'ಆ ದುರಹಂಕಾರಿ ನಾಯಕರಿಗೆ ಜನರು ಸರಿಯಾದ ಉತ್ತರ ನೀಡಲಿದ್ದಾರೆ'
ಮೈಸೂರು, ಮಾರ್ಚ್ 18:ನಾನು ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದೇನೆ ಎಂದು ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಘೋಷಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ನಾನು ಚುನಾವಣೆ ರಾಜಕೀಯದಿಂದ ದೂರ ಸರಿದಿದ್ದೆ. ಕಾರ್ಯಕರ್ತರ ಹಾಗೂ ಅಭಿಮಾನಿಗಳ ಒತ್ತಡದ ಮೇರೆಗೆ ಲೋಕಸಭೆಗೆ ಸ್ಪರ್ಧಿಸಲು ಮುಂದಾಗಿದ್ದೇನೆ. ನನ್ನ 40 ವರ್ಷದ ರಾಜಕೀಯ ಜೀವನದಲ್ಲಿ 5 ಬಾರಿ ಸಂಸದ ಹಾಗೂ ಎರಡು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಕ್ಷೇತ್ರದ ಜನರು ಈ ಬಾರಿ ನನ್ನನ್ನ ಆರಿಸಿ ಗೆಲ್ಲಿಸುವ ವಿಶ್ವಾಸವಿದೆ ಎಂದು ಹೇಳಿದರು.
ದೇಶದಲ್ಲಿರುವಂತೆ ರಾಜ್ಯದಲ್ಲೂ ಮೋದಿ ಅಲೆ ಇದೆ. ಕಾಂಗ್ರೆಸ್ ಪಕ್ಷ ದಿನದಿಂದ ದಿನಕ್ಕೆ ಹೀನಾಯ ಪರಿಸ್ಥಿತಿ ತಲುಪಿದೆ. ಇದೇ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷ ದೇಶದ ಇತರ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೋಗುವ ದುಷ್ಪ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಬಾರಿ ಗೆದ್ದಂತಹ ಸ್ಥಾನಗಳನ್ನು ಕಾಂಗ್ರೆಸ್ ಪಕ್ಷ ಕಳೆದುಕೊಳ್ಳಲಿದೆ ಎಂದು ತಿಳಿಸಿದರು.
ಚಾಮರಾಜನಗರದಲ್ಲಿ ನನ್ನ ಶಿಷ್ಯನೇ ಆಗಿರುವ ಧ್ರುವನಾರಾಯಣ್ ವಿರುದ್ಧ ಸ್ಪರ್ಧಿಸುತ್ತಿದ್ದು, ರಾಜಕೀಯದಲ್ಲಿ ಇವೆಲ್ಲ ಸರ್ವೇಸಾಮಾನ್ಯ. ಕ್ಷೇತ್ರದ ಜನರು ಚಿರಪರಿಚಿತರಾಗಿದ್ದಾರೆ. ಸ್ಥಳೀಯ ಕಾಂಗ್ರೆಸ್ ನಾಯಕರ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧವೇ ನನ್ನ ಹೋರಾಟ ಎಂದು ತಿಳಿಸಿದರು.

ಮಾಜಿ ಸಿಎಂ ಸಿದ್ದರಾಮಯ್ಯಗೆ ಟಾಂಗ್
ಕಳೆದ ಬಾರಿ ನಾನೇ ಮುಖ್ಯಮಂತ್ರಿ ಎಂದು ಬಿಂಬಿಸಿಕೊಳ್ಳುತ್ತಿದ್ದವರಿಗೆ ಇಲ್ಲಿನ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲೂ ಸಹ ಆ ದುರಹಂಕಾರಿ ನಾಯಕರಿಗೆ ಸರಿಯಾದ ಉತ್ತರ ನೀಡಲಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಶ್ರೀನಿವಾಸ್ ಪ್ರಸಾದ್ ಪರೋಕ್ಷವಾಗಿ ಟಾಂಗ್ ನೀಡಿದರು.

ಮಂತ್ರಿಮಂಡಲದಿಂದ ಕೈಬಿಟ್ಟವರ ಸ್ಥಿತಿ ಏನಾಯ್ತು?
ಉಪ ಚುನಾವಣೆಯ ಸೇಡು ಮುಗಿದಿದೆ. ಸೇಡನ್ನು ತೀರಿಸಿಕೊಂಡಿರುವ ಭಾವನೆ ನನ್ನಲ್ಲಿ ಬಂದಿದೆ. ಉಪಚುನಾವಣೆಯಲ್ಲಿ ಮನಸಿಗಾದ ನೋವನ್ನು ವಿಧಾನಸಭಾ ಚುನಾವಣೆಯಲ್ಲಿ ತೀರಿಸಿಕೊಂಡಿದ್ದೇನೆ. ಯಾರೂ ನನ್ನನ್ನು ಮಂತ್ರಿಮಂಡಲದಿಂದ ಕೈಬಿಟ್ಟರು ಅವರ ಸ್ಥಿತಿ ಏನಾಗಿದೆ ಎಂದು ನೋಡಿದ್ದೀರಿ ಎಂದು ಶ್ರೀನಿವಾಸ್ ಪ್ರಸಾದ್ ಟೀಕಿಸಿದರು.

ಸ್ಪರ್ಧೆ ಮಾಡಲು ಒತ್ತಾಯ ಬಂದಿತ್ತು
ಲೋಕಸಭಾ ಚುನಾವಣೆಗೆ ನಿಂತು 20 ವರ್ಷಗಳಾಗಿತ್ತು ಎಂದ ಶ್ರೀನಿವಾಸ್ ಪ್ರಸಾದ್ 2004 ಮತ್ತು 2009 ರಲ್ಲೂ ಸ್ಪರ್ಧೆ ಮಾಡಲು ಒತ್ತಾಯ ಬಂದಿತ್ತು. ಅಂದು ಅದನ್ನು ನಿರಾಕರಿಸಿದ್ದೆ. 13 ಚುನಾವಣೆ ಸ್ಪರ್ಧೆ ಮಾಡಿ ಸಾಕಾಗಿತ್ತು. ಬೇಡ ಅಂತಲೇ ಈ ಬಾರಿಯೂ ಇದ್ದೆ ಎಂದರು.

ಒಳ್ಳೆಯ ದಿನ ನಾಮಪತ್ರ ಸಲ್ಲಿಸುತ್ತೇನೆ
ಯಾರೂ ಒಪ್ಪದೆ ಚುನಾವಣೆಗೆ ನಿಲ್ಲುವಂತೆ ಮಾಡಿದ್ದಾರೆ. ಬರುವ 26 ರೊಳಗೆ ನಾಮಪತ್ರ ಸಲ್ಲಿಸಲೇಬೇಕಿದೆ. ಎಲ್ಲರ ಜೊತೆ ಮಾತನಾಡಿ ಒಳ್ಳೆಯ ದಿನ ನಾಮಪತ್ರ ಸಲ್ಲಿಸುತ್ತೇನೆ ಎಂದು ಶ್ರೀನಿವಾಸ್ ಪ್ರಸಾದ್ ತಿಳಿಸಿದರು.












Click it and Unblock the Notifications