ಜೈಲು ಬಳಿಯೇ ಗಾಂಜಾ ಮಾರಾಟ: ಮೈಸೂರಲ್ಲಿ ಇಬ್ಬರ ಬಂಧನ
ಮೈಸೂರು, ಮಾರ್ಚ್ 13: ಮೈಸೂರು ಸಿಸಿಬಿ ಪೊಲೀಸರು ಗುರುವಾರ ಇಲ್ಲಿನ ಅಶೋಕ ರಸ್ತೆಯಲ್ಲಿರುವ ಕೇಂದ್ರ ಕಾರಾಗೃಹದ ಬಳಿ ಅಕ್ರಮವಾಗಿ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.
ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಆರೋಪಿಗಳಾದ ಶ್ರೀನಿವಾಸ ಬಿನ್ ಮಾದಶೆಟ್ಟಿ(50), ಎನ್.ಆರ್. ಮೊಹಲ್ಲಾ, ಮೈಸೂರು ನಗರ, ಶರತ್ ಶರತ್ ಬಾಬು ಬಿನ್ ಲೇಟ್ ಜಯರಾಮು(24), ಸಿದ್ದಲಿಂಗಪುರ ಗ್ರಾಮ, ಎಂಬುವವರು ಗಾಂಜಾ ಸಮೇತ ಸಿಕ್ಕಿ ಬಿದ್ದಿದ್ದಾರೆ. ಆರೋಪಿಗಳಿಂದ 1.5 ಕೆ.ಜಿ ತೂಕದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಶ್ರೀನಿವಾಸ್ ಮೊದಲಿನಿಂದಲೂ ಈ ದಂಧೆಯಲ್ಲಿ ತೊಡಗಿಕೊಂಡಿರುವ ಆರೋಪಿಯಾಗಿದ್ದು, ಈ ಹಿಂದೆ ಈತನ ವಿರುದ್ಧ ನಗರದ ಮಂಡಿ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ, ವಿಜಯನಗರ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ, ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ಸೇರಿದಂತೆ ಮೂರು ಪ್ರಕರಣಗಳಿವೆ.

ಇತ್ತೀಚಿಗೆ ಬೆಂಗಳೂರಿನ ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುವಾಗ ಸಿಕ್ಕಿ ಬಿದ್ದು, ಜೈಲುವಾಸ ಅನುಭವಿಸಿ 2020 ನೇ ಇಸವಿ ಜನವರಿ ತಿಂಗಳಿನಲ್ಲಿ ಜೈಲಿನಿಂದ ಹೊರಬಂದು ಮತ್ತೆ ಇದೇ ವೃತ್ತಿಯನ್ನು ಮುಂದುವರೆಸಿರುವುದು ತಿಳಿದು ಬಂದಿದೆ.
ಈ ಬಗ್ಗೆ ಸಿಸಿಬಿ ಯ ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ ಘಟಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ದಾಳಿಯಲ್ಲಿ ಸಿಸಿಬಿ ಎಸಿಪಿ ವಿ.ಮರಿಯಪ್ಪ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.












Click it and Unblock the Notifications