ಸಿದ್ದರಾಮಯ್ಯನವರ ಚಿತ್ತ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದತ್ತ...
ಮೈಸೂರು, ಏಪ್ರಿಲ್ 28: ಕೊಡಗು - ಮೈಸೂರು ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರದ ಹಣೆಬರಹ ಬರೆಯಲಿದೆ. ಈ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಬಿಜೆಪಿ ಸಂಸದ ಪ್ರತಾಪ್ ಸಿಂಹ ಎರಡನೇ ಅವಧಿ ಸಂಸತ್ ಗೆ ಆಯ್ಕೆಯಾದರೆ, ಕುಮಾರಸ್ವಾಮಿ ಅಧಿಕಾರದಿಂದ ಕೆಳಗಿಳಿಯಬೇಕಾಗುತ್ತದೆ.
ಒಂದು ವೇಳೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಜಯಶಂಕರ್ ಜಯಶೀಲರಾದರೆ ರಾಜ್ಯಮಟ್ಟದಲ್ಲಿ ಸರ್ಕಾರಕ್ಕೆ ಯಾವುದೇ ತೊಂದರೆ ಎದುರಾಗದು. ಹೌದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕ್ಷೇತ್ರವನ್ನು ಸದ್ಯ ಪ್ರತಿಷ್ಠೆಯ ಕಣವಾಗಿ ತೆಗೆದುಕೊಂಡಿದ್ದಾರೆ.
ತಮ್ಮನ್ನು ನಂಬಿ ತಾವು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ವಿಜಯಶಂಕರ್ ಗೆ ತಾವು ಕೊಟ್ಟ ಮಾತು ಉಳಿಸಿಕೊಳ್ಳಲು ಮುಖ್ಯಮಂತ್ರಿ ಅವರಿಗೆ ಪರೋಕ್ಷವಾಗಿ ಎಚ್ಚರಿಕೆ ಸಂದೇಶ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕ್ಷೇತ್ರದ ಚುನಾವಣಾ ಪ್ರಚಾರದ ವೇದಿಕೆಯಲ್ಲಿ ಕುಮಾರಸ್ವಾಮಿ ಅವರಿಗೆ ಈ ಎಚ್ಚರಿಕೆ ಸಂದೇಶವನ್ನು ನೀಡಿದ್ದ ಸಿದ್ದರಾಮಯ್ಯ, ಕಾಂಗ್ರೆಸ್ ನ ವಿಜಯಶಂಕರ್ ಸೋಲುಂಡರೆ ನಿಮ್ಮನ್ನು ಹೊಣೆಗಾರರನ್ನಾಗಿ ಮಾಡಿ ಅಂದೇ ಮೈತ್ರಿ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂತೆಗೆದುಕೊಳ್ಳುವುದಾಗಿ ಎಚ್ಚರಿಸಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ಅಭ್ಯರ್ಥಿ ಪರ ಜೆಡಿಎಸ್ ನಾಯಕರ ಕೆಲಸ
ಜೆಡಿಎಸ್ ವರಿಷ್ಠ ದೇವೇಗೌಡ ಮತ್ತು ಸಿದ್ದರಾಮಯ್ಯ ನಡುವೆ ರಾಜಕೀಯ ವೈಮನಸ್ಸು ಇದ್ದರೂ ಕೊನೆಗಳಿಗೆಯಲ್ಲಿ ಮೈತ್ರಿ ಅಭ್ಯರ್ಥಿ ಪರ ಹೋರಾಟ ನಡೆಸಿದ್ದರು. ಮೈಸೂರು - ಕೊಡಗು ಕ್ಷೇತ್ರದಲ್ಲೂ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ನಾಯಕರು ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡಿದ್ದಾರೆ. ಒಕ್ಕಲಿಗರು ಸಿದ್ದರಾಮಯ್ಯ ವಿರುದ್ಧದ ಹಳೆ ದ್ವೇಷ ಮರೆತು ಮತ ನೀಡಿದ್ದರೆ ಅವರ ಅಭ್ಯರ್ಥಿ ಗೆಲ್ಲುತ್ತಾರೆ , ಸ್ವಜಾತಿ ಅಭ್ಯರ್ಥಿ ಕಡೆ ವಾಲಿದರೆ ಕುಮಾರಸ್ವಾಮಿ ಅಧಿಕಾರ ಕಳೆದುಕೊಳ್ಳುವುದು ನಿಶ್ಚಿತ ಎಂಬುದು ಇಲ್ಲಿಯ ಜನರ ಮಾತು.

ದೇವೇಗೌಡರ ಮಾತಿಗೆ ಮನ್ನಣೆ ನೀಡುತ್ತಾರಾ?
ಪ್ರತಾಪ್ ಸಿಂಹ ಕಳೆದ ಚುನಾವಣೆಯಲ್ಲಿ ಆಗಿನ ಕಾಂಗ್ರೆಸ್ ಹಿರಿಯ ನಾಯಕ ವಿಶ್ವನಾಥ್ ವಿರುದ್ಧ 30 ಸಾವಿರಕ್ಕೂ ಹೆಚ್ಚು ಅಧಿಕ ಮತ ಪಡೆದು ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದ್ದರು. ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಒಕ್ಕಲಿಗ ಮತದಾರರು ತಮ್ಮ ಅಧಿನಾಯಕ ದೇವೇಗೌಡರ ಮಾತಿಗೆ ಮನ್ನಣೆ ನೀಡಿಲ್ಲ ಎಂದಾದರೆ, ಮೈತ್ರಿ ಸರಕಾರದ ಪತನಕ್ಕೆ ಗೌಡ ಸಮುದಾಯವೇ ನಾಂದಿ ಹಾಡಿದಂತೆ.

ಈ ಮುಖಭಂಗದಿಂದ ತಪ್ಪಿಸಿಕೊಂಡಿದ್ದರು
ಚುನಾವಣೆಗೂ ಮುನ್ನ ಈ ಕ್ಷೇತ್ರವನ್ನು ತಮ್ಮ ಪಕ್ಷದ ಪಾಲಿಗೆ ತೆಗೆದುಕೊಳ್ಳುವಲ್ಲಿ ಜೆಡಿಎಸ್ ಮಾಡಿದ ಮೊದಲ ಪ್ರಯತ್ನ ಯಶಸ್ವಿಯಾಗಿತ್ತು. ಆದರೆ ಸಿದ್ದರಾಮಯ್ಯ ದೆಹಲಿ ಮಟ್ಟದಲ್ಲಿ ಕಾಂಗ್ರೆಸ್ ಪರವಾಗಿ ಮಾಡಿಕೊಳ್ಳುವ ಮೂಲಕ ತಮಗಾಗುವ ಮುಖಭಂಗದಿಂದ ತಪ್ಪಿಸಿಕೊಂಡಿದ್ದರು.

ಎಲ್ಲವನ್ನೂ ಕಾದು ನೋಡಬೇಕಿದೆ
ಪ್ರತಿಷ್ಠೆಗೆ ಬಿದ್ದು ಕ್ಷೇತ್ರ ದಕ್ಕಿಸಿಕೊಂಡ ನಂತರ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವುದು ಸಿದ್ದರಾಮಯ್ಯ ಅವರಿಗೆ ಮುಖ್ಯವಾಗಿತ್ತು. ಜೆಡಿಎಸ್ ಬೆಂಬಲವಿಲ್ಲದೆ ಏನು ಸಾಧ್ಯವಿಲ್ಲ ಎಂದು ಮನಗಂಡ ಮಾಜಿ ಸಿಎಂ ಸಿದ್ದರಾಮಯ್ಯ, ಆ ಪಕ್ಷದ ನಾಯಕರನ್ನು ಚುನಾವಣಾ ಕಣಕ್ಕೆ ಧುಮುಕಲು ಸರ್ಕಾರದ ಅಳಿವು ಉಳಿವಿನ ಎಚ್ಚರಿಕೆ ನೀಡಿದ್ದರು. ಆದ್ದರಿಂದ ಈ ಬಾರಿ ಸಿದ್ದರಾಮಯ್ಯ ತಮ್ಮ ಪಕ್ಷದ ಅಭ್ಯರ್ಥಿ ಪರ ಮಾಡಿದ ಯೋಜನೆಗಳು ಹೇಗೆ ಮುನ್ನಡೆಸಿಕೊಂಡು ಹೋಗಲಿದೆ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications