Karnataka vs Goa: ರಣಜಿ ಆಡಲು ಮೈಸೂರಿಗೆ ಬಂದ ಜೂನಿಯರ್ ತೆಂಡೂಲ್ಕರ್: ಮೊದಲ ದಿನ ಕರ್ನಾಟಕ ಮೇಲುಗೈ
ಮೈಸೂರು: ನಗರದ ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನ (ಗ್ರೇಡ್)ದಲ್ಲಿ ರಣಜಿ ಕ್ರಿಕೆಟ್ ಪಂದ್ಯಾವಳಿ ಪಂದ್ಯ ನಡೆಯುತ್ತಿದೆ. ಕರ್ನಾಟಕ ತಂಡ ಗೋವಾ ತಂಡವನ್ನು ಎದುರಿಸುತ್ತಿದೆ.
ಗ್ರೇಡ್ ಮೈದಾನ 2006ರಿಂದಲೂ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಾವಳಿಗಳಿಗೆ ಅತಿಥ್ಯ ನೀಡುತ್ತಿದೆ. 2010ರಲ್ಲಿ ನಡೆದ ಕರ್ನಾಟಕ ಮತ್ತು ಮುಂಬೈ ನಡುವಿನ ಫೈನಲ್ ರಣಜಿ ಸೇರಿದಂತೆ ಒಟ್ಟು 15 ರಣಜಿ ಪಂದ್ಯಗಳಿಗೆ ಅತಿಥ್ಯ ವಹಿಸಿದೆ. ಇದೀಗ ನಾಲ್ಕು ವರ್ಷಗಳ ಬಳಿಕ ರಣಜಿ ಕ್ರಿಕೆಟ್ ಆತಿಥ್ಯ ವಹಿಸುತ್ತಿದ್ದು, ಕ್ರಿಕೆಟ್ ಆಸಕ್ತರನ್ನು ಸೆಳೆಯುತ್ತಿದೆ.

ಕರ್ನಾಟಕ ಮತ್ತು ಗೋವಾ ತಂಡಗಳ ನಡುವೆ ಜ.19ರಿಂದ 22ರ ಪ್ರಸಕ್ತ ಸಾಲಿನ ಮೂರನೇ ರಣಜಿ ಪಂದ್ಯ ನಡೆಯುತ್ತಿದೆ. ಇತ್ತೀಚಿಗಷ್ಟೇ ಈ ಮೈದಾನದಲ್ಲಿ 23 ವರ್ಷದೊಳಗಿನ ಸಿ.ಕೆ.ನಾಯ್ಡು ಟ್ರೋಫಿಯ ಕರ್ನಾಟಕ ಮತ್ತು ಹೈದರಾಬಾದ್ ನಡುವೆ ನಡೆದಿತ್ತು.
ಮೈಸೂರಿನಲ್ಲಿ ಜೂನಿಯರ್ ತೆಂಡೂಲ್ಕರ್
ಮಾಜಿ ಆಟಗಾರ, ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಹಾಗೂ ಗೋವಾ ತಂಡದ ಪ್ರಮುಖ ವೇಗಿಗಳಲ್ಲಿ ಒಬ್ಬರಾಗಿರುವ ಅರ್ಜುನ್ ತೆಂಡೂಲ್ಕರ್ ಗುರುವಾರ ಬೆಳಗ್ಗೆ ಮತ್ತು ಸಂಜೆ ಗಂಗೋತ್ರಿ ಗ್ರೇಡ್ಸ್‌ನಲ್ಲಿ ಅಭ್ಯಾಸ ನಡೆಸಿದರು. ಮಾತ್ರವಲ್ಲದೇ ಪಂದ್ಯದ ಹಿನ್ನೆಲೆಯಲ್ಲಿ ವ್ಯಾಯಾಮ ಹಾಗೂ ಫಿಟ್‌ನೆಸ್‌ನಲ್ಲಿ ತೊಡಗಿಸಿಕೊಂಡರು. ಸಚಿನ್ ಪುತ್ರ ಇದೀಗ ಕ್ರಿಕಿಟ್ ಅಭಿಮಾನಿಗಳ ಆಕರ್ಷಣೆ ಕೇಂದ್ರಬಿಂದುವಾಗಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದ ತನ್ನ ಮೊದಲ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಶುಭಾರಂಭ ಮಾಡಿದ್ದ ಕರ್ನಾಟಕ, ದ್ವಿತೀಯ ಪಂದ್ಯದಲ್ಲಿ ಗುಜರಾತ್ ವಿರುದ್ಧ ಸೋಲನುಭವಿಸಿತ್ತು. ಹೀಗಾಗಿ ಗೋವಾ ವಿರುದ್ಧದ ಮೂರನೇ ಪಂದ್ಯದಲ್ಲಿ ಗೆಲುವಿನ ಲಯ ಕಂಡುಕೊಳ್ಳಲು ಮಯಾಂಕ್ ಬಳಗ ಹವಣಿಸುತ್ತಿದೆ.
ಸ್ಟಾರ್ ಆಟಗಾರರ ಆಗಮನ
ಎರಡು ತಂಡಗಳ ಆಟಗಾರರು ಜ.16 ಅಥವಾ 17ರಂದು ನಗರಕ್ಕೆ ಬಂದು ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿ ಅಭ್ಯಾಸ ಆಟಗಾರರು ಅಭ್ಯಾಸ ಮಾಡಿದರು. ಟಾಸ್ ಗೆದ್ದ ಗೋವಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಕರ್ನಾಟಕ ಉತ್ತಮ ಬೌಲಿಂಗ್ ದಾಳಿ ಸಂಘಟಿಸುವ ಮೂಲಕ ಗೋವಾ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು.
ಮೊದಲ ದಿನದಾಟದ ಅಂತ್ಯಕ್ಕೆ ಗೋವಾ 8 ವಿಕೆಟ್ ಕಳೆದುಕೊಂಡು 228 ರನ್ ಗಳಿಸಿದೆ. ಗೋವಾ ಪರವಾಗಿ ಸ್ನೇಹಲ್ ಕೌತಂಕರ್ 83 ರನ್ ಗಳಿಸಿದರೆ, ನಾಯಕ ದರ್ಶನ್ ಮಿಸಳ್ 39 ರನ್ ಗಳಿಸಿದರು. ಅರ್ಜುನ್ ತೆಂಡೂಲ್ಕರ್ ದಿನದಾಂತ್ಯದಲ್ಲಿ 10 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.
ಕರ್ನಾಟಕ ಪರವಾಗಿ ವಿಜಯ್ ಕುಮಾರ್ ವೈಶಾಖ್ ಮತ್ತು ರೋಹಿತ್ ಕುಮಾರ್ ತಲಾ 3 ವಿಕೆಟ್ ಪಡೆದರು. ವಾಸುಕಿ ಕೌಶಿಕ್ ಮತ್ತು ಮುರಳೀಧರ ವೆಂಕಟೇಶ್ ತಲಾ ಒಂದು ವಿಕೆಟ್ ಪಡೆದುಕೊಂಡರು.












Click it and Unblock the Notifications