್ ಹೇಳಿದ ಸಿದ್ದರಾಮಯ್ಯ!
ಮೈಸೂರು, ಏಪ್ರಿಲ್ 19: ಎರಡು ಕ್ಷೇತ್ರಗಳಲ್ಲಿ ಸಿಎಂ ಸ್ಪರ್ಧೆ ಬಗ್ಗೆ ಹಲವು ದಿನಗಳಿಂದ ಉಂಟಾಗಿದ್ದ ಗೊಂದಲ, ಅನುಮಾನಗಳಿಗೆ ಸಿದ್ದರಾಮಯ್ಯ ತೆರೆ ಎಳೆದಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬಾದಾಮಿಯಿಂದ ಸ್ಪರ್ಧಿಸಲು ನಾನು ಸಿದ್ಧ ಎಂದು ಅವರು ಹೇಳಿದ್ದಾರೆ.
ಹೀಗಾಗಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಜೊತೆಗೆ ಅವರು ಬಾದಾಮಿಯಿಂದಲೂ ಸ್ಪರ್ಧಿಸಲಿದ್ದಾರೆ. ಚಾಮುಂಡೇಶ್ವರಿಯಲ್ಲಿ ಗೆಲುವು ಸಾಧಿಸುವ ಬಗ್ಗೆ ಮುಖ್ಯಮಂತ್ರಿಗಳಿಗೆ ಸಂಪೂರ್ಣ ಭರವಸೆ ಇದ್ದಂತೆ ಕಾಣಿಸುತ್ತಿಲ್ಲ. ಈ ಕಾರಣಕ್ಕೆ ಅವರು ಬಾದಾಮಿಯಿಂದಲೂ ಸ್ಪರ್ಧಿಸಲು ಮುಂದಾಗಿದ್ದಾರೆ.
ಈ ಹಿಂದೆಯೇ ಮುಖ್ಯಮಂತ್ರಿ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ಇದೆಲ್ಲಾ ಮಾಧ್ಯಮಗಳ ಸೃಷ್ಟಿ ಎಂದು ಸಿದ್ದರಾಮಯ್ಯ ಜಾರಿಕೊಂಡಿದ್ದರು.

ಕೊನೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದಾಗ ಬಾದಾಮಿಯಲ್ಲಿ ಹಾಲಿ ಶಾಸಕ ಬಿಬಿ ಚಿಮ್ಮನಕಟ್ಟಿಯವರಿಗೆ ಟಿಕೆಟ್ ನೀಡದೆ, ಅತ್ತ ಸಿದ್ದರಾಮಯ್ಯನವರಿಗೂ ಅವಕಾಶ ನೀಡದೆ ಡಾ. ದೇವರಾಜ್ ಪಾಟೀಲ್ ಅವರಿಗೆ ಟಕೆಟ್ ನೀಡಲಾಗಿತ್ತು.
ಹೀಗಿದ್ದೂ ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಓಡಾಡುತ್ತಿದ್ದವು. ನಿನ್ನೆ ಸಂಜೆ ಪುನಃ ಬಿಬಿ ಚಿಮ್ಮನಕಟ್ಟಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ನೀವು ಸ್ಪರ್ಧಿಸುವುದಿದ್ದರೆ ಕ್ಷೇತ್ರ ಬಿಟ್ಟುಕೊಡುತ್ತೇನೆ. ಇಲ್ಲದಿದ್ದರೆ ನನಗೆ ಟಿಕೆಟ್ ಕೊಡಿ ಎಂದಿದ್ದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ನಾನೇ ಸ್ಪರ್ಧಿಸುತ್ತೇನೆ ಎಂದಿದ್ದರು.
ಇದೀಗ ಇಂದು ಚಾಮುಂಡೇಶ್ವರಿಯಲ್ಲಿ ಪ್ರಚಾರ ನಡೆಸುತ್ತಿರುವ ಮುಖ್ಯಮಂತ್ರಿಗಳು ಬಾದಾಮಿಯಲ್ಲಿ ಸ್ಪರ್ಧಿಸುವುದನ್ನು ಖಚಿತಪಡಿಸಿದ್ದಾರೆ.












Click it and Unblock the Notifications