• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಕ್ರೀದ್ ವಿಶೇಷ: ಮೈಸೂರಿನಲ್ಲಿ 7 ಸಾವಿರದಿಂದ 80 ಸಾವಿರದ ತನಕ ಕುರಿ ಮಾರಾಟಕ್ಕೆ

|

ಮೈಸೂರು, ಆಗಸ್ಟ್ 11: "ಈ ಜೋಡಿ ಕುರಿಗೆ 32 ಸಾವಿರ ಕೊಡಿ. ಅದಕ್ಕಿಂತ ಕಡಿಮೆ ಬೆಲೆಗೆ ಸಾಧ್ಯವಿಲ್ಲ" ಎಂದು ವ್ಯಾಪಾರಿ ಹೇಳಿದಾಗ, ಗ್ರಾಹಕರು ಅಲ್ಲಿ ಕಟ್ಟಿ ಹಾಕಿದ್ದ ಕುರಿಗಳನ್ನು ನಿಧಾನವಾಗಿ ಗಮನಿಸುತ್ತಾರೆ. "ಉಣ್ಣೆ ತುಂಬಿರುವುದರಿಂದ ದಪ್ಪ ಕಾಣಿಸ್ತಿದೆ. ನೀನು ಹೇಳಿದ ರೇಟ್ ಕೊಡಲು ಆಗಲ್ಲ. ನಾನು ಕೊಡೋದು 25 ಸಾವಿರ. ಕೊಡುತ್ತೀಯೋ ಇಲ್ಲವೋ ಹೇಳಪ್ಪ" ಎನ್ನುತ್ತಾರೆ ಖರೀದಿದಾರ.

ಬಕ್ರೀದ್ ಮುನ್ನ ಮುಸ್ಲಿಮರಿಗೆ ಮೌಲಾನಾ ಮಾಡಿದ ಅಪರೂಪದ ಮನವಿ

- ನಗರದ ಬನ್ನಿಮಂಟಪ ಸರ್ಕಲ್ ಬಳಿ ಒಂದು ಸುತ್ತು ಹಾಕಿದರೆ ಕುರಿ ವ್ಯಾಪಾರಿಗಳು, ಗ್ರಾಹಕರ ನಡುವಿನ ನಡೆಯುತ್ತಿರುವ ಸಂಭಾಷಣೆಯ ಪರಿ ಇದು. ಬಕ್ರೀದ್ ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆದಿರುವ 'ಈದ್ ಉಲ್ ಅದಾ' ಹಬ್ಬ ಸೋಮವಾರ ನಡೆಯಲಿದೆ. ಹಬ್ಬದ ದಿನ ಬಲಿ ನೀಡಲು ಮುಸ್ಲಿಮರು ಕುರಿ, ಮೇಕೆಗಳನ್ನು ಖರೀದಿಸುತ್ತಾರೆ. ಹಬ್ಬಕ್ಕೆ ಒಂದು ವಾರ ಇರುವಾಗ ಕುರಿಗಳ ವ್ಯಾಪಾರ ಶುರುವಾಗುತ್ತದೆ. ಹಬ್ಬ ಸಮೀಪಿಸುತ್ತಿರುವಂತೆ ವ್ಯಾಪಾರ ಚುರುಕು ಪಡೆದುಕೊಳ್ಳುತ್ತದೆ.

ಮಂಡ್ಯ, ಶ್ರೀರಂಗಪಟ್ಟಣ, ಬನ್ನೂರು, ಪಾಂಡವಪುರ, ಕೆಆರ್ ಎಸ್, ಚಾಮರಾಜನಗರ, ಮದ್ದೂರು, ತಿ.ನರಸೀಪುರ, ಹೊಳೆನರಸೀಪುರ ಮುಂತಾದ ಕಡೆಗಳಿಂದ ವ್ಯಾಪಾರಿಗಳು ನಗರಕ್ಕೆ ಕುರಿಗಳನ್ನು ತಂದು ಮಾರಾಟ ಮಾಡುತ್ತಿದ್ದಾರೆ. ಕೆಲವು ವ್ಯಾಪಾರಿಗಳು ಪ್ರತಿ ವರ್ಷ ತಪ್ಪದೇ ಕುರಿಗಳೊಂದಿಗೆ ನಗರಕ್ಕೆ ಬರುತ್ತಾರೆ. 'ಕಳೆದ ವರ್ಷ ಆರು ಕುರಿಗಳನ್ನು ಮಾರಾಟ ಮಾಡಿದ್ದೆ. ಈ ಸಲ ನಾಲ್ಕು ಕುರಿಗಳನ್ನು ತಂದಿದ್ದೇನೆ' ಎಂದು ಮಂಡ್ಯದಿಂದ ಕುರಿಗಳನ್ನು ತೆಗೆದುಕೊಂಡು ಬಂದಿದ್ದ ಮಹದೇವ ಹೇಳಿದರು.

ರಾಜ್ಯದಾದ್ಯಂತ ಸರಳವಾಗಿ ಬಕ್ರೀದ್ ಆಚರಣೆ: ಸಂತ್ರಸ್ತರಿಗೆ ದೇಣಿಗೆ ಸಂಗ್ರಹ

"ನಾನು ಒಂದೂವರೆ ವರ್ಷ ಪ್ರಾಯದ ಕುರಿಗಳನ್ನು ತಂದಿದ್ದೇನೆ. ಒಂದೊಂದು ಕುರಿ 35 ರಿಂದ 40 ಕೆ.ಜಿ.ವರೆಗೆ ತೂಕ ಇದೆ. ಜೋಡಿಗೆ 32 ಸಾವಿರ ಸಿಗಬೇಕು. ನಾಲ್ಕೈದು ಗ್ರಾಹಕರು ಬಂದು 28 ಸಾವಿರ, 25 ಸಾವಿರಕ್ಕೆ ಕೇಳಿದರೂ ಕೊಡಲು ಮುಂದಾಗಲಿಲ್ಲ. ಪ್ರತಿ ಕುರಿಗೆ ದಿನಕ್ಕೆ 250 ರಿಂದ 300 ಗ್ರಾಂಗಳಷ್ಟು ಹುರುಳಿ ಹಾಕಬೇಕು. ಇದಕ್ಕಾಗಿ ಹಣ ಖರ್ಚಾಗುತ್ತದೆ. ಅವುಗಳಿಗೆ ರೋಗ ಬರದಂತೆ ನೋಡಿಕೊಳ್ಳಬೇಕು. ನಾಯಿ, ತೋಳಗಳ ದಾಳಿಗೆ ಸಿಗದಂತೆ ಕಾಪಾಡಬೇಕು. ಕಷ್ಟಪಟ್ಟು ಸಾಕಿದ ಕುರಿಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದಿಲ್ಲ" ಎನ್ನುತ್ತಾರೆ ವ್ಯಾಪಾರಿಗಳು.

"ಮಾಂಸದಂಗಡಿಗಳಲ್ಲಿ ಕೆ.ಜಿಗೆ 420 ರಿಂದ 440 ಕೊಟ್ಟು ಕುರಿ ಮಾಂಸ ಖರೀದಿಸುವರು. ಆದರೆ ಇಲ್ಲಿ ಸಿಕ್ಕಾಪಟ್ಟೆ ಚೌಕಾಸಿ ಮಾಡುತ್ತಾರೆ" ಎಂದು ಬೇಸರ ವ್ಯಕ್ತಪಡಿಸಿದರು.

ಈ ಬಾರಿ ಕಳೆದೊಂದು ವಾರದಿಂದ ಮಳೆಯಲ್ಲಿ ನೆನೆದಿದ್ದರಿಂದ ಜ್ವರದಿಂದಾಗಿ ಕುರಿಗಳ ತೂಕ ಕಡಿಮೆ ಆಗುತ್ತದೆ. ಇದರಿಂದ ಬೆಲೆ ಮೇಲೆ ಹೊಡೆತ ಬೀಳುತ್ತದೆ. ಕಳೆದ ವರ್ಷ 10 ಸಾವಿರದಿಂದ 1 ಲಕ್ಷವರೆಗೆ ಬೆಲೆ ಇತ್ತು. ಆದರೆ, ಈ ಬಾರಿ 7 ಸಾವಿರದಿಂದ 80 ಸಾವಿರ ಮಾತ್ರ ಇದೆ ಎನ್ನುತ್ತಿದ್ದಾರೆ ವ್ಯಾಪಾರಿಗಳು.

ಸಾಮಾನ್ಯವಾಗಿ ಬಕ್ರೀದ್ ಹಬ್ಬಕ್ಕೆ ಮಾಂಸ ಊಟವೇ ವಿಶೇಷ. ಪ್ರತಿ ವರ್ಷ ಮಟನ್ ಬಿರಿಯಾನಿ, ಕಬಾಬ್, ಚಿಕನ್ ಫ್ರೈ ವಿಶೇಷ. ಕುರಿ ಮಾಂಸವನ್ನು ಬಳಸಿಕೊಂಡು ವಿಶೇಷವಾಗಿ ತಯಾರಾಗುವ ಖಾದ್ಯ ಹೆಚ್ಚು ರುಚಿಕರವಾಗಿದ್ದು, ಒಳ್ಳೆಯ ಕುರಿಯನ್ನೇ ನೋಡಿ ಖರೀದಿಸುತ್ತಿದ್ದಾರೆ.

English summary
On the reason of Bakrid festival Sale of Sheep’s picks in Mysuru city. People are bargaining sheep price to sellers
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X