ಕೊಡಗು ಪ್ರವಾಹ: 7000 ಜನರ ರಕ್ಷಣೆ, 10 ಸಾವು, 3 ನಾಪತ್ತೆ
ಮೈಸೂರು, ಆಗಸ್ಟ್.23: ಕೊಡಗಿನಲ್ಲಿ ಸಂಭವಿಸಿದ ಪ್ರವಾಹದಲ್ಲಿ ಈಗಾಗಲೇ 7000 ಜನರನ್ನು ರಕ್ಷಿಸಲಾಗಿದ್ದು, 10 ಜನ ಮೃತ ಪಟ್ಟು, ಮೂರು ಜನ ನಾಪತ್ತೆಯಾಗಿದ್ದಾರೆ ಎಂದು ರೇಷ್ಮೆ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾರಾ ಮಹೇಶ್ ಹೇಳಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗು ಜಿಲ್ಲೆ ಸಹಜ ಸ್ಥಿತಿಗೆ ಮರಳುತ್ತಿದೆ. ಇಂದಿನಿಂದ 40 ಶಾಲೆಗಳನ್ನು ತೆರೆಯಲಾಗಿದೆ. ಶಾಲೆಗೆ ಹೋಗಲಾಗದ ಮಕ್ಕಳಿಗೆ ನಿರಾಶ್ರಿತ ಶಿಬಿರದಲ್ಲೇ ಪಾಠ ಮಾಡಲಾಗುತ್ತದೆ. ರಾಜ್ಯಾದ್ಯಂತ ಕೊಡಗಿಗೆ ನೆರವು ಹರಿದು ಬರುತ್ತಿದ್ದು, ಸಾಂಕ್ರಾಮಿಕ ರೋಗ ಹರಡದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.

300ಕ್ಕೂ ಹೆಚ್ಚು ಬಿಬಿಎಂಪಿ ಕಾರ್ಮಿಕರನ್ನು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗಿದ್ದು, ಶೌಚಾಲಯ ಸೇರಿದಂತೆ ಇನ್ನಿತರ ಸ್ಥಳಗಳ ಶುದ್ಧೀಕರಣ ಕಾರ್ಯ ನಡೆಯತ್ತಿದೆ. ಇಂದು ಮೈಸೂರಿನ ಮಠ ಹಾಗೂ ಇನ್ನಿತರ ಸಂಘಸಂಸ್ಥೆಗಳಿಂದ 25 ಲಕ್ಷ ರೂ. ಪರಿಹಾರ ಹಣ ಸಂಗ್ರಹವಾಗಿದೆ ಎಂದು ಮಹೇಶ್ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ವರಲಕ್ಷ್ಮೀ ಹಬ್ಬದ ಪ್ರಯುಕ್ತ ರೇಷ್ಮೆ ಸೀರೆ ರಿಯಾಯಿತಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನೀತಿಸಂಹಿತೆ ಜಾರಿ ಇರುವುದರಿಂದ ಕಡಿಮೆ ದರದ ಮೈಸೂರು ರೇಷ್ಮೆ ನೀಡಲು ಸಾಧ್ಯವಾಗುತ್ತಿಲ್ಲ ಎಂದರು.












Click it and Unblock the Notifications